-19 ಡಿಗ್ರಿಯಲ್ಲಿ 5364 ಮೀಟರ್‌ ಎತ್ತರದ ಎವರೆಸ್ಟ್‌ ಬೇಸ್ ಕ್ಯಾಂಪ್‌ ಏರಿದ ಬೆಂಗಳೂರಿನ 9ರ ಬಾಲಕಿ!

KannadaprabhaNewsNetwork | Updated : Apr 19 2025, 04:15 AM IST

ಸಾರಾಂಶ

ಕ್ಯಾಂಪ್‌ಗೆ ವಿಹಾನ ಆನಂದ್‌ ಸಾಹಸಿಕ ಟ್ರಕ್ಕಿಂಗ್‌. ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬಳು ಎಂಬ ಖ್ಯಾತಿಗೆ ವಿಹಾನ ಪಾತ್ರರಾಗಿದ್ದಾಳೆ.

ನಾಸಿರ್‌ ಸಜಿಪ 

 ಬೆಂಗಳೂರು : ಮನೆ ಅಂಗಳದಲ್ಲಿ ಚಿನ್ನಿದಾಂಡು ಆಡಿ, ಟೀವಿಯಲ್ಲಿ ಟಾಮ್‌ ಆ್ಯಂಡ್‌ ಜೆರ್ರಿ ನೋಡುವ ವಯಸ್ಸಿನಲ್ಲಿ ಬೆಂಗಳೂರಿನ ಬಾಲಕಿಯೊಬ್ಬಳು ವಿಶ್ವದ ಅತಿ ಎತ್ತರದ ಪರ್ವತ ಶಿಖರ ಮೌಂಟ್‌ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. 

ಅಲ್ಲದೆ, ಈ ವಿಶಿಷ್ಟ ಸಾಧನೆ ಮಾಡಿದ ಭಾರತದ ಅತಿ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾಳೆ.ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಆನಂದ್‌ ಎಂಬವರ ಪುತ್ರಿ ವಿಹಾನ ಆನಂದ್‌ ಈ ಸಾಧನೆ ಮಾಡಿದ ದಿಟ್ಟ ಬಾಲಕಿ. ಏಪ್ರಿಲ್‌ 3ರಂದು ತನ್ನ ತಂದೆ ಜೊತೆ ಪರ್ವತ ಏರಲು ಆರಂಭಿಸಿದ್ದ ವಿಹಾನ, 12ರಂದು ಬೇಸ್‌ ಕ್ಯಾಂಪ್‌ ತಲುಪಿದ್ದಾಳೆ. ಮೈನಸ್‌ 19ರ ವರೆಗಿನ ಉಷ್ಣಾಂಶದ ನಡುವೆ, ಸಮುದ್ರ ಮಟ್ಟಕ್ಕಿಂತ 5364 ಮೀಟರ್‌(17,598 ಫೀಟ್‌) ಎತ್ತರದಲ್ಲಿರುವ ಬೇಸ್‌ ಕ್ಯಾಂಪ್‌ಗೇರಿದ ವಿಹಾನಗೆ ಈಗ ಕೇವಲ 9 ವರ್ಷ. ಈಗಿನ್ನೂ 3ನೇ ತರಗತಿ ಪಾಸ್‌ ಆಗಿ 4ನೇ ತರಗತಿಗೆ ಕಾಲಿಡುತ್ತಿದ್ದಾಳೆ.

ತಂದೆ ಜೊತೆ ಸಾಹಸ: ತನ್ನ ತಂದೆ ಜೊತೆ ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ತೆರಳಿ, ಅಲ್ಲಿಂದ ವಿಮಾನದಲ್ಲಿ ಲುಕ್ಲಾ ಎಂಬಲ್ಲಿಗೆ ಪ್ರಯಾಣಿಸಿದ್ದ ವಿಹಾನ, ಲುಕ್ಲಾದಿಂದ ಫಾಕ್ಡಿಂಗ್‌, ನಮ್ಚೆ ಬಜಾರ್‌, ಡಿಂಗ್‌ಬೊಚೆ, ಲೊಬುಚೆ, ಗೋರಕ್‌ಶೆಪ್‌ ಮೂಲಕ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ತಲುಪಿದ್ದಾರೆ. ಪ್ರತಿ ದಿನ 12 ಗಂಟೆಗಳ ಕಾಲ ತಲಾ 10ರಿಂದ 12 ಕಿ.ಮೀ. ಕ್ರಮಿಸಿದ್ದು, ಒಟ್ಟು 130 ಕಿ.ಮೀ. ಟ್ರಕ್ಕಿಂಗ್‌ ಪೂರ್ಣಗೊಳಿಸಿದ್ದಾರೆ. ‘ಪ್ರತಿ ದಿನ ಮೈನಸ್‌ -8 ಡಿಗ್ರಿಯಲ್ಲಿ ನಡೆಯಬೇಕು. ರಾತ್ರಿ ವೇಳೆ ಉಷ್ಣಾಂಶ ಮೈನಸ್‌ 19 ಡಿಗ್ರಿಗೆ ತಲುಪುತ್ತದೆ. ಐದೈದು ಬಟ್ಟೆಗಳನ್ನು ಧರಿಸಿ ಪರ್ವತ ಹತ್ತಬೇಕು. 10 ದಿನಗಳ ಸಾಹಸ ನನಗೂ, ಮಗಳಿಗೂ ಅವಿಸ್ಮರಣೀಯ ಕ್ಷಣ. ಪರ್ವತ ಹತ್ತುವಾಗ ಆಕೆಯ ಉತ್ಸಾಹ ಕಂಡು ಇತರರೂ ಆಶ್ಚರ್ಯಚಕಿತರಾಗಿದ್ದರು’ ಎಂದು 39 ವರ್ಷದ ಆನಂದ್ ‘ಕನ್ನಡಪ್ರಭ’ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ. 

2 ತಿಂಗಳು ಟ್ರೈನಿಂಗ್‌: ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಲು ಆನಂದ್‌, ವಿಹಾನ ಟ್ರಕ್ಕಿಂಗ್‌ ತಜ್ಞರಿಂದ 2 ತಿಂಗಳು ತರಬೇತಿ ಪಡೆದಿದ್ದಾರೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ, ಪ್ರತಿ ದಿನ 7ರಿಂದ 8 ಕಿ.ಮೀ. ವರೆಗೂ ನಡೆದು ಟ್ರಕ್ಕಿಂಗ್‌ಗೆ ಸಿದ್ಧಗೊಂಡಿದ್ದರು.

ಒಟ್ಟು ₹6 ಲಕ್ಷ ಖರ್ಚು: ಆನಂದ್‌ ಹಾಗೂ ವಿಹಾನಗೆ ಬೇಸ್‌ ಕ್ಯಾಂಪ್‌ ಏರಲು ತಲಾ ₹3 ಲಕ್ಷದಂತೆ ಒಟ್ಟು ₹6 ಲಕ್ಷ ಖರ್ಚಾಗಿದೆ. ಲುಕ್ಲಾದಿಂದ ಮೇಲೆ ಹೋಗುತ್ತಿದ್ದಂತೆಯೇ ಅಗತ್ಯ ವಸ್ತುಗಳ ಬೆಲೆಯೂ ಏರುತ್ತದೆ. ಬಾಟಲ್‌ ನೀರಿಗೆ 500 ರು., ಊಟಕ್ಕೆ 1500 ರು., ಮೊಬೈಲ್‌ ಚಾರ್ಜ್‌ ಮಾಡಲು 500 ರು. ಕೊಡಬೇಕು ಎಂದು ಆನಂದ್‌ ಹೇಳಿದ್ದಾರೆ.

ಬೆಂಗಳೂರಿನ 2ನೇ ಅತಿ ಕಿರಿಯ ಸಾಧಕಿ ವಿಹಾನ

ವಿಹಾನ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಿದ ಬೆಂಗಳೂರಿನ 2ನೇ ಅತಿ ಕಿರಿಯ ಸಾಧಕಿ ವಿಹಾನ. ಈ ಮೊದಲು ಆದ್ಯಾ ಬೆನ್ನೂರು ಎಂಬಾಕೆ ತನ್ನ 8ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಳು. ವಿಹಾನ ಎವರೆಸ್ಟ್‌ ಬೇಸ್ ಕ್ಯಾಂಪ್‌ ಏರಿದ ಭಾರತದ ಅಗ್ರ-10 ಅತಿ ಕಿರಿಯ ಸಾಧಕರಲ್ಲಿ ಒಬ್ಬಳು.

19,340 ಫೀಟ್‌ ಎತ್ತರದ ಮೌಂಟ್‌ ಕಿಲಿಮಂಜಾರೊ ವಿಹಾನ ಮುಂದಿನ ಗುರಿ!

ಕಳೆದ ವರ್ಷ ವಿಹಾನ ಪೋಷಕರು ಜೊತೆಗಿಲ್ಲದಿದ್ದರೂ, ಟ್ರಕ್ಕಿಂಗ್‌ ತಂಡದ ಜೊತೆ 9 ದಿನಗಳ ಕಾಲ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿ ಬಂದಿದ್ದರು. ತನ್ನ ತಂದೆಯಂತೆ ಟ್ರಕ್ಕಿಂಗ್‌ ಮೇಲೆ ಹೆಚ್ಚಿನ ಆಸಕ್ತಿ ಹೊಂದಿರುವ ವಿಹಾನ, ಮುಂದೆ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್‌ ಕಿಲಿಮಂಜಾರೋ ಏರುವ ಗುರಿ ಹೊಂದಿದ್ದಾರೆ. ಆ ಪರ್ವತ ಸಮುದ್ರ ಮಟ್ಟಕ್ಕಿಂತ 19,341 ಫೀಟ್‌ ಎತ್ತರದಲ್ಲಿದೆ.

Share this article