ಹತ್ತು ವರ್ಷದ ಆರವ್ ಸುರೇಕಾ (ರಾಯೋ ರೇಸಿಂಗ್) ರಾಷ್ಟ್ರೀಯ ರೇಸಿಂಗ್ ವೇದಿಕೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು, ಕೊಯಮತ್ತೂರಿನ ಕೋಸ್ಟ್‌ (CoASTT) ಕಾರ್ಟಿಂಗ್ ಸರ್ಕ್ಯೂಟ್‌ನಲ್ಲಿ ಭಾನುವಾರ ತಡರಾತ್ರಿ ನಡೆದ ಮೆಕೊ ಮೆರಿಟಸ್ ಕಪ್‌ನ 'ಮೈಕ್ರೋ ಮ್ಯಾಕ್ಸ್' ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮುಂಬೈನ ಆರವ್‌ಗೆ ಚಾಂಪಿಯನ್ ಪಟ್ಟ

ಕೊಯಮತ್ತೂರು: ಹತ್ತು ವರ್ಷದ ಆರವ್ ಸುರೇಕಾ (ರಾಯೋ ರೇಸಿಂಗ್) ರಾಷ್ಟ್ರೀಯ ರೇಸಿಂಗ್ ವೇದಿಕೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು, ಕೊಯಮತ್ತೂರಿನ ಕೋಸ್ಟ್‌ (CoASTT) ಕಾರ್ಟಿಂಗ್ ಸರ್ಕ್ಯೂಟ್‌ನಲ್ಲಿ ಭಾನುವಾರ ತಡರಾತ್ರಿ ನಡೆದ ಮೆಕೊ ಮೆರಿಟಸ್ ಕಪ್‌ನ ''ಮೈಕ್ರೋ ಮ್ಯಾಕ್ಸ್'' ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮುಂಬೈನ ಈ ಬಾಲಕ ಕೇವಲ 2 ಅಂಕಗಳ ಅಲ್ಪ ಮುನ್ನಡೆಯೊಂದಿಗೆ ಅಂತಿಮ ದಿನಕ್ಕೆ ಪ್ರವೇಶಿಸಿದ್ದರು. ಅಂತಿಮವಾಗಿ ಅವರು ಎರಡನೇ ಮತ್ತು ಐದನೇ ಸ್ಥಾನಗಳನ್ನು ಪಡೆದು, ಒಟ್ಟು 78 ಅಂಕಗಳೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬೆಂಗಳೂರಿನ ಜಿದಾನ್ ಅನೀಸ್ (ಪೆರೆಗ್ರಿನ್ ರೇಸಿಂಗ್; 72 ಅಂಕಗಳು) ಮತ್ತು ಕೊಲ್ಹಾಪುರದ ಆಯಾನ್ಶ್ ಪಾಟೀಲ್ (ಎಮ್‌ಸ್ಪೋರ್ಟ್; 72 ಅಂಕಗಳು) ಅವರನ್ನು ಹಿಂದಿಕ್ಕಿ ಆರವ್ ಈ ಸಾಧನೆ ಮಾಡಿದರು.

ಇದಕ್ಕೂ ಮುನ್ನ ನಡೆದ ಸುತ್ತುಗಳಲ್ಲಿ ಅವರು ಒಮ್ಮೆ ಪ್ರಥಮ ಹಾಗೂ ಒಮ್ಮೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ಸ್ಪಷ್ಟ ವಿಜೇತರಾಗಿ ಹೊರಹೊಮ್ಮಿದ್ದರು. ಈ ವಯೋಮಿತಿಯಲ್ಲಿ ದೇಶದ ಅತ್ಯುತ್ತಮ ರೇಸರ್‌ಗಳ ವಿರುದ್ಧ ಸ್ಪರ್ಧಿಸಿದ್ದ ಆರವ್, ತಮ್ಮ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಅದ್ಭುತ ಧೈರ್ಯವನ್ನು ಪ್ರದರ್ಶಿಸಿದರು.

ದಿನದ ಆರಂಭವು ಆರವ್ ಅವರಿಗೆ ಉತ್ತಮವಾಗಿತ್ತು. ಅವರು ಬೆಂಗಳೂರಿನ ಜಿದಾನ್ ಅನೀಸ್ ಅವರಿಗಿಂತ ಕೇವಲ 0.019 ಸೆಕೆಂಡ್‌ಗಳಷ್ಟು ಹಿನ್ನಡೆ ಅನುಭವಿಸಿ ಎರಡನೇ ಸ್ಥಾನದಲ್ಲಿ ಅರ್ಹತೆ ಪಡೆದರು. ಆದರೆ, ಕೋಸ್ಟ್‌ ಸರ್ಕ್ಯೂಟ್‌ನ ಮೊದಲ ಕಾರ್ನರ್ ಇದ್ದ ರೀತಿಯಿಂದಾಗಿ ಇದು ಅವರಿಗೆ ತಂತ್ರದ ದೃಷ್ಟಿಯಿಂದ ಕಠಿಣವಾದ ಸ್ಥಾನವಾಗಿತ್ತು.

ನಿರೀಕ್ಷೆಯಂತೆ, ಮೊದಲ ರೇಸ್‌ನ ಆರಂಭದಲ್ಲೇ ಆರವ್ ಮೂರನೇ ಸ್ಥಾನಕ್ಕೆ ಕುಸಿದರು, ಚೆನ್ನೈನ ಯಶ್ವಿನ್ ಕಿಶೋರ್ (ಪೆರೆಗ್ರಿನ್ ರೇಸಿಂಗ್) ಅವರ ಹಿಂದೆ ಉಳಿದರು. ಆದರೂ ಧೃತಿಗೆಡದ ಜಮ್ನಾಬಾಯಿ ನರ್ಸಿ ಶಾಲೆಯ ಈ ವಿದ್ಯಾರ್ಥಿ, ಉತ್ತಮ ಪ್ರಯತ್ನ ನಡೆಸಿ ಶೀಘ್ರದಲ್ಲೇ ತಮ್ಮ ಎರಡನೇ ಸ್ಥಾನವನ್ನು ಮರಳಿ ಪಡೆದು ಕೊನೆಯವರೆಗೂ ಅದನ್ನು ಕಾಯ್ದುಕೊಂಡರು. ಈ ರೇಸ್‌ನಲ್ಲಿ ಜಿದಾನ್ ಅನೀಸ್ ಪ್ರಥಮ ಸ್ಥಾನ ಹಾಗೂ ಕೊಲ್ಹಾಪುರದ ಆಯಾನ್ಶ್ ಪಾಟೀಲ್ ತೃತೀಯ ಸ್ಥಾನ ಪಡೆದರು.

ಎರಡನೇ ರೇಸ್‌ನಲ್ಲಿ ಆರವ್ ನಾಲ್ಕನೇ ಸ್ಥಾನದಿಂದ ಸ್ಪರ್ಧೆ ಆರಂಭಿಸಿದರು. ದುರದೃಷ್ಟವಶಾತ್, ಫಾರ್ಮೇಷನ್ ಲ್ಯಾಪ್‌ನಿಂದಲೇ lಅವರು ಇಂಜಿನ್ ಸಮಸ್ಯೆಯನ್ನು ಎದುರಿಸಬೇಕಾಯಿತು. ಆದಾಗ್ಯೂ, ಅತ್ಯುತ್ತಮ ಆರಂಭವನ್ನು ಪಡೆದ ಅವರು ಎರಡನೇ ಸ್ಥಾನಕ್ಕೆ ಏರಿದರು. ಇಂಜಿನ್ ಸಮಸ್ಯೆಯಿಂದಾಗಿ ವೇಗ ಕಡಿಮೆಯಾಗಿದ್ದರೂ, ಅವರು ಉಳಿದ ಮೂವರು ಸ್ಪರ್ಧಿಗಳೊಂದಿಗೆ ತೀವ್ರ ಪೈಪೋಟಿ ನಡೆಸಿದರು.

ಕಾರ್ಟ್‌ನ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ಆರವ್ ಕಷ್ಟಪಟ್ಟು ಐದನೇ ಸ್ಥಾನವನ್ನು ಮಾತ್ರ ಉಳಿಸಿಕೊಳ್ಳಲು ಶಕ್ತರಾದರು. ಜಿದಾನ್ ಅನೀಸ್ ಪ್ರಥಮ ಸ್ಥಾನ ಪಡೆದರೆ, ಕಿಶೋರ್ ಮತ್ತು ಹೈದರಾಬಾದ್‌ನ ಶ್ರಿಯಾನ್ ರಾವ್ ಟಿ. ನಂತರದ ಸ್ಥಾನಗಳನ್ನು ಪಡೆದರು. ಈ ಸುತ್ತಿನಲ್ಲಿ ಆರವ್ ಪಡೆದ ಎರಡನೇ ಮತ್ತು ಐದನೇ ಸ್ಥಾನಗಳು ಅವರು ಜಿದಾನ್ ಅನೀಸ್ ಮತ್ತು ಕಿಶೋರ್ ಅವರ ನಂತರದ ಸ್ಥಾನ ಪಡೆದು, ಈ ಸುತ್ತಿನಲ್ಲಿ ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆಯಲು ನೆರವಾದವು.ರಾಯೋ ರೇಸಿಂಗ್ ತಂಡದ ಮತ್ತೊಬ್ಬ ಸ್ಪರ್ಧಿ ಕಿಯಾನ್ ಶಾ ಅವರಿಗೆ ಈ ವಾರಾಂತ್ಯವು ಮಿಶ್ರಫಲ ನೀಡಿತು. ಮೊದಲ ರೇಸ್‌ನಲ್ಲಿ ಅಪಘಾತಕ್ಕೀಡಾಗಿ ತೀರಾ ಹಿಂದೆ ಬಿದ್ದ ಅವರು, ನಂತರ ಉತ್ತಮವಾಗಿ ಚೇತರಿಸಿಕೊಂಡು 11ನೇ ಸ್ಥಾನದಲ್ಲಿ ಮುಗಿಸಿದರು. ಇನ್ನು ಎರಡನೇ ರೇಸ್‌ನಲ್ಲಿ ಅದ್ಭುತ ಆರಂಭ ಪಡೆದ ಅವರು ಅತ್ಯುತ್ತಮವಾಗಿ ರೇಸ್ ಮುಗಿಸಿ ಎರಡನೇ ಸ್ಥಾನ ಪಡೆದರು. ಈ ಮೂಲಕ ಕಿಯಾನ್, ಬೆಂಗಳೂರಿನ ಅಕ್ಷತ್ ಮಿಶ್ರಾ ಅವರ ನಂತರ ಎರಡನೇ ಸ್ಥಾನ ಪಡೆದು ಮತ್ತೊಂದು ಪೋಡಿಯಂ ಸ್ಥಾನವನ್ನು ತಮ್ಮದಾಗಿಸಿಕೊಂಡರು.