ಕಳೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರದ ಶತಕದ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುರುವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು ಎದುರಾಗಲಿದೆ
ಜೈಪುರ: ಕಳೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರದ ಶತಕದ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುರುವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು ಎದುರಾಗಲಿದೆ. ರಾಜಸ್ಥಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
ವೈಭವ್‌ರ ಅಮೋಘ ಆಟದ ಹೊರತಾಗಿ ರಾಜಸ್ಥಾನ ಈ ಬಾರಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, 7 ಸೋಲನುಭವಿಸಿದೆ. ಪ್ಲೇ-ಆಫ್‌ಗೇರಲು ಕನಿಷ್ಠ 7 ಗೆಲುವು ಬೇಕಿರುವ ಕಾರಣ, ಇನ್ನುಳಿದ ಎಲ್ಲಾ 4 ಪಂದ್ಯಗಳಲ್ಲೂ ಗೆಲ್ಲಬೇಕಿದೆ. ಹೀಗಾಗಿ ಮುಂಬೈ ವಿರುದ್ಧ ಸೋತರೆ ತಂಡ ಹೊರಬೀಳುವುದು ಖಚಿತ.
ಮತ್ತೊಂದೆಡೆ ಮುಂಬೈ ತಂಡ ಕಳೆದ 5 ಪಂದ್ಯಗಳಲ್ಲೂ ಗೆದ್ದಿದ್ದು, ಸತತ 6ನೇ ಜಯದ ಕಾತರದಲ್ಲಿದೆ. ಆರಂಭಿಕ 5 ಪಂದ್ಯಗಳ ಪೈಕಿ 4ರಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದ್ದ ತಂಡ ಬಳಿಕ ಪುಟಿದೆದ್ದು ಈಗ 2ನೇ ಸ್ಥಾನದಲ್ಲಿದ್ದು, ಮತ್ತೊಂದು ಗೆಲುವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗುವ ವಿಶ್ವಾಸದಲ್ಲಿದೆ.
ಪಂದ್ಯ: ಸಂಜೆ 7.30ಕ್ಕೆ