ಕ್ರಿಕೆಟ್‌ ಬಳಿಕ ಬೆಂಗಳೂರಿಗೆ ‘ಫುಟ್ಬಾಲ್‌’ ಶಾಕ್‌!

KannadaprabhaNewsNetwork |  
Published : Aug 25, 2025, 02:00 AM ISTUpdated : Aug 25, 2025, 08:51 AM IST
cricket ball

ಸಾರಾಂಶ

ಭೀಕರ ಕಾಲ್ತುಳಿತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕ್ರಿಕೆಟ್‌ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿರುವುದರ ನಡುವೆಯೇ ನಗರಕ್ಕೆ ಈಗ ‘ಫುಟ್ಬಾಲ್‌’ ಕೂಡಾ ಶಾಕ್‌ ನೀಡಿದೆ.

 ಬೆಂಗಳೂರು :  ಭೀಕರ ಕಾಲ್ತುಳಿತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕ್ರಿಕೆಟ್‌ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿರುವುದರ ನಡುವೆಯೇ ನಗರಕ್ಕೆ ಈಗ ‘ಫುಟ್ಬಾಲ್‌’ ಕೂಡಾ ಶಾಕ್‌ ನೀಡಿದೆ. ಇಲ್ಲಿನ ಮತ್ತೊಂದು ಪ್ರತಿಷ್ಠಿತ ಕ್ರೀಡಾಂಗಣ ಕಂಠೀರವದ ಪಿಚ್‌ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಯೋಗ್ಯವಲ್ಲ ಎಂದು ಏಷ್ಯನ್‌ ಫುಟ್ಬಾಲ್‌ ಫೆಡರೇಶನ್‌ (ಎಎಫ್‌ಸಿ) ಹೇಳಿದ್ದು, ಹೀಗಾಗಿ ಭಾರತ ಆಡಬೇಕಿದ್ದ ಫುಟ್ಬಾಲ್‌ ಪಂದ್ಯವೇ ಬೆಂಗಳೂರಿನಿಂದ ಎತ್ತಂಗಡಿಯಾಗಿದೆ.

2027ರ ಎಎಫ್‌ಸಿ ಏಷ್ಯನ್‌ ಕಪ್‌ ಅರ್ಹತಾ ಪಂದ್ಯದಲ್ಲಿ ಅ.14ರಂದು ಭಾರತ ತಂಡ ಸಿಂಗಾಪುರ ವಿರುದ್ಧ ಸೆಣಸಬೇಕಿತ್ತು. ಈ ಪಂದ್ಯಕ್ಕೆ ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್ಎಫ್) ಕಂಠೀರವ ಕ್ರೀಡಾಂಗಣವನ್ನು ಅಂತಿಮಗೊಳಿಸಿತ್ತು. ಆದರೆ ಪಂದ್ಯದ ಪೂರ್ವಭಾವಿಯಾಗಿ ಎಎಫ್‌ಸಿ ಅಧಿಕಾರಿಗಳು ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ತಪಾಸಣೆ ನಡೆಸಿದ್ದು, ಹಲವು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಬದಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವಂತೆ ಎಐಎಫ್‌ಎಫ್‌ಗೆ ಎಎಫ್‌ಸಿ ಸೂಚಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಪಂದ್ಯ ಗೋವಾ ಅಥವಾ ಶಿಲ್ಲಾಂಗ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.

‘ಕಂಠೀರವದ ಪಿಚ್‌ ಸಮರ್ಪಕವಾಗಿಲ್ಲ. ಕ್ರೀಡಾಂಗಣದ ಇತರ ಕೆಲ ಅಂಶಗಳು ಕೂಡಾ ಅಂ.ರಾ. ಪಂದ್ಯ ಆಯೋಜನೆಗೆ ಸೂಕ್ತವಾಗಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಸಾಮಾನ್ಯವಾಗಿ ಬೆಂಗಳೂರು ಎಫ್‌ಸಿ ಕ್ಲಬ್‌ ಕಂಠೀರವ ಕ್ರೀಡಾಂಗಣದ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ಸದ್ಯ ಐಎಸ್‌ಎಲ್‌ ಸ್ಥಗಿತಗೊಂಡಿದ್ದರಿಂದ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಲಾಗುತ್ತಿದೆ.

ಕಪ್‌ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ಏಕ ದಿನ ವಿಶ್ವಕಪ್‌ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಿಂ ಕೇರಳಕ್ಕೆ ವರ್ಗ

ಅದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯಗಳು ಬೇರೆಡೆಗೆ ಶಿಫ್ಟ್‌

ಕಂಠೀರವ ಕ್ರೀಡಾಂಗಣದ ಗುಣಮಟ್ಟ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸೂಕ್ತವಾಗಿಲ್ಲ ಎಂದ ಏಷ್ಯನ್‌ ಫುಟ್ಬಾಲ್‌ ಫೆಡರೇಷನ್‌

ಬೆಂಗಳೂರಲ್ಲಿ ಅ1.4ರಂದು ಭಾರತ - ಸಿಂಗಾಪುರ ತಂಡಗಳ ನಡುವೆ ನಡೆಯಬೇಕಿದ್ದ ಎಎಫ್‌ಸಿ ಏಷ್ಯನ್‌ ಕಪ್‌ ಅರ್ಹತಾ ಪಂದ್ಯ

2 ವರ್ಷಗಳ ಹಿಂದೆಯೇಎಚ್ಚರಿಸಿತ್ತು ಕನ್ನಡಪ್ರಭ

2023ರಲ್ಲಿ ದಕ್ಷಿಣ ಏಷ್ಯಾ ಫುಟ್ಬಾಲ್‌ ಟೂರ್ನಿ(ಸ್ಯಾಫ್‌) ಕಂಠೀವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಹಾಳಾದ ಕ್ರೀಡಾಂಗಣದಲ್ಲಿ, ಹಲವು ಅವ್ಯವಸ್ಥೆಗಳ ನಡುವೆ ಟೂರ್ನಿ ನಡೆಸುತ್ತಿರುವ ಬಗ್ಗೆ ವಿಶೇಷ ವರದಿ ಪ್ರಕಟಿಸಿದ್ದ ‘ಕನ್ನಡಪ್ರಭ’, ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವರಿಕೆ ಮಾಡಿಕೊಟ್ಟಿತ್ತು. ಕ್ರೀಡಾಂಗಣ ಅವ್ಯವಸ್ಥೆ ವಿರುದ್ಧ ಫುಟ್ಬಾಲ್‌ ಅಭಿಮಾನಿಗಳೂ ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ 2 ವರ್ಷ ಕಳೆದರೂ ಕ್ರೀಡಾಂಗಣ ದುರಸ್ತಿಯಾಗದೇ ಇರುವುದು ದುರಂತ.

PREV
Read more Articles on

Recommended Stories

ದಿ ಗ್ರೇಟ್‌ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್‌ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ
ಆಯ್ಕೆ ಸಮಿತಿಗೆ ಹೊಸ ಸದಸ್ಯರ ಹುಡುಕಾಟ ಆರಂಭಿಸಿದ ಬಿಸಿಸಿಐ