ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ : ಗುಕೇಶ್‌ ಮುಡಿಗೆ ಚೆಸ್‌ ವಿಶ್ವ ಕಿರೀಟ!

KannadaprabhaNewsNetwork |  
Published : Dec 13, 2024, 12:50 AM ISTUpdated : Dec 13, 2024, 03:49 AM IST
ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ ಸಂಭ್ರಮದಲ್ಲಿ ಭಾರತದ ಡಿ.ಗುಕೇಶ್‌.  | Kannada Prabha

ಸಾರಾಂಶ

ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆದ್ದ ಭಾರತದ ಗ್ರ್ಯಾಂಡ್‌ ಮಾಸ್ಟರ್‌. ಚೀನಾದ ಡಿಂಗ್‌ ಲಿರೆನ್‌ ವಿರುದ್ಧ 7.5-6.5 ಅಂಕಗಳಲ್ಲಿ ಗೆಲುವು. 18 ದಿನಗಳ ಹೋರಾಟದಲ್ಲಿ ಕೊನೆಗೂ 18ರ ಭಾರತೀಯನಿಗೆ ಯಶಸ್ಸು. 14ನೇ ಹಾಗೂ ಕೊನೆಯ ಸುತ್ತಿನಲ್ಲಿ ಅತಿರೋಚಕ ಗೆಲುವು. ವಿಶ್ವ ಚಾಂಪಿಯನ್‌ ಆದ ಅತಿ ಕಿರಿಯ ಆಟಗಾರ. 

ಸಿಂಗಾಪುರ: ಭಾರತದ ಗ್ರ್ಯಾಂಡ್‌ ಮಾಸ್ಟರ್‌, 18 ವರ್ಷದ ಡಿ.ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ನ.25ರಂದು ಸಿಂಗಾಪುರದಲ್ಲಿ ಆರಂಭಗೊಂಡಿದ್ದ 2023ರ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಗುರುವಾರ ಅತಿರೋಚಕ ಗೆಲುವು ಸಾಧಿಸಿದ ಗುಕೇಶ್‌, ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ಅತಿ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದರು.

14ನೇ ಹಾಗೂ ಕೊನೆಯ ಸುತ್ತಿಗೂ ಮುನ್ನ ಉಭಯ ಆಟಗಾರರು ತಲಾ 6.5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಕೊನೆಯ ಸುತ್ತು ಸಾಗಿದ ರೀತಿ ನೋಡಿದಾಗ, ಎಲ್ಲರೂ ಈ ಸುತ್ತು ಸಹ ಡ್ರಾ ಆಗಲಿದ್ದು ಚಾಂಪಿಯನ್‌ ಯಾರೆಂದು ನಿರ್ಧರಿಸಲು ಟೈ ಬ್ರೇಕರ್‌ ಮೊರೆ ಹೋಗಬೇಕಾಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ, 4 ಗಂಟೆ, 58 ನಡೆಗಳ ಬಳಿಕ 14ನೇ ಸುತ್ತು ಗುಕೇಶ್‌ ಪಾಲಾಯಿತು. 

ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದ ಭಾರತದ 2ನೇ ಹಾಗೂ ಒಟ್ಟಾರೆ 18ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ರೋಚಕ ಹಣಾಹಣಿ: ಕೊನೆಯ ಸುತ್ತನ್ನು ಕಪ್ಪು ಕಾಯಿಗಳೊಂದಿಗೆ ಆಡಿದ ಗುಕೇಶ್‌, ಪಂದ್ಯ ಸಾಗಿದಂತೆ ಗೆಲ್ಲುವ ಫೇವರಿಟ್‌ ಅಂತೇನೂ ಕಂಡು ಬರಲಿಲ್ಲ. ಆದರೆ ಯಾವ ಹಂತದಲ್ಲೂ ಲಿರೆನ್‌ ದೊಡ್ಡ ಮಟ್ಟದ ಮೇಲುಗೈ ಸಾಧಿಸಲು ಗ್ರ್ಯಾಂಡ್‌ ಮಾಸ್ಟರ್‌ ಗುಕೇಶ್‌ ಬಿಡಲಿಲ್ಲ. ಪಂದ್ಯ ಡ್ರಾದತ್ತ ಸಾಗುತ್ತಿದೆ ಎಂದು ಅನಿಸಿ ಉಭಯ ಆಟಗಾರರು ಟೈ ಬ್ರೇಕರ್‌ಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. 

ಇಬ್ಬರ ಬಳಿಯೂ ಉಳಿದಿದ್ದು ತಲಾ ಒಂದು ರೂಕ್‌ (ಆನೆ) ಹಾಗೂ ಬಿಷಪ್‌ (ಒಂಟೆ). ಈ ಹಂತದಲ್ಲಿ ಲಿರೆನ್‌ ಬಹಳ ದೊಡ್ಡ ಎಡವಟ್ಟು ಮಾಡಿದರು. ಅವರ ಕೊನೆಯ ನಡೆ, ಚೆಸ್‌ ಜಗತ್ತಿಗೆ ಅಚ್ಚರಿ ಮೂಡಿಸಿತು. ಪಂದ್ಯದುದ್ದಕ್ಕೂ ಅತ್ಯುತ್ತಮ ಹೋರಾಟ ನಡೆಸಿದ ಲಿರೆನ್‌, ಕೊನೆಗೆ ವಿಶ್ವ ಕಿರೀಟವನ್ನು ಗುಕೇಶ್‌ಗೆ ಒಪ್ಪಿಸಿ ನಿರ್ಗಮಿಸಿದರು.

ಒಂದು ವೇಳೆ ಗುರುವಾರದ ಸುತ್ತು ಸಹ ಡ್ರಾಗೊಂಡಿದ್ದರೆ, ಆಗ ಶುಕ್ರವಾರ ಟೈ ಬ್ರೇಕರ್‌ ನಡೆಸಲಾಗುತ್ತಿತ್ತು. ಅದಕ್ಕೆ ಅವಕಾಶ ಕೊಡದ ಗುಕೇಶ್‌, ಐತಿಹಾಸಿಕ ಸಾಧನೆಯೊಂದಿಗೆ ಅತಿ ಕಿರಿಯ ವಿಶ್ವ ಚಾಂಪಿಯನ್‌ ಎನಿಸಿದರು.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌