ಚದುರಂಗದಲ್ಲಿ ಹೊಸ ಚರಿತ್ರೆ: 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಡಬಲ್‌ ಬಂಗಾರ!

KannadaprabhaNewsNetwork |  
Published : Sep 23, 2024, 01:15 AM ISTUpdated : Sep 23, 2024, 04:44 AM IST
ಭಾರತ ಮಹಿಳಾ ತಂಡ | Kannada Prabha

ಸಾರಾಂಶ

ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿವೆ. ಪುರುಷರ ತಂಡ 11 ಪಂದ್ಯಗಳಲ್ಲಿ 10 ರಲ್ಲಿ ಗೆದ್ದು ಮತ್ತು ಮಹಿಳಾ ತಂಡ ಅಜರ್‌ಬೈಜಾನ್‌ ವಿರುದ್ಧ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡವು.

ಬುಡಾಪೆಸ್ಟ್‌(ಹಂಗೇರಿ): ಚೆಸ್‌ ಲೋಕದಲ್ಲಿ ಭಾರತೀಯರು ಅಧಿಪತ್ಯ ಸಾಧಿಸಲು ಆರಂಭಿಸಿ ವರ್ಷ ಹಲವು ಕಳೆಯಿತು. ಈಗ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಜಾಗತಿಕ ಚೆಸ್‌ನ ಪ್ರತಿಷ್ಠಿತ ಹಾಗೂ ಬಹುದೊಡ್ಡ ಟೂರ್ನಿಯಾಗಿರುವ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಚೊಚ್ಚಲ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿವೆ. 

ಬುಡಾಪೆಸ್ಟ್‌ನಲ್ಲಿ ಭಾನುವಾರ ಕೊನೆಗೊಂಡ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಭಾರತದ ಎರಡೂ ತಂಡಗಳು ಚಿನ್ನದ ಪದಕ ಗೆದ್ದುಕೊಂಡವು. ಕಳೆದ ಬಾರಿ ಅಂದರೆ 2022ರಲ್ಲಿ ಭಾರತದಲ್ಲೇ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಎರಡೂ ತಂಡಗಳು ಕಂಚಿನ ಪದಕ ಗೆದ್ದಿದ್ದವು.ಈ ಬಾರಿ ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ವಿದಿತ್‌ ಗುಜರಾತಿ, ಅರ್ಜುನ್‌ ಎರಿಗೈಸಿ ಹಾಗೂ ಪಿ.ಹರಿಕೃಷ್ಣ ಅವರನ್ನೊಳಗೊಂಡ ಪುರುಷರ ತಂಡ ಮುಕ್ತ ವಿಭಾಗದಲ್ಲಿ 21 ಅಂಕಗಳನ್ನು ಗಳಿಸಿ, 189 ದೇಶಗಳಿದ್ದ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. 

ಶನಿವಾರ ಅಮೆರಿಕ ವಿರುದ್ಧ ಗೆಲ್ಲುವ ಮೂಲಕ ಚಿನ್ನ ಖಚಿತಪಡಿಸಿಕೊಂಡಿದ್ದ ಭಾರತಕ್ಕೆ ಭಾನುವಾರ 11ನೇ ಹಾಗೂ ಕೊನೆ ಸುತ್ತಿನಲ್ಲಿ ಸ್ಲೊವೇನಿಯಾ ವಿರುದ್ಧ ಡ್ರಾ ಸಾಧಿಸಿದರೂ ಸಾಕಿತ್ತು. ಆದರೆ ಭಾರತ 3.5-0.5ರಲ್ಲಿ ಜಯಗಳಿಸಿತು. ಟೂರ್ನಿಯಲ್ಲಿ ಭಾರತ 11 ಪಂದ್ಯಗಳ ಪೈಕಿ 10ರಲ್ಲಿ ಗೆದ್ದರೆ, ಉಜ್ಬೇಕಿಸ್ತಾನ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು.

ರೋಚಕ ಗೆಲುವು : ಮತ್ತೊಂದೆಡೆ ಹರಿಕಾ ದ್ರೋಣವಲ್ಲಿ, ಆರ್‌.ವೈಶಾಲಿ, ದಿವ್ಯಾ ದೇಶ್‌ಮುಖ್‌, ವಂತಿಕಾ ಅಗರ್‌ವಾಲ್‌, ತಾನಿಯಾ ಸಚ್‌ದೇವ್‌ ಅವರನ್ನೊಳಗೊಂಡ ಭಾರತ ತಂಡ ಮಹಿಳಾ ವಿಭಾಗದಲ್ಲಿ 19 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಚಿನ್ನ ಗೆಲ್ಲಬೇಕಿದ್ದರೆ ಭಾರತ ಭಾನುವಾರ ಕೊನೆ ಸುತ್ತಿನಲ್ಲಿ ಅಜರ್‌ಬೈಜಾನ್‌ ವಿರುದ್ಧ ಗೆಲ್ಲಬೇಕಿತ್ತು. ಪಂದ್ಯದಲ್ಲಿ ಭಾರತ 3.5-0.5ರಲ್ಲಿ ಜಯಗಳಿಸಿತು. ಅತ್ತ ಅಮೆರಿಕ ವಿರುದ್ಧ ಕಜಕಸ್ತಾನ ಡ್ರಾಗೆ ತೃಪ್ತಿಪಟ್ಟ ಕಾರಣ ಭಾರತಕ್ಕೆ ಚಿನ್ನದ ಪದಕ ಒಲಿಯಿತು. ಕಜಕಸ್ತಾನ ಬೆಳ್ಳಿ ಜಯಿಸಿತು. 

ಪುರುಷರ 3ನೇ, ಮಹಿಳಾ ತಂಡಕ್ಕೆ ಎರಡನೇ ಪದಕ

ಭಾರತದ ತಂಡಗಳು ಈ ಮೊದಲು ಚೆಸ್‌ ಒಲಿಂಪಿಯಾಡ್‌ನಲ್ಲಿ ಪದಕ ಗೆದ್ದಿವೆ. ಪುರುಷರ ತಂಡ 2014 ಹಾಗೂ 2022ರಲ್ಲಿ ಕಂಚಿನ ಪದಕ ಜಯಿಸಿದ್ದವು. ಈ ವರ್ಷ ತಂಡಕ್ಕೆ ಮೊದಲ ಚಿನ್ನ ಲಭಿಸಿದೆ. ಅತ್ತ ಮಹಿಳಾ ತಂಡ 2022ರಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ ಕಂಚು ಜಯಿಸಿತ್ತು. 

ಸಮಗ್ರ ಟ್ರೋಫಿ ತನ್ನಲ್ಲೇ ಉಳಿಸಿಕೊಂಡ ಭಾರತ

2022ರಲ್ಲಿ ಭಾರತ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ತೋರಿದ್ದ ಉತ್ತಮ ಪ್ರದರ್ಶನದಿಂದಾಗಿ ಸಮಗ್ರ ಚಾಂಪಿಯನ್‌ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಈ ಬಾರಿ ಭಾರತ ಮತ್ತೆ ಪ್ರಶಸ್ತಿ ಗೆದ್ದಿದೆ. ಈ ವರೆಗೂ ರಷ್ಯಾ ದಾಖಲೆಯ 6 ಬಾರಿ ಪ್ರಶಸ್ತಿ ಜಯಿಸಿದ್ದರೆ, ಚೀನಾ 3, ಉಕ್ರೇನ್‌ 2 ಬಾರಿ ಟ್ರೋಫಿ ತನ್ನದಾಗಿಸಿಕೊಂಡಿವೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌
ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ