ನವದೆಹಲಿ: ನಾಯಕನ್ನಾಗಿ ಮಾಡುವುದಾದರೆ ಮಾತ್ರ ಗುಜರಾತ್ ಜೈಂಟ್ಸ್ ತಂಡ ಬಿಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರುವುದಾಗಿ ಹಾರ್ದಿಕ್ ಪಾಂಡ್ಯ ಷರತ್ತು ಹಾಕಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತಮ್ಮ ತಂಡಕ್ಕೆ ಬರುವಂತೆ ಮುಂಬೈ ಮಾಲಿಕರು ಸಂಪರ್ಕಿಸಿದಾಗ, ಹಾರ್ದಿಕ್ ನಾಯಕತ್ವಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ಒಪ್ಪಿದ ತಂಡದ ಮಾಲಿಕ ಆಕಾಶ್ ಅಂಬಾನಿ, ಏಕದಿನ ವಿಶ್ವಕಪ್ ಆರಂಭಗೊಳ್ಳುವ ಮೊದಲೇ ರೋಹಿತ್ ಶರ್ಮಾ ಜೊತೆ ಚರ್ಚಿಸಿ, ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಎನ್ನಲಾಗಿದೆ. ಇನ್ನು 2024ರ ಆವೃತ್ತಿ ಬಳಿಕ ಐಪಿಎಲ್‌ಗೆ ರೋಹಿತ್ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹಬ್ಬಿದೆ.
ನಾಯಕತ್ವ ಕೈತಪ್ಪಿದ್ದಕ್ಕೆ ಸೂರ್ಯಕುಮಾರ್ ಬೇಸರ?ಮುಂಬೈ ಇಂಡಿಯನ್ಸ್ ಮಾಲಿಕರು ತಂಡದ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸದ್ದಕ್ಕೆ ಸೂರ್ಯಕುಮಾರ್ ಯಾದವ್ ಬೇಸರಗೊಂಡಿದ್ದಾರಾ ಎನ್ನುವ ಚರ್ಚೆ ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ. ಹಾರ್ದಿಕ್‌ರನ್ನು ನಾಯಕನನ್ನಾಗಿ ಘೋಷಿಸಿದ ಬಳಿಕ ಸೂರ್ಯ ಟ್ವೀಟರ್‌ನಲ್ಲಿ ಒಡೆದ ಹೃದಯದ ಎಮೋಜಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.ಕಳೆದ ತಿಂಗಳು ಹಾರ್ದಿಕ್ ಮುಂಬೈ ತಂಡಕ್ಕೆ ಸೇರ್ಪಡೆಗೊಂಡಾಗ, ಬೂಮ್ರಾ ಸಹ ಸಾಮಾಜಿಕ ತಾಣದಲ್ಲಿ ಮಾರ್ಮಿಕ ಸಂದೇಶವೊಂದನ್ನು ಹಂಚಿಕೊಂಡಿದ್ದರು.ಇನ್‌ಸ್ಟಾಗ್ರಾಂನಲ್ಲಿ ಮುಂಬೈಗೆ 7 ಲಕ್ಷ ಹಿಂಬಾಲಕರು ಖೋತಾ!
ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ನೇಮಿಸಿರುವುದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಹಾರ್ದಿಕ್ ನೇಮಕದ ಬಳಿಕ, ಮುಂಬೈ ಇಂಡಿಯನ್ಸ್ ಸಾಮಾಜಿಕ ತಾಣ ಇನ್‌ಸ್ಟಾಗ್ರಾಂನಲ್ಲಿ 7 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಕಳೆದುಕೊಂಡಿದೆ.ಪಾಂಡ್ಯ ಹೊಸ ನಾಯಕ ಎಂದು ಘೋಷಿಸುವ ಮುನ್ನ 1.32 ಕೋಟಿ ಇದ್ದ ಹಿಂಬಾಲಕರ ಸಂಖ್ಯೆ ಶನಿವಾರ ರಾತ್ರಿ ವೇಳೆಗೆ 1.25 ಕೋಟಿಗೆ ಇಳಿಕೆಯಾಗಿತ್ತು. ಟ್ವೀಟರ್‌ನಲ್ಲೂ ಮುಂಬೈ ಇಂಡಿಯನ್ಸ್ 40000ಕ್ಕೂ ಹೆಚ್ಚು ಹಿಂಬಾಲಕರನ್ನು ಕಳೆದುಕೊಂಡಿದೆ.