ನಾಸಿರ್ ಸಜಿಪ
ಸುಮಾರು ಒಂದು ದಶಕದಿಂದಲೂ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಬರ ಎದುರಿಸುತ್ತಿರುವ 8 ಬಾರಿ ಚಾಂಪಿಯನ್ ಕರ್ನಾಟಕ, ಈ ಬಾರಿ ಹೇಗಾದರೂ ಮಾಡಿ ಮತ್ತೊಮ್ಮೆ ಕಿರೀಠ ಮುಡಿಗೇರಿಸಬೇಕೆಂಬ ದೃಢ ನಿಶ್ಚಯ ಮಾಡಿಕೊಂಡಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮಾಡಿದ ಮೊದಲ ಕೆಲಸ ತಂಡದಲ್ಲಿ ಮೇಜರ್ ಸರ್ಜರಿ. ಜ.5ರಿಂದ ಆರಂಭಗೊಳ್ಳಲಿರುವ ಮುಂದಿನ ಋತುವಿನ ಟೂರ್ನಿಗೆ ಕೆಎಸ್‌ಸಿಎ ನಾಲ್ವರು ಯುವ ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದು, ದೇಸಿ ಕ್ರಿಕೆಟ್‌ನಲ್ಲಿ ಮಿಂಚಲು ವೇದಿಕೆ ಒದಗಿಸಿಕೊಟ್ಟಿದೆ.ಬುಧವಾರ ಕೆಎಸ್‌ಸಿಎ 16 ಮಂದಿಯ ತಂಡ ಪ್ರಕಟಿಸಿದಾಗ ಹಲವರಿಗೆ ಅಚ್ಚರಿ ಕಾದಿತ್ತು. ಈ ವರೆಗೂ ನಿರಂತರವಾಗಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಲ ಆಟಗಾರರು ಪಟ್ಟಿಯಿಂದ ಹೊರಬಿದ್ದಿದ್ದರು. ಆದರೆ ಕೆಎಸ್‌ಸಿಎ ಕಿರಿಯರ ಲೀಗ್, ಡಿವಿಷನ್‌ಗಳಲ್ಲಿ ಮಿಂಚಿದ್ದ ಸ್ಪಿನ್ನರ್‌ಗಳಾದ ರೋಹಿತ್ ಕುಮಾರ್, ಶಶಿಕುಮಾರ್, ವಿಕೆಟ್ ಕೀಪರ್ ಸುಜಯ್ ಸತೇರಿ, ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕಿಶಾನ್ ಬೆದಾರೆಗೆ ಮೊದಲ ಬಾರಿಗೆ ಅವಕಾಶ ನೀಡಿದೆ.
ರೋಹಿತ್‌ಗೆ ಒಲಿದ ಅದೃಷ್ಟಹುಬ್ಬಳ್ಳಿಯ 23 ವರ್ಷದ ರೋಹಿತ್ ಇದೇ ಮೊದಲ ಬಾರಿ ಕರ್ನಾಟಕ ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಎಡಗೈ ಆಫ್ ಸ್ಪಿನ್ನರ್ ಆಗಿರುವ ರೋಹಿತ್ ಈ ಮೊದಲು ಅವರು ಕರ್ನಾಟಕ ಅಂಡರ್-25 ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 10 ಪಂದ್ಯಗಳಲ್ಲಿ 60 ವಿಕೆಟ್ ಕಬಳಿಸಿ ಕೆಎಸ್‌ಸಿಎ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಅವರು ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
-ರೋಹಿತ್ ಕುಮಾರ್
ಶರತ್ ಬದಲು ಸುಜಯ್
-ಸುಜಯ್ ಸತೇರಿ
ಮೈಸೂರಿನ ಕಿಶನ್ ಬೆದರೆ ಈ ಮೊದಲು 2022ರಲ್ಲಿ ರಾಜ್ಯ ರಣಜಿ ತಂಡಕ್ಕೆ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಅವಕಾಶ ಬಾಚಿಕೊಳ್ಳುವ ಕಾತರದಲ್ಲಿದ್ದಾರೆ. ಅವರು ಅಂಡರ್-25 ಟೂರ್ನಿಯಲ್ಲಿ 2022ರಲ್ಲಿ 4 ಪಂದ್ಯಗಳಲ್ಲಿ 2 ಶತಕ ಸೇರಿ 500 ರನ್ ಗಳಿಸಿದ್ದು, ಈ ವರ್ಷ 7 ಪಂದ್ಯಗಳಲ್ಲಿ 1 ಸೆಂಚುರಿ ಸಹಿತ 480 ರನ್ ಚಚ್ಚಿದ್ದಾರೆ. ಮೊದಲ ಡಿವಿಷನ್‌ನಲ್ಲೂ ಅವರ ದಾಖಲೆ ಉತ್ತಮವಾಗಿದ್ದು, 6 ಪಂದ್ಯಗಳಲ್ಲಿ 2 ಶತಕದೊಂದಿಗೆ 480 ರನ್ ಗಳಿಸಿದ್ದಾರೆ.
2022ರಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಆಯ್ಕೆಯಾದಾಗ ಆಡುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಮತ್ತೊಮ್ಮೆ ತಂಡಕ್ಕೆ ಆಯ್ಕೆ ಮಾಡಿದ್ದು ಖುಷಿ ನೀಡಿದೆ. ಆಡುವ ಅವಕಾಶ ಸಿಗುವ ಭರವಸೆ ಇದೆ. ಕಠಿಣ ಅಭ್ಯಾಸದೊಂದಿಗೆ ರಾಜ್ಯ ತಂಡದಲ್ಲಿ ಹಲವು ಪಂದ್ಯಗಳನ್ನು ಆಡುವ ಬಯಕೆಯಿದೆ.
ಸ್ಪಿನ್ನರ್ ಶಶಿಗೂ ಚಾನ್ಸ್
ಈ ಬಾರಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಮತ್ತೋರ್ವ ಆಟಗಾರ ಆಫ್ ಸ್ಪಿನ್ನರ್ ಶಶಿಕುಮಾರ್. ಕಲಬುರಗಿಯ 21 ವರ್ಷದ ಶಶಿಕುಮಾರ್ ಕೆಎಸ್‌ಸಿಎ ಆಯೋಜಿಸುವ ಕಿರಿಯರ ಕೂಟಗಳಲ್ಲಿ ಮಿಂಚಿದ್ದು, ಹಿರಿಯರ ತಂಡದಲ್ಲೂ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.---ಗೌತಮ್, ಶರತ್ ಇಲ್ಲ:ನಿಕಿನ್ ಉಪನಾಯಕ!
2012ರಿಂದಲೂ ರಾಜ್ಯ ತಂಡದಲ್ಲಿರುವ ಕೆ.ಗೌತಮ್ ಈ ಬಾರಿ ತಂಡದಿಂದ ಹೊರಬಿದ್ದಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಬಿ.ಆರ್.ಶರತ್‌ಗೆ ಮತ್ತಷ್ಟು ಅವಕಾಶ ನೀಡಲು ಆಯ್ಕೆ ಸಮಿತಿ ಮನಸ್ಸು ಮಾಡಿಲ್ಲ. ಅವರೊಂದಿಗೆ ತಂಡದಿಂದ ಹೊರಬಿದ್ದ ಮತ್ತೋರ್ವ ಆಟಗಾರ ಜಗದೀಶ್ ಸುಚಿತ್. ಈ ನಡುವೆ ಮಯಾಂಕ್ ಅಗರ್‌ವಾಲ್ ಮುನ್ನಡೆಸಲಿರುವ ರಾಜ್ಯ ತಂಡಕ್ಕೆ 23 ವರ್ಷದ ನಿಕಿನ್ ಜೋಸ್‌ಗೆ ಉಪನಾಯಕತ್ವದ ಪಟ್ಟ ನೀಡಲಾಗಿದೆ. ಅವರು ಕಳೆದ ವರ್ಷವಷ್ಟೇ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, ಹಲವು ಹಿರಿಯರನ್ನು ಹಿಂದಿಕ್ಕಿ ಉಪನಾಯಕನ ಸ್ಥಾನ ಪಡೆದುಕೊಂಡಿದ್ದಾರೆ.