ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮೊದಲ ಇನ್ನಿಂಗ್ಸ್‌ನ ಹಿನ್ನಡೆ ಬಳಿಕ ಪುಟಿದೆದ್ದ ಭಾರತ, 4ನೇ ಟೆಸ್ಟ್‌ನಲ್ಲಿ ಗೆಲುವಿನ ಆಸೆ ಬಿಟ್ಟಿಲ್ಲ. ಅತ್ತ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನ ಆರಂಭಿಕ ಆಘಾತದ ಬಳಿಕವೂ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಪಂದ್ಯದ ಕೊನೆ ದಿನವಾದ ಸೋಮವಾರ ಎಲ್ಲಾ ಮೂರು ಫಲಿತಾಂಶವೂ ಸಾಧ್ಯತೆಯಿದ್ದು, ಗೆಲುವಿಗಾಗಿ ಇತ್ತಂಡಗಳಿಂದ ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ.
ಆಸ್ಟ್ರೇಲಿಯಾದ 474 ರನ್‌ಗೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಭಾನುವಾರ 369 ರನ್‌ಗೆ ಆಲೌಟಾಯಿತು. ಶನಿವಾರ ದಿನದಾಟದಂತ್ಯಕ್ಕೆ ಶತಕ ಪೂರ್ಣಗೊಳಿಸಿದ್ದ ನಿತೀಶ್ ರೆಡ್ಡಿ, 4ನೇ ದಿನ 114 ರನ್‌ಗೆ ವಿಕೆಟ್ ಒಪ್ಪಿಸಿದರು. ಅವರನ್ನು ನೇಥನ್ ಲಯನ್ ಪೆವಿಲಿಯನ್‌ಗೆ ಅಟ್ಟಿದರು. 105 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 4ನೇ ದಿನದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 228 ರನ್ ಗಳಿಸಿದ್ದು, ಒಟ್ಟು 333 ರನ್ ಲೀಡ್ ಪಡೆದಿದೆ.
ಉದುರಿದ ಆಸೀಸ್: ನಿತೀಶ್ ರೆಡ್ಡಿ-ವಾಷಿಂಗ್ಟನ್ ಸುಂದರ್ ಹೋರಾಟದಿಂದಾಗಿ ಸೋಲಿನ ಆತಂಕದಿಂದ ಪಾರಾಗಿದ್ದ ಭಾರತ, ಭಾನುವಾರ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆಯಿತು. ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ರೋಹಿತ್ ಪಡೆಯ ಯೋಜನೆ ಆರಂಭದಲ್ಲೇ ಫಲಿಸಿತು. ಮೊದಲ ಇನ್ನಿಂಗ್ಸ್‌ನ ಹೀರೊ ಸ್ಯಾಮ್ ಕಾನ್‌ಸ್ಟಾಸ್ 8 ರನ್ ಗಳಿಸಿದ್ದಾಗ ಬೂಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಇದು ಆಸೀಸ್ ಪತನಕ್ಕೆ ನಾಂದಿ ಹಾಡಿತು. 13 ರನ್ ಗಳಿಸಿದ್ದ ಸ್ಮಿತ್‌ರನ್ನು ಸಿರಾಜ್ ಔಟ್ ಮಾಡಿದ ಬಳಿಕ ಆಸೀಸ್ 11 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.
ಟ್ರ್ಯಾವಿಸ್ ಹೆಡ್(1), ಮಿಚೆಲ್ ಮಾರ್ಷ್(0), ಅಲೆಕ್ಸ್ ಕೇರಿ(2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. 91 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಆಸೀಸ್, ಇನ್ನೇನು 150ರೊಳಗೆ ಆಲೌಟ್ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಲಬುಶೇನ್ ಹಾಗೂ ನಾಯಕ ಕಮಿನ್ಸ್ 7ನೇ ವಿಕೆಟ್‌ಗೆ 57 ರನ್ ಸೇರಿಸಿ, ಭಾರತದ ಲೆಕ್ಕಾಚಾರ ಬುಡಮೇಲು ಮಾಡಿದರು.70 ರನ್ ಗಳಿಸಿದ್ದ ಲಬುಶೇನ್ ಸಿರಾಜ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಾಗ ತಂಡದ ಸ್ಕೋರ್ 148.
ಆದರೆ ಭಾರತವನ್ನು ಕಮಿನ್ಸ್, ನೇಥನ್ ಲಯನ್ ಮತ್ತಷ್ಟು ಕಾಡಿದರು. 9ನೇ ವಿಕೆಟ್‌ಗೆ ಕಮಿನ್ಸ್-ಲಯನ್ 17 ರನ್ ಸೇರಿಸಿದರೆ, ಮುರಿಯದ 10ನೇ ವಿಕೆಟ್‌ಗೆ ಲಯನ್ ಹಾಗೂ ಬೋಲಂಡ್ 110 ಎಸೆತಗಳಲ್ಲಿ 55 ರನ್ ಸೇರಿಸಿ ಭಾರತಕ್ಕೆ ಬಹುದೊಡ್ಡ ಪೆಟ್ಟು ನೀಡಿದರು. ಕಮಿನ್ಸ್ 41ಕ್ಕೆ ಔಟಾದರೂ, ಲಯನ್ 41 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.91ಕ್ಕೆ 6 ವಿಕೆಟ್ ಪತನದ ಬಳಿಕ ಆಸೀಸ್ ಬರೋಬ್ಬರಿ 137 ರನ್ ಸಿಡಿಸಿದ್ದು, ಕೊನೆ ದಿನ ಇನ್ನಷ್ಟು ರನ್ ಸೇರಿಸುವ ಕಾತರದಲ್ಲಿದೆ.
ಆಸ್ಟ್ರೇಲಿಯಾವನ್ನು ಬೇಗನೇ ಆಲೌಟ್ ಮಾಡಿ, ಗುರಿ ಬೆನ್ನತ್ತಿ ಗೆಲ್ಲುವುದು ಸದ್ಯ ಭಾರತದ ಮುಂದಿರುವ ಗುರಿ. ಈ ನಡುವೆ ಪಂದ್ಯದ ಡ್ರಾಗೊಂಡರೂ ಅಚ್ಚರಿಯಿಲ್ಲ.ಮತ್ತೆ ಬೆಂಕಿ ದಾಳಿ ಸಂಘಟಿಸಿದ ಬೂಮ್ರಾ 4 ವಿಕೆಟ್ ಕಿತ್ತರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಸಿರಾಜ್ 3 ವಿಕೆಟ್ ತಮ್ಮದಾಗಿಸಿಕೊಂಡರು. ಮತ್ತೊಂದು ವಿಕೆಟ್ ಜಡೇಜಾ ಪಾಲಾಯಿತು.ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 474/10 ಮತ್ತು 2ನೇ ಇನ್ನಿಂಗ್ಸ್ 228/9 (4ನೇ ದಿನದಂತ್ಯಕ್ಕೆ) (ಲಬುಶೇನ್ 70, ಕಮಿನ್ಸ್ 41, ಲಯನ್ ಔಟಾಗದೆ 41, ಬೂಮ್ರಾ 4-56, ಸಿರಾಜ್ 3-66), ಭಾರತ ಮೊದಲ ಇನ್ನಿಂಗ್ಸ್ 369/10 (ನಿತೀಶ್ 114, ಲಯನ್ 3-96)
ಖವಾಜ, ಕಮಿನ್ಸ್, ಲಬುಶೇನ್ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್
ಭಾರತಕ್ಕೆ ಭಾನುವಾರ ತನ್ನ ಕಳಪೆ ಫೀಲ್ಡಿಂಗ್ ಮುಳುವಾಯಿತು. ಯಶಸ್ವಿ ಜೈಸ್ವಾಲ್ ಒಬ್ಬರೇ ಪ್ರಮುಖ 3 ಕ್ಯಾಚ್ ಕೈ ಚೆಲ್ಲಿದರು. ಉಸ್ಮಾನ್ ಖವಾಜ, ಲಬುಶೇನ್ ಹಾಗೂ ಕಮಿನ್ಸ್ ನೀಡಿದ್ದ ಸುಲಭ ಕ್ಯಾಚ್‌ಗಳನ್ನು ಹಿಡಿಯಲು ಜೈಸ್ವಾಲ್ ವಿಫಲರಾದರು. ಈ ಮೂವರೂ ಉತ್ತಮ ರನ್ ಕಲೆಹಾಕಿ ಭಾರತವನ್ನು ಕಾಡಿದರು.
02ನೇ ಬಾರಿ: 10ನೇ ವಿಕೆಟ್‌ಗೆ ಇಬ್ಬರೂ ಆಟಗಾರರು 50+ ಎಸೆತ ಎದುರಿಸಿದ್ದು ಟೆಸ್ಟ್ ಇತಿಹಾಸದಲ್ಲೇ ಇದು 2ನೇ ಬಾರಿ. 1961ರಲ್ಲಿ ಪಾಕಿಸ್ತಾನದ ಅಫಾಖ್-ಹಸೀಬ್ ಈ ಸಾಧನೆ ಮಾಡಿದ್ದರು.
23 ವಿಕೆಟ್: ಬೂಮ್ರಾ ಮೆಲ್ಬರ್ನ್‌ನಲ್ಲಿ 3 ಟೆಸ್ಟ್‌ನಲ್ಲಿ 23 ವಿಕೆಟ್ ಪಡೆದಿದ್ದಾರೆ. ಇದು ವಿದೇಶಿ ಕ್ರೀಡಾಂಗಣವೊಂದರಲ್ಲಿ ಭಾರತೀಯ ಬೌಲರ್‌ಗಳ ಪೈಕಿ ಗರಿಷ್ಠ.
06ನೇ ಬ್ಯಾಟರ್: ಟೆಸ್ಟ್‌ನಲ್ಲಿ 8ಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿ ಎರಡೂ ಇನ್ನಿಂಗ್ಸ್‌ನಲ್ಲಿ 40+ ರನ್ ಗಳಿಸಿದ ಆಸ್ಟ್ರೇಲಿಯಾದ 6ನೇ ಬ್ಯಾಟರ್ ಪ್ಯಾಟ್ ಕಮಿನ್ಸ್.