ಜಗತ್ತಿನೆಲ್ಲೆಡೆಯ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾಯುತ್ತಿರುವ ಆ ದಿನ ಬಂದೇ ಬಿಟ್ಟಿದೆ. ವಿಶ್ವದ ಮೂಲೆಮೂಲೆಯ ಅಭಿಮಾನಿಗಳಿಗೂ ಭರ್ಜರಿ ರಸದೌತಣ ಉಣಬಡಿಸುವ, ಭರಪೂರ ರೋಚಕತೆಯನ್ನು ಕಟ್ಟಿಕೊಡುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ಗುರುವಾರ ಆರಂಭಗೊಳ್ಳಲಿದೆ
ಮೆಕ್ಸಿಕೋ ಸಿಟಿ: ಜಗತ್ತಿನೆಲ್ಲೆಡೆಯ ಕೋಟ್ಯಂತರ ಕ್ರೀಡಾಭಿಮಾನಿಗಳು ಕಾಯುತ್ತಿರುವ ಆ ದಿನ ಬಂದೇ ಬಿಟ್ಟಿದೆ. ವಿಶ್ವದ ಮೂಲೆಮೂಲೆಯ ಅಭಿಮಾನಿಗಳಿಗೂ ಭರ್ಜರಿ ರಸದೌತಣ ಉಣಬಡಿಸುವ, ಭರಪೂರ ರೋಚಕತೆಯನ್ನು ಕಟ್ಟಿಕೊಡುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ಗುರುವಾರ ಆರಂಭಗೊಳ್ಳಲಿದೆ. ಇಂದು ಮಧ್ಯರಾತ್ರಿ ಮೆಕ್ಸಿಕೋ ಸಿಟಿಯಲ್ಲಿ 23ನೇ ಆವೃತ್ತಿಯ ವಿಶ್ವಕಪ್‌ಗೆ ಅಧಿಕೃತ ಚಾಲನೆ ಸಿಗಲಿದೆ.
4 ವರ್ಷಗಳಿಗೊಮ್ಮೆ ನಡೆಯಲಿರುವ ಈ ವಿಶ್ವಕಪ್ ಈ ಬಾರಿ 3 ದೇಶಗಳಲ್ಲಿ ಆಯೋಜನೆಗೊಳ್ಳಲಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ಜಂಟಿಯಾಗಿ ವಿಶ್ವ ಸಮರಕ್ಕೆ ಆತಿಥ್ಯ ವಹಿಸಲಿವೆ. 39 ದಿನಗಳ ಕಾಲ, ಒಟ್ಟು 48 ತಂಡಗಳ ನಡುವೆ 104 ಪಂದ್ಯಗಳು ನಡೆಯಲಿದ್ದು, ಜುಲೈ 19ರಂದು ಫೈನಲ್ ಪಂದ್ಯ ನಡೆಯಲಿವೆ. ಒಟ್ಟು 16 ಕ್ರೀಡಾಂಗಣಗಳು ಟೂರ್ನಿಯ ಆತಿಥ್ಯಕ್ಕೆ ಸಜ್ಜಾಗಿವೆ.
ಅರ್ಜೆಂಟೀನಾ ತಂಡ ಹಾಲಿ ಚಾಂಪಿಯನ್(2022ರ ವಿಜೇತ) ಪಟ್ಟದೊಂದಿಗೆ ಈ ಬಾರಿ ಟೂರ್ನಿಗೆ ಕಾಲಿಡಲಿದ್ದು, ಬ್ರೆಜಿಲ್ ತಂಡ ಅತಿ ಹೆಚ್ಚು ಬಾರಿ(5) ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆ ಹೊಂದಿದೆ. ಏಷ್ಯನ್ ಫುಟ್ಬಾಲ್ ಫೆಡರೇಷನ್(ಎಎಫ್‌ಸಿ) ಸೇರಿದಂತೆ ಒಟ್ಟು 6 ಮಹಾಒಕ್ಕೂಟಗಳ ಮೂಲಕ ಆಯ್ಕೆಯಾದ 48 ತಂಡಗಳು ಈ ಬಾರಿ ಟ್ರೋಫಿಗಾಗಿ ಸೆಣಸಾಡಲಿವೆ.
ಟೂರ್ನಿ ಮಾದರಿ ಹೇಗೆ?
ಟೂರ್ನಿಯಲ್ಲಿರುವ 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿರುವ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗಲಿವೆ. ಗುಂಪು ಹಂತದ ಮುಕ್ತಾಯದ ಬಳಿಕ ಪ್ರತಿ ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು(12 ಗುಂಪಿನಿಂದ ಒಟ್ಟು 24 ತಂಡ) ಹಾಗೂ 3ನೇ ಸ್ಥಾನ ಪಡೆದ 12 ತಂಡಗಳ ಪೈಕಿ ಶ್ರೇಷ್ಠ 8 ತಂಡಗಳು ನಾಕೌಟ್ ಹಂತ ಪ್ರವೇಶಿಸಲಿವೆ. ಅಂದರೆ ಒಟ್ಟು 32 ತಂಡಗಳು ನಾಕೌಟ್‌ಗೇರಲಿವೆ. ಈ ತಂಡಗಳ ನಡುವೆ ಪ್ರಿ ಕ್ವಾರ್ಟರ್ ಫೈನಲ್ ನಡೆಯಲಿವೆ. ಗೆದ್ದ 16 ತಂಡಗಳು ಕ್ವಾರ್ಟರ್ ಫೈನಲ್‌ಗೇರಲಿವೆ. ಬಳಿಕ ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿದೆ.
ಇಂದಿನ ಪಂದ್ಯಗಳು
ಮೆಕ್ಸಿಕೊ-ದ.ಆಫ್ರಿಕಾ, ರಾತ್ರಿ 12.30
ಭಾರತದಲ್ಲಿ ನೇರಪ್ರಸಾರ
ಭಾರತದಲ್ಲಿ ಪಂದ್ಯಗಳು ಜೀ5 ಆ್ಯಪ್(ZEE5) ಮತ್ತು ಯುನೈಡ್8 (Unite8 sports) ಚಾನೆಲ್‌ನಲ್ಲಿ ನೇರಪ್ರಸಾರ.
