ದಕ್ಷಿಣ ಆಫ್ರಿಕಾ ಒನ್‌ಡೇ ಚಾಲೆಂಜ್‌ಗೆ ರಾಹುಲ್‌ ಬಳಗ ರೆಡಿ, ಇಂದು ಮೊದಲ ಪಂದ್ಯ

KannadaprabhaNewsNetwork |  
Published : Dec 17, 2023, 01:45 AM IST
ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಕನ್ನಡಿಗ ಕೆ.ಎಲ್‌.ರಾಹುಲ್‌.  | Kannada Prabha

ಸಾರಾಂಶ

ಟೀಂ ಇಂಡಿಯಾಗೆ ಹೊಸ ಚಾಲೆಂಜ್‌. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಇಂದು ಸಿಗಲಿದೆ ಚಾಲನೆ. ಭಾರತಕ್ಕೆ ಸರಣಿ ಗೆಲ್ಲಿಸಿಕೊಡಲು ಕನ್ನಡಿಗ ಕ್ಯಾಪ್ಟನ್‌ ಕೆ.ಎಲ್‌.ರಾಹುಲ್‌ ರೆಡಿ.

ಜೋಹಾನ್ಸ್‌ಬರ್ಗ್‌: ಒಂದು ತಿಂಗಳ ಹಿಂದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮಹತ್ವದ ಏಕದಿನ ಪಂದ್ಯದಲ್ಲಿ ಸೋಲುಂಡಿದ್ದವು. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ದ.ಆಫ್ರಿಕಾ ಸೋತರೆ, ಭಾರತಕ್ಕೆ ಫೈನಲ್‌ನಲ್ಲಿ ಆಘಾತ ಎದುರಾಗಿತ್ತು. ಭಾನುವಾರ ಎರಡೂ ತಂಡಗಳು 50 ಓವರ್ ಕ್ರಿಕೆಟ್‌ನಲ್ಲಿ ಹೊಸ ಜರ್ನಿ ಆರಂಭಿಸಲಿದ್ದು, ಮಾಡು ಇಲ್ಲವೇ ಮಡಿ ಎಂಬ ಒತ್ತಡವಿಲ್ಲದೆ ಆಡಲಿವೆ.ಉಭಯ ತಂಡಗಳು ಈ ಸರಣಿಯಲ್ಲಿ ಕೆಲ ಹೊಸ ಪ್ರತಿಭೆಗಳನ್ನು ಆಡಿಸುವ ಪ್ರಯೋಗ ನಡೆಸಲಿದ್ದು, ಕೆಲ ಹಿರಿಯ ಆಟಗಾರರಿಗೂ ಇದು ಸರಣಿ ಉತ್ತಮ ಅವಕಾಶವೆನಿಸಿದೆ. ಟಿ20 ಸರಣಿಯಲ್ಲಿ ಆಡದ ಕೆ.ಎಲ್‌.ರಾಹುಲ್‌, ಏಕದಿನ ಸರಣಿಯಲ್ಲಿ ತಮ್ಮ ಆಟದ ಮೂಲಕ ತಾವು ಟಿ20 ಮಾದರಿಯಲ್ಲಿ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಆಯ್ಕೆಗಾರರಿಗೆ ಮನದಟ್ಟು ಮಾಡಿಸಲು ಕಾಯುತ್ತಿದ್ದಾರೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇಟ್ಟುಕೊಂಡಿರುವ ರಾಹುಲ್, ಈ ಸರಣಿಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಬೇಕಿದೆ.ಟಿ20 ಸರಣಿಯಲ್ಲಿ ಆಕರ್ಷಕ ಆಟವಾಡಿದ ರಿಂಕು ಸಿಂಗ್‌ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಉತ್ಸುಕರಾಗಿದ್ದು, ಟೆಸ್ಟ್‌ ಸರಣಿಯತ್ತ ಗಮನ ಹರಿಸುವ ಸಲುವಾಗಿ ಏಕದಿನ ಸರಣಿಯಲ್ಲಿ ಶುಭ್‌ಮನ್‌ ಗಿಲ್‌ ಆಡದ ಕಾರಣ, ತಮಿಳುನಾಡಿನ ಯುವ ಪ್ರತಿಭೆ ಬಿ.ಸಾಯಿ ಸುರ್ದಶನ್‌ಗೆ ಆರಂಭಿಕನ ಸ್ಥಾನ ಸಿಗುವ ನಿರೀಕ್ಷೆ ಇದೆ.ಇನ್ನು ದ.ಆಫ್ರಿಕಾ ತಂಡವೂ ಬಹುತೇಕ ಅನನುಭವಿಗಳಿಂದಲೇ ಕೂಡಿದ್ದು, 10 ಅಥವಾ ಅದಕ್ಕಿಂತ ಕಡಿಮೆ ಏಕದಿನ ಪಂದ್ಯಗಳನ್ನಾಡಿದ ಐವರು ಆಟಗಾರರಿದ್ದಾರೆ. ಕ್ವಿಂಟನ್‌ ಡಿ ಕಾಕ್‌ ನಿವೃತ್ತಿ ಪಡೆದ ಕಾರಣ, ರೀಜಾ ಹೆಂಡ್ರಿಕ್ಸ್‌ಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ಎಲ್ಲರ ಕಣ್ಣು ಅವರ ಮೇಲಿದೆ.ಒಟ್ಟು ಮುಖಾಮುಖಿ: 91ಭಾರತ: 38ದ.ಆಫ್ರಿಕಾ: 50ಫಲಿತಾಂಶವಿಲ್ಲ: 03ಸಂಭವನೀಯ ಆಟಗಾರರ ಪಟ್ಟಿಭಾರತ: ಋತುರಾಜ್‌, ಸಾಯಿ ಸುದರ್ಶನ್‌, ತಿಲಕ್‌, ಶ್ರೇಯಸ್‌, ರಾಹುಲ್‌(ನಾಯಕ), ರಿಂಕು/ಸ್ಯಾಮ್ಸನ್‌, ಅಕ್ಷರ್‌, ಅರ್ಶ್‌ದೀಪ್‌, ಆವೇಶ್‌, ಕುಲ್ದೀಪ್‌, ಮುಕೇಶ್‌.ದ.ಆಫ್ರಿಕಾ: ಹೆಂಡ್ರಿಕ್ಸ್‌, ಡೆ ಜೊರ್ಜಿ, ಡುಸ್ಸೆನ್‌, ಮಾರ್ಕ್‌ರಮ್‌(ನಾಯಕ), ಕ್ಲಾಸೆನ್‌, ಮಿಲ್ಲರ್‌, ಫೆಲುಕ್ವಾಯೋ, ಮುಲ್ಡರ್‌, ಬರ್ಗರ್‌, ಕೇಶವ್‌/ಶಮ್ಸಿ, ವಿಲಿಯಮ್ಸ್‌.ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಡಿಸ್ನಿ+ ಹಾಟ್‌ಸ್ಟಾರ್‌ಪಿಚ್‌ ರಿಪೋರ್ಟ್‌ವ್ಯಾಂಡರರ್ಸ್‌ ಕ್ರೀಡಾಂಗಣದ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ಕಳೆದ 4 ಪಂದ್ಯಗಳಲ್ಲಿ 3ರ ಮೊದಲ ಇನ್ನಿಂಗ್ಸ್‌ಗಳಲ್ಲಿ 300ಕ್ಕೂ ಹೆಚ್ಚು ರನ್‌ ದಾಖಲಾಗಿದೆ. ಭಾನುವಾರ ಮಳೆ ಮುನ್ಸೂಚನೆ ಇಲ್ಲ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!