ಜೊಹಾಟ್ಸು - ಇದು ಹೊಸದಾಗಿ ಜೀವಿಸಬಯಸುವವರಿಗೆ ಮಾತ್ರ..
ಜಪಾನಿನ ದಶಕಗಳ ಹಿಂದಿನ ಪದ್ಧತಿಯೊಂದು ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಅದು ಜೊಹಾಟ್ಸು. ಈ ಪದದ ಅರ್ಥ ಆವಿಯಾಗುವಿಕೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ವ್ಯಕ್ತಿಯೇ ಮಂಗಮಾಯವಾಗುವ ಕಥೆ ಇದು.
ಅವರು ಇದ್ದಕ್ಕಿದ್ದಂತೆ ಕಣ್ಮರೆಯಾದರು!..
ಜೊಹಾಟ್ಸು - ಇದು ಹೊಸದಾಗಿ ಜೀವಿಸಬಯಸುವವರಿಗೆ ಮಾತ್ರ..
ಹಿಂದಿನ ರಾತ್ರಿ ಮನೆಯವರ ಜೊತೆ ಕೂತು ಊಟ ಮಾಡಿರುತ್ತಾರೆ, ಅದಕ್ಕೂ ಮೊದಲು ಎಂದಿನಂತೆ ಹೆಂಡತಿ ಜೊತೆಗೆ ಯಾವುದೋ ವಿಷಯಕ್ಕೆ ಜಗಳವಾಡಿರುತ್ತಾರೆ. ಆಫೀಸ್‌ನಲ್ಲಿ ಬಾಸ್ ಹೇಳಿದ್ದನ್ನು ಸಣ್ಣದೊಂದು ಪ್ರತಿರೋಧ ತೋರದೇ ಒಪ್ಪಿಕೊಂಡಿರುತ್ತಾರೆ.
.. ಆದರೆ, ಮರುದಿನ ಮುಂಜಾನೆ ವಾಕಿಂಗ್ ಫ್ರೆಂಡ್ಸ್ ಆ ವ್ಯಕ್ತಿ ಇವತ್ತು ಬಂದಿಲ್ಲ ಅನ್ನುವುದನ್ನು ಗುರುತಿಸುತ್ತಾರೆ. ನಾನು ಏಳೋಕೂ ಮುಂಚೆ ಈ ಆಸಾಮಿ ಎತ್ತ ಹೋದನಪ್ಪಾ ಅಂತ ಬೆಳಬೆಳಗ್ಗೇ ಹೆಂಡತಿಗೆ ತಲೆ ಕೆಡುತ್ತದೆ. ಯಾವ ಕಾರಣವನ್ನೂ ಕೊಡದೆ ರಜೆ ಹಾಕಿದ ಆಸಾಮಿ ಬಗ್ಗೆ ಬಾಸ್ ಪಿತ್ತ ನೆತ್ತಿಗೇರುತ್ತದೆ.
ಆದರೆ ಇವರ್ಯಾರಿಗೂ ಗೊತ್ತಿಲ್ಲ, ಆ ಆಸಾಮಿ ಇನ್ಯಾವತ್ತೂ ಇವರ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಎಂಬ ನಗ್ನಸತ್ಯ.
ಇದು ‘ಜೊಹಾಟ್ಸು’. ಜಪಾನಿನ ಜನಕ್ಕೆ ಚಿರಪರಿಚಿತ ಹೆಸರು. ‘ಜೊಹಾಟ್ಸು’ ಎಂದರೆ ಆವಿಯಾಗುವುದು ಎನ್ನುವ ಅರ್ಥ. ಜನ ಆವಿಯಂತೆ ಮಾಯವಾಗುವ ಕಥೆ ಇದು. ಪೊಲೀಸರು, ಸ್ಪೈಗಳು, ಯಾರೇ ಎಷ್ಟೇ ಟ್ರೇಸ್ ಮಾಡಿದರೂ ಇವರು ಜೀವಂತವಾಗಿ ಆಗಲಿ, ಹೆಣವಾಗಿ ಆಗಲಿ ಆ ಜನರಿಗೆ ಮತ್ತೆ ಕಾಣಸಿಗುವುದಿಲ್ಲ.
‘ಜೊಹಾಟ್ಸು’ ಬಗ್ಗೆ ಡಾಕ್ಯುಮೆಂಟರಿ ಬಂದಿದೆ. ಈ ಕಥೆ ಸಿನಿಮಾವೂ ಆಗಿದೆ. ಆದರೂ ಜಪಾನಿನ ಈ ಹಳೆಯ ಪದ್ಧತಿ ಜಗತ್ತಿನ ಬೇರೆ ಭಾಗದ ದೇಶಗಳಿಗೆ ಅಪರಿಚಿತ.
ನಮ್ಮಲ್ಲಿ ಮದುವೆ ಕಾರಣಕ್ಕೆ, ಸಾಲ ತೀರಿಸಲಾಗದೇ ವರ್ಷ ವರ್ಷ ಅನೇಕರು ಜೀವ ತೆಗೆದುಕೊಳ್ಳುತ್ತಾರೆ. ಅಂಥವರಿಗೆ ಜೀವಿಸಲು ಹೊಸ ಅವಕಾಶ ನೀಡುವ ಪದ್ಧತಿಯೇ ಈ ‘ಜೊಹಾಟ್ಸು’.
ಈ ವಿಚಾರದ ಬಗ್ಗೆ ಡೀಟೇಲಾಗಿ ಹೇಳುವ ಮೊದಲು ಇದರ ಚರಿತ್ರೆಯನ್ನೊಮ್ಮೆ ನೋಡಿ ಬರೋಣ.
ಅದು ಅರವತ್ತರ ದಶಕ. ಆಗ ಡಿವೋರ್ಸ್ ಜಪಾನ್ ದೇಶದಲ್ಲಿ ಅಷ್ಟಾಗಿ ಬಳಕೆಯಲ್ಲಿರಲಿಲ್ಲ. ಒಲ್ಲದ ಮದುವೆಯಿಂದ ಮನನೊಂದ ಗಂಡಸೋ, ಹೆಂಗಸೋ ರಾತ್ರೋ ರಾತ್ರೋ ನಾಪತ್ತೆಯಾಗಿ ಬಿಡುತ್ತಿದ್ದರು. ಎಲ್ಲಿ ಹೇಗೆ ಹುಡುಕಿದರೂ ಪತ್ತೆ ಆಗುತ್ತಿರಲಿಲ್ಲ.
ಮುಂದೆ 90ರ ದಶಕದಲ್ಲಿ ಜಪಾನಿನಲ್ಲಿ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡರು. ಅನೇಕರು ತೀರಿಸಲಾಗದ ಸಾಲದಿಂದ ಅರೆಜೀವವಾದರು. ಅಂಥವರಿಗೆ ಆಶಾಕಿರಣವಾದದ್ದು ಈ ಜೊಹಾಟ್ಸು.
ಈಗ ಕೆಲವು ಮಂದಿ ಹೊಸ ಜೀವಿತಕ್ಕಾಗಿಯೇ ಇದನ್ನು ಆಯ್ಕೆ ಮಾಡೋದುಂಟು. ಈ ಲೈಫ್ ಬೋರಾಯ್ತು, ಹೊಸದೇನಾದರೂ ಮಾಡೋಣ ಅನ್ನೋ ಕ್ರೇಜಿಗಳು ಜೊಹಾಟ್ಸುಗೆ ಜೈ ಅನ್ನುತ್ತಾರೆ.
ಬಾಕ್ಸ್
ಜೊಹಾಟ್ಸು ಅಂದರೆ ಓಡಿಹೋಗೋದಾ?
ಇದಕ್ಕೆ ಉತ್ತರ ಹೌದು ಅಥವಾ ಅಲ್ಲ. ಸಂಕಷ್ಟದಲ್ಲಿರುವ ವ್ಯಕ್ತಿ ರಾತ್ರೋ ರಾತ್ರಿ ಮನೆಯಿಂದ ಹೊರಬೀಳುವುದು. ಮರುದಿನದಿಂದ ಹೊಸ ವ್ಯಕ್ತಿಯಾಗಿ ಜೀವಿತ ಆರಂಭಿಸುವುದು. ಅಂದರೆ ತನ್ನ ಹಳೆಯ ಐಡೆಂಟಿಟಿಯಿಂದ ಸಂಪೂರ್ಣವಾಗಿ ಕಳಚಿಕೊಂಡು ಹೊಸ ವ್ಯಕ್ತಿಯಾಗಿ ಜೀವನ ಶುರು ಮಾಡುವುದು.
ಬಾಕ್ಸ್ 2
ಇದು ಹೇಗೆ ಸಾಧ್ಯವಾಗುತ್ತದೆ?
ಇಂಥಾ ವ್ಯಕ್ತಿಗಳಿಗೆ ಸಹಾಯ ಮಾಡಲೆಂದೇ ಒಂದಿಷ್ಟು ಜನರಿರುತ್ತಾರೆ. ಅವರು ರಾತ್ರೋ ರಾತ್ರಿ ಈ ವ್ಯಕ್ತಿಯನ್ನು ಒಂದೂರಿನಿಂದ ದೂರದ ಇನ್ನೊಂದು ಸ್ಥಳಕ್ಕೆ ಶಿಫ್ಟ್ ಮಾಡುತ್ತಾರೆ. ಅವರ ಹೊಸ ಬದುಕಿಗೆ ಬೇಕಾದ ಎಲ್ಲ ಸೌಕರ್ಯ ಒದಗಿಸಿಕೊಡುತ್ತಾರೆ. ಮರುದಿನದಿಂದ ಆ ವ್ಯಕ್ತಿ ತನ್ನ ಹೊಸ ಜೀವಿತ ಆರಂಭಿಸಬಹುದು.
ಬಾಕ್ಸ್
ಆಧುನಿಕ ಕಂಪನಿಗಳು
ಹಿಂದೆಲ್ಲ ವ್ಯಕ್ತಿಗಳು ಹೊಸ ಜೀವನಕ್ಕೆ ಸಹಾಯ ಮಾಡುತ್ತಿದ್ದರೆ ಈಗ ಅವಕ್ಕೆಂದೇ ಜಪಾನಿನಲ್ಲಿ ಕಂಪನಿಗಳು ಹುಟ್ಟಿಕೊಂಡಿವೆ. ನೈಟ್ ಮೂವರ್ಸ್ ಅಥವಾ ಯೊನಿಗೆ-ಯ ಅನ್ನುವ ಕಂಪನಿಗಳು ಜಪಾನಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿವೆ.
------------------------------------------------------------
ಹೊಸ ಜೀವಿತದ ಎರಡು ಕಥೆಗಳು
------------------------------------------------------------
1. ಬದುಕಿನ ಆಟ ಬಲ್ಲವರ್ಯಾರು : ಹರೂಟೋ
ಜಮೀನಿನ ಮೇಲೆ ಸಾಲ ಪಡೆದಿದ್ದೆ. ಪ್ರವಾಹದಿಂದ ಬೆಳೆ ಹೋಯಿತು, ಅದಕ್ಕೂ ಹಿಂದಿನ ವರ್ಷ ವಿಚಿತ್ರ ಮಿಡತೆಗಳ ದಾಳಿಗೆ ನನ್ನ ಬೆಳೆ ನಾಶವಾಯಿತು. ಸಾಲ ಕೊಟ್ಟವರು ದಿನನಿತ್ಯ ಪೀಡಿಸುತ್ತಿದ್ದರು. ತೋಟವನ್ನು ಮಾರಾಟ ಮಾಡಲು ಕಾನೂನಿನ ತೊಡಕಿತ್ತು. ಸಾಲ ತೀರಿಸುವ ಎಲ್ಲ ದಾರಿಗಳೂ ಮುಚ್ಚಿ ಹೋಗಿದ್ದವು. ಅದೊಂದು ದಿನ ಜೀವ ಕಳೆದುಕೊಳ್ಳಲು ತೀರ್ಮಾನಿಸಿದ್ದ ನನ್ನನ್ನು ತಡೆದದ್ದು ನನ್ನ ಬಾಲ್ಯದ ಸ್ನೇಹಿತ. ಆತ ನನಗೆ ಹೊಸ ವ್ಯಕ್ತಿಯೊಬ್ಬನನ್ನು ಪರಿಚಯಿಸಿದ. ಅವನ ಹೆಸರು ರೆನ್. ಆತ ಹೊಸ ಬದುಕಿನ ಸಲಹೆ ನೀಡಿದ. ಆ ಹೊತ್ತಿಗೆ ನನಗದು ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತಿತ್ತು. ಬದುಕಲ್ಲಿ ಕಷ್ಟ ಬಂದಾಗ ಜೀವ ಕಳೆದುಕೊಳ್ಳುವ ಬದಲು ಹೊಸತಾಗಿ ಜೀವಿಸಲು ಅದನ್ನೊಂದು ಅವಕಾಶ ಅಂತ ಭಾವಿಸಬಹುದು ಎಂಬುದನ್ನು ಕಲಿಸಿಕೊಟ್ಟಿತು.
ಟೋಕಿಯೋದ ಶಿಬುಯಾದಲ್ಲಿ ನನ್ನ ಹೊಸ ಕೆಲಸ. ಅದಕ್ಕೆ ಬೇಕಿದ್ದ ಟ್ರೈನಿಂಗ್ ಅನ್ನೂ ನನ್ನನ್ನು ಕರೆತಂದ ಆ ವ್ಯಕ್ತಿಯ ಕಂಪನಿಯೇ ನೀಡಿತ್ತು.
ನಗರದ ಹೊರಗಿದ್ದ ಬಹುದೊಡ್ಡ ಮನರಂಜನಾ ತಾಣವದು. ಅರಮನೆಯ ವಿನ್ಯಾಸದಲ್ಲಿದ್ದ ಆ ಬಹುಮಹಡಿ ಕಟ್ಟಡದ ಐದನೇ ಫ್ಲೋರಿನಲ್ಲಿ ನನ್ನ ಕೆಲಸ. ಪಾಸ್‌ಪೋರ್ಟ್, ವೀಸಾ ಇಲ್ಲದೆ ಅಕ್ರಮವಾಗಿ ಬರುತ್ತಿದ್ದ ಸಿರಿವಂತರಿಗೆ ಬಟ್ಲರ್ ಆಗಿ ಕೆಲಸ ಮಾಡಬೇಕಿತ್ತು. ಅವರು ಬೆಲ್ ಮಾಡಿದ ಕೂಡಲೇ ಹೋಗಿ ಅವರಿಗೆ ಬೇಕಾದ ತಿನಿಸು ಸಪ್ಲೈ ಮಾಡುತ್ತಿದ್ದೆ. ಸವಿಯಾಗಿ ಮಾತನಾಡುತ್ತಿದ್ದೆ. ಅವರ ಮನಸ್ಸಿಗೆ ಮುದ ನೀಡಿದಷ್ಟೂ ನನಗೆ ಹೆಚ್ಚೆಚ್ಚು ಟಿಪ್ಸ್ ಸಿಗುತ್ತಿತ್ತು. ಅವರನ್ನು ಕೃತಕ ಗುಲಾಬಿ ತೋಟವಿದ್ದ ಜಾಗಕ್ಕೆ ಕರೆದೊಯ್ದು, ಹೆಣ್ಮಕ್ಕಳಾಗಿದ್ದರೆ ಲೈಟಾಗಿ ಫ್ಲರ್ಟ್ ಮಾಡುತ್ತಿದ್ದೆ. ಹುಡುಗರಿಗೆ ರಂಗು ರಂಗಿನ ಕತೆ ಹೇಳುತ್ತಿದ್ದೆ. ಹೊಸ ಬಗೆಯ ಕಾಕ್‌ಟೇಲ್ ನೀಡುತ್ತಿದ್ದೆ.
ಇದರ ಜೊತೆಗೆ ಒಂದೆರಡು ಮಹಡಿಗಳ ಕೆಳಗೆ ವಿಶೇಷ ಕೋಣೆಗಳಿದ್ದವು. ಅಲ್ಲಿ ಸುಂದರ, ಸುಂದರಿಯರ ಶಯನ ಸೇವೆಯೂ ಲಭ್ಯವಿತ್ತು.
ಮಧ್ಯ ವಯಸ್ಸಿನ ಹೆಂಗಸರು ತಮ್ಮ ಬದುಕಿನ ಕತೆ ಹೇಳಿದರೆ ಕೇಳಿಸಿಕೊಳ್ಳುತ್ತಿದ್ದೆ. ಅವರನ್ನು ಹರೆಯದ ಹುಡುಗಿಯರಂತೆ ನಡೆಸಿಕೊಂಡರೆ ಖುಷಿಪಡುತ್ತಿದ್ದರು. ಕೆಲವೊಬ್ಬರು ನನ್ನಿಂದ ಗಾಢ ಅಪ್ಪುಗೆ ಪಡೆಯುತ್ತಿದ್ದರು.
ಹೊಸ ಐಡೆಂಟಿಟಿಯ ಬದುಕಿನಲ್ಲಿ ಹುರುಪು ತುಂಬಿದೆ. ನನ್ನ ಹಳೆಯ ಎಲ್ಲ ಸಂಪರ್ಕಗಳೂ ಕಟ್ ಆಗಿದ್ದ ಕಾರಣ ಆ ನೆನಪುಗಳು ಮಾಸುತ್ತ ಬಂದವು. ಈಗ ನೊಂದ ಜೀವಗಳಿಗೆ ಭರವಸೆ ತುಂಬ ಬಲ್ಲಷ್ಟು ಮಾಗಿದ್ದೇನೆ.
2.
ನೋರ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದವನು. ಒಂದು ದಿನ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ಕೆಲಸ ಹೋಗಿದೆ ಅಂತ ಮನೆಯಲ್ಲಿ ಹೇಳಿದರೆ ಆಮೇಲಿನ ಸನ್ನಿವೇಶವನ್ನು ಎದುರಿಸುವುದು ಅವನಿಗೆ ದುಃಸ್ವಪ್ನವಾಗಿತ್ತು. ಪ್ರತೀ ದಿನ ಬೆಳಗ್ಗೆ ಶರ್ಟ್ ಟೈ ಸಿಕ್ಕಿಸಿಕೊಂಡು ರೆಡಿಯಾಗುತ್ತಿದ್ದ. ಹೆಂಡತಿಗೆ ಚುಂಬಿಸಿ ಗುಡ್‌ಬೈ ಹೇಳುತ್ತಿದ್ದ. ಆಫೀಸಿನ ಕಡೆ ಡ್ರೈವ್ ಮಾಡುತ್ತಿದ್ದ. ಆಮೇಲೆ ಇಡೀ ದಿನ ಕಾರಿನಲ್ಲೇ ಇದ್ದು ಬಿಡುತ್ತಿದ್ದ. ಕೆಲವೊಮ್ಮೆ ಕಾರಲ್ಲೇ ಕುಡಿದು ಮನೆಗೆ ಬರುತ್ತಿದ್ದ. ಆಫೀಸಿನವರ ಜೊತೆಗೆ ಪಾರ್ಟಿ ಮಾಡಿದ್ದೆ ಅನ್ನೋದನ್ನು ಮನೆಯವರಿಗೆ ನಂಬಿಸಬೇಕಿತ್ತು.
ಕ್ರಮೇಣ ಆತನ ಸಂಬಳದ ಹಣ ಕರಗತೊಡಗಿತು. ಸುಳ್ಳನ್ನು ಮುಂದುವರಿಸಲಾಗಲಿಲ್ಲ. ನೋರ್ ಕೂಡ ಗಾಳಿಯಲ್ಲಿ ಕರಗಿದಂತೆ ಕರಗಿಹೋದ. ಆರಂಭದಲ್ಲಿ ನೋರ್ ನಾಪತ್ತೆಯಾಗಿದ್ದು, ಕುಟುಂಬಕ್ಕೆ ಸಮಾಜಕ್ಕೆ ಮರ್ಯಾದೆಯ ಪ್ರಶ್ನೆಯಾಗಿ ಕಾಡಿತು. ಕ್ರಮೇಣ ಟೋಕಿಯೋ ಸಮಾಜದಿಂದ ಆ ವ್ಯಕ್ತಿಯ ಅಸ್ತಿತ್ವ ಅಳಿಸುತ್ತ ಹೋಯಿತು.
ನೋರ್ ಕಟ್ಟಡ ಕಾರ್ಮಿಕನಾಗಿ ದುಡಿಮೆ ಆರಂಭಿಸಿದ್ದ. ಇತರ ಕೆಲಸಗಾರರೊಂದಿಗೆ ಚಿಕ್ಕ ರೂಮಿನಲ್ಲಿ ಉಳಿದುಕೊಳ್ಳಬೇಕಿತ್ತು. ಆದರೂ ಮೈ ತುಂಬ ಕೆಲಸ, ಸ್ವಾತಂತ್ರ್ಯ ಅನ್ನೋದಿತ್ತಲ್ಲ, ಅದು ಅವನ ದುಃಸ್ವಪ್ನ ಕರಗಿಸಿ ರಾತ್ರಿ ನಿದ್ದೆ ಬರುವ ಹಾಗೆ ಮಾಡುತ್ತಿತ್ತು. ಶುರು ಶುರುವಲ್ಲಿ ಬಿಡುವು ಸಿಕ್ಕಾಗ ಮನಸ್ಸು ಉದ್ವಿಗ್ನಗೊಳ್ಳುತ್ತಿತ್ತು. ಕ್ರಮೇಣ ಆತ ತನ್ನ ಬಾಲ್ಯದ ಹವ್ಯಾಸ ಬರವಣಿಗೆಯನ್ನು ಮುಂದುವರಿಸಿತೊಡಗಿದ. ಮನಸ್ಸು ಹಗುರಾಯಿತು. ಹೊಸತನ ಬದುಕನ್ನು ಹಿತವಾಗಿಸತೊಡಗಿತು.