ಕಪ್‌ ತುಳಿತ: ಬಂಧಿತ ನಾಲ್ವರೂ ಆರ್‌ಸಿಬಿ ಸಿಬ್ಬಂದಿಗೆ ಜಾಮೀನು

Published : Jun 14, 2025, 04:02 AM IST
RCB celebration bengaluru Photo

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಾಲ್ವರೂ ಆರ್‌ಸಿಬಿ ಸಿಬ್ಬಂದಿಗೆ ಜಾಮೀನು

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಡಿಎನ್‌ನ ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಹಾಗೂ ಇತರೆ ಮೂವರು ಆರೋಪಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಜೊತೆಗೆ, ತಮ್ಮ ಬಂಧನ ಕಾನೂನು ಬಾಹಿರವಾಗಿದ್ದು, ಕೂಡಲೇ ಮಧ್ಯಂತರ ಜಾಮೀನು ಮೇಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.

ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ಪೀಠ ಗುರುವಾರ ಮಧ್ಯಾಹ್ನ ಪ್ರಕಟಿಸಿದರು.

ಸರ್ಕಾರ ಮತ್ತು ಜೈಲು ಪ್ರಾಧಿಕಾರವು ತಕ್ಷಣವೇ ಅರ್ಜಿದಾರರನ್ನು ಬಿಡುಗಡೆ ಮಾಡಬೇಕು. ಅರ್ಜಿದಾರರು ಪ್ರಕರಣಕ್ಕೆ ಸಂಬಂಧಿಸಿದ ಪ್ರಾಸಿಕ್ಯೂಷನ್‌ ಸಾಕ್ಷ್ಯಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆದರಿಕೆ ಹಾಕಬಾರದು. ಸಾಕ್ಷ್ಯಾಧಾರ ತಿರುಚಬಾರದು. ತನಿಖೆಗೆ ಅಡ್ಡಿಪಡಿಸಬಾರದು. ಪ್ರಕರಣ ಕುರಿತ ಕಬ್ಬನ್‌ ಪಾರ್ಕ್‌ ಠಾಣಾ ಪೊಲೀಸರ ತನಿಖೆ, ನ್ಯಾಯಾಂಗ ಆಯೋಗದ ಮತ್ತು ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಅರ್ಜಿದಾರರು ಸಹಕರಿಸಬೇಕು. ಅರ್ಜಿದಾರರು ತಲಾ ಒಂದು ಲಕ್ಷ ರು.ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಪಾಸ್‌ಪೋರ್ಟ್‌ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ಹೈಕೋರ್ಟ್‌ ಅನುಮತಿಯಿಲ್ಲದೆ ಬೆಂಗಳೂರು ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಜಾಮೀನು ಏಕೆ?

- ಬಂಧಿತ ಸಿಬ್ಬಂದಿ ಆರ್‌ಸಿಬಿ, ಡಿಎನ್‌ಎ ನೌಕರರುಮಾತ್ರ

- ಬಂಧಿಸುವ ಮೊದಲು ಅವರ ವಿರುದ್ಧ ಸಾಕ್ಷ್ಯಗಳಿರಲಿಲ್ಲ

- ಮೊದಲು ಎಫ್‌ಐಆರ್‌ನಲ್ಲಿ ಅವರ ಹೆಸರು ಇರಲಿಲ್ಲ

- ಹೀಗಾಗಿ ಇವರೇ ಘಟನೆಗೆ ಹೊಣೆ ಎನ್ನಲಾಗುವುದಿಲ್ಲ

- ಆದ್ದರಿಂದ ನಿಖಿಲ್‌ ಸೇರಿ ನಾಲ್ವರಿಗೆ ಮಧ್ಯಂತರ ಬೇಲ್‌

ಪ್ರಕರಣದಲ್ಲಿ ಕಾರ್ಯಕ್ರಮವನ್ನು ಆರ್‌ಸಿಬಿ, ಡಿಎನ್‌ಎ ಕಂಪನಿಗಳ ಆಡಳಿತ ಮಂಡಳಿ ಆಯೋಜಿಸಿದೆ. ಆದರೆ, ಅರ್ಜಿದಾರರು ಆರ್‌ಸಿಬಿ ಮತ್ತು ಡಿಎನ್‌ಎ ಅಧಿಕಾರಿಗಳು, ಉದ್ಯೋಗಿಗಳು, ನಿರ್ದೇಶಕರಾಗಿದ್ದು ಅವರನ್ನು ಕಂಪನಿಗಳೊಂದಿಗೆ ಸಮಾನವಾಗಿ ಕಾಣಲು ಸಾಧ್ಯವಿಲ್ಲ. ಅವರನ್ನು ಬಂಧಿಸುವ ಮೊದಲು ಘಟನೆಯಲ್ಲಿ ಅವರ ಪಾತ್ರವಿರುವುದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೆ ಅದರಲ್ಲೂ ವಿಶೇಷವಾಗಿ ಎಫ್‌ಐಆರ್‌ಗಳಲ್ಲಿ ಅವರನ್ನು ಆರೋಪಿಗಳೆಂದು ಹೆಸರಿಸದಿದ್ದಾಗ ಅರ್ಜಿದಾರರನ್ನು ಆರೋಪಿಸಲಾಗಿರುವ ಅಪರಾಧಗಳಿಗೆ ಪ್ರತ್ಯೇಕವಾಗಿ ಹೊಣೆಗಾರರೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಅರ್ಜಿದಾರರ ಬಂಧನವು ಕಾನೂನುಬದ್ಧವಾಗಿಲ್ಲ. ಈ ತಕರಾರು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ಮೇಲೆ ಬಂಧನದಿಂದ ಬಿಡುಗಡೆಯಾಗಲು ಅವರು ಅರ್ಹರಾಗಿದ್ದಾರೆ ಎಂದು ಪೀಠ ತಿಳಿಸಿದೆ.

ಅರ್ಜಿದಾರರನ್ನು ಸಿಸಿಬಿ ಪೊಲೀಸರು ಜೂ.6ರಂದು ಬೆಳಗ್ಗೆ 3ರಿಂದ 3.30ರ ನಡುವೆ ಬಂಧನ ಮಾಡಿ, 4.30ರಿಂದ 4.50ರ ನಡುವೆ ಕಬ್ಬನ್‌ ಪಾರ್ಕ್‌ ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ. ಅದಾದ 10ರಿಂದ 11 ಗಂಟೆ ವಿಳಂಬವಾಗಿ ಅಂದರೆ ಜೂ.6ರಂದು ಮಧ್ಯಾಹ್ನ 2.30ರ ವೇಳೆಗೆ ಪೊಲೀಸರು, ಅರ್ಜಿದಾರರಿಗೆ ಅವರ ಬಂಧನಕ್ಕೆ ಕಾರಣಗಳನ್ನು (ಅರೆಸ್ಟ್‌ ಮೊಮೊ) ನೀಡಿದ್ದಾರೆ. ಈ ವಿಳಂಬಕ್ಕೆ ಪೊಲೀಸರು ಸೂಕ್ತ ವಿವರಣೆ ನೀಡಿಲ್ಲ. ಬಂಧನ ವೇಳೆ ಕಡ್ಡಾಯವಾಗಿ ನೀಡಬೇಕಾದ ಬಂಧನದ ಮಾಹಿತಿ, ಬಂಧನದ ಜ್ಞಾಪನಾಪತ್ರ, ಬಂಧನಕ್ಕೆ ಕಾರಣಗಳು, ತಪಾಸಣಾ ಮೆಮೊ ಸೇರಿ ಇನ್ನಿತರ ಚೆಕ್‌ಲಿಸ್ಟ್‌ ದಾಖಲೆ ನೀಡಿಲ್ಲ. ಹೀಗಾಗಿ, ಈ ಅಂಶಗಳಿಂದಲೂ ಅರ್ಜಿದಾರರ ಬಂಧನ ಕಾನೂನುಬದ್ಧವಾಗಿಲ್ಲ ಎಂಬುದಾಗಿ ಹೇಳಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಮಧ್ಯಂತರ ಜಾಮೀನು ನೀಡಬಾರದು. ಅತಿ ಅಪರೂಪದ ಪ್ರಕರಣದಲ್ಲಿ ಮಾತ್ರ ತನಿಖೆಗೆ ತಡೆ ನೀಡಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿಗಳನ್ನು ಬಂಧಿಸಬಾರದೆಂದು ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸುವಂತಿಲ್ಲ. ಆಯೋಜಕರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ತನಿಖಾಧಿಕಾರಿಗಳು ಪ್ರತಿಪಾದಿಸುತ್ತಿರುವ ವಾದವು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!