ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿಯ ವಿರುದ್ಧ ಕುಸ್ತಿ ಪಟುಗಳು ಸಮರ ಸಾರಿದ್ದರು.
ನವದೆಹಲಿ: ಭಾರೀ ಸಂಘರ್ಷ, ಜಟಾಪಟಿ ಬಳಿಕ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ)ನ ಚುಕ್ಕಾಣಿ ಹಿಡಿದಿದ್ದ ನೂತನ ಸಮಿತಿಯು ಕೇವಲ ನಾಲ್ಕೇ ದಿನದಲ್ಲಿ ಅಧಿಕಾರ ಕಳೆದುಕೊಂಡಿದೆ. ಅದರೊಂದಿಗೆ ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿಯ ವಿರುದ್ಧ ಸಮರ ಸಾರಿದ್ದ ಕುಸ್ತಿ ಪಟುಗಳಿಗೆ ಜಯ ಲಭಿಸಿದಂತಾಗಿದೆ.
ಹೊಸ ಸಮಿತಿಯು ನಿಯಮ ಪಾಲಿಸಿಲ್ಲ ಮತ್ತು ಸಂಪೂರ್ಣವಾಗಿ ಹಿಂದಿನ ಸಮಿತಿಯ ಪದಾಧಿಕಾರಿಗಳ ನಿಯಂತ್ರಣದಲ್ಲಿದೆ ಎಂದು ಭಾನುವಾರ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದೆ. ಜೊತೆಗೆ ಕುಸ್ತಿ ಸಂಸ್ಥೆಯ ಮೇಲೆ ನಿಗಾ ವಹಿಸಲು ಹಾಗೂ ಆಡಳಿತ ನಡೆಸಲು ಸ್ವತಂತ್ರ ಸಮಿತಿಯೊಂದನ್ನು ನೇಮಿಸುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸೂಚನೆ ನೀಡಿದೆ. ಕ್ರೀಡಾ ನಿಯಮಗಳ ಬಗ್ಗೆ ನೂತನ ಸಮಿತಿ ನಿರ್ಲಕ್ಷ್ಯ ತೋರಿದ್ದಕ್ಕೆ ಹಾಗೂ ಚಾಂಪಿಯನ್‌ಶಿಪ್ ಆಯೋಜನೆ ಬಗ್ಗೆ ಆತುರದ ನಿರ್ಧಾರ ಕೈಗೊಂಡಿದ್ದಕ್ಕೆ ಅಮಾನತು ಮಾಡಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.
ಗುರುವಾರ ಹೊಸ ಸಮಿತಿ ಅಧಿಕಾರಕ್ಕೆ ಬಂದಿದ್ದು, ಅದೇ ದಿನ ಸಮಿತಿ ಅಧ್ಯಕ್ಷ ಸಂಜಯ್ ಸಿಂಗ್ ಕಿರಿಯರ ರಾಷ್ಟ್ರೀಯ ಕೂಟಗಳು ವರ್ಷಾಂತ್ಯಕ್ಕೆ ಪ್ರಾರಂಭವಾಗಲಿವೆ ಎಂದು ಘೋಷಿಸಿದ್ದರು. ಆದರೆ ಇದು ನಿಯಮಕ್ಕೆ ವಿರುದ್ಧ. ಕೂಟ ಆಯೋಜನೆಗೂ ಮುನ್ನ ಕುಸ್ತಿಪಟುಗಳಿಗೆ ಸಿದ್ಧತೆಗೆ ಕನಿಷ್ಠ ಸಮಯಾವಕಾಶವನ್ನು ನೀಡಿಲ್ಲ ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.
ಕಾನೂನು ಹೋರಾಟ:
ಅಮಾನತು ಆದೇಶವನ್ನು ಹಿಂಪಡೆಯುವಂತೆ ಸಮಿತಿಯ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಸರ್ಕಾರಕ್ಕೆ ವಿನಂತಿಸಿದ್ದಾರೆ. ‘ನಾವು ನಿಯಮ ಉಲ್ಲಂಘನೆ ಮಾಡಿಲ್ಲ. ಅದಕ್ಕೆ ದಾಖಲೆ ಕೊಡುತ್ತೇವೆ. ಕ್ರೀಡಾ ಸಚಿವರಿಗೆ ಅದೇಶ ಹಿಂಪಡೆಯಲು ಮನವಿ ಮಾಡುತ್ತೇವೆ. ಈ ಪ್ರಯತ್ನ ಫಲಿಸದಿದ್ದರೆ ಮುಂದೆ ಕಾನೂನು ಹೋರಾಟದ ಆಯ್ಕೆ ಇಟ್ಟುಕೊಂಡಿದ್ದೇವೆ’ ಎಂದು ಸಂಜಯ್ ತಿಳಿಸಿದ್ದಾರೆ.
ನನಗೆ ಸಂಬಂಧವಿಲ್ಲ- ಬ್ರಿಜ್:ಕುಸ್ತಿ ಸಂಸ್ಥೆ ಅಮಾನತು ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್, ಈ ಬಗ್ಗೆ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಬೇಕೇ ಅಥವಾ ಕಾನೂನು ಪ್ರಕ್ರಿಯೆ ನಿರ್ವಹಿಸಬೇಕೇ ಎಂಬುದನ್ನು ಹೊಸ ಸಮಿತಿ ನಿರ್ಧರಿಸಲಿದೆ. ಡಬ್ಲ್ಯುಎಫ್‌ಐ ಚಟುವಟಿಕೆಯಲ್ಲಿ ನಾನು ಇನ್ನುಮುಂದೆ ಭಾಗಿಯಾಗುವುದಿಲ್ಲ. ಕುಸ್ತಿಗಾಗಿ 12 ವರ್ಷ ದುಡಿದಿದ್ದೇನೆ. ಇನ್ನು ನಿವೃತ್ತಿಯಾಗುತ್ತೇನೆ. ಕ್ರೀಡೆಗೂ ನನಗೂ ಇನ್ನು ಸಂಬಂಧವಿಲ್ಲ. ಚುನಾವಣೆ ಕಡೆ ಗಮನ ಹರಿಸುತ್ತೇನೆ’ ಎಂದಿದ್ದಾರೆ.
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.