ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಗೆದ್ದು ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಭಾರತದ ತಾರಾ ಶೂಟರ್ ಮನು ಭಾಕರ್ ಕನಸು ನನಸಾಗಲಿಲ್ಲ. ಶನಿವಾರ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದ ಫೈನಲ್‌ನಲ್ಲಿ 4ನೇ ಸ್ಥಾನ ಪಡೆದು ಭಾಕರ್ ಅಲ್ಪದರಲ್ಲೇ ಪದಕ ತಪ್ಪಿಸಿಕೊಂಡರು.
ಭಾರೀ ರೋಚಕತೆ ಸೃಷ್ಟಿಸಿದ್ದ ಫೈನಲ್ ಪಂದ್ಯದಲ್ಲಿ ಮನು ಒಂದು ಹಂತದಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರು. ಆದರೆ ಶೂಟ್‌ಆಪ್‌ನಲ್ಲಿ ಮನುಗೆ ಅದೃಷ್ಟ ಕೈ ಹಿಡಿಯಲಿಲ್ಲ.
ಫೈನಲ್ ಪಂದ್ಯದ ಮೊದಲ ಸೀರಿಸ್‌ನ 5 ಪ್ರಯತ್ನಗಳಲ್ಲಿ ಮನು 2 ಬಾರಿ ಮಾತ್ರ ಗುರಿಗೆ ಶೂಟ್ ಮಾಡಿದರು. ಹೀಗಾಗಿ 8 ಸ್ಪರ್ಧಿಗಳ ಪೈಕಿ 6ನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ 2 ಮತ್ತು 3ನೇ ಸೀರೀಸ್ ಬಳಿಕ 2ನೇ ಸ್ಥಾನಕ್ಕೇರಿದರು. 4ನೇ ಸೀರೀಸ್‌ನಲ್ಲಿ ಕೇವಲ 3 ಅಂಕ ಗಳಿಸಿದ ಮನು ಮತ್ತೆ 6ನೇ ಸ್ಥಾನಕ್ಕೆ ಕುಸಿದರು. ಬಳಿಕ ಪುಟಿದೆದ್ದ ಭಾಕರ್ 5ನೇ ಸೀರೀಸ್ ಬಳಿಕ 3ನೇ, 7ನೇ ಸೀರೀಸ್ ಬಳಿಕ ಅಗ್ರ-2ನೇ ಸ್ಥಾನ ಕಾಯ್ದುಕೊಂಡರು. ಇನ್ನೇನು ಪದಕ ಖಚಿತವಾಯಿತು ಎನ್ನುಷ್ಟರಲ್ಲಿ 8ನೇ ಸೀರಿಸ್‌ನಲ್ಲಿ ಎಡವಿದ ಭಾಕರ್ ಕೇವಲ 2 ಬಾರಿ ಗುರಿಗೆ ಶೂಟ್ ಮಾಡಿದರು.
ಇದರಿಂದಾಗಿ ಮನು ಹಾಗೂ ಹಂಗೇರಿಯ ವೆರೋನಿಕಾ ಮೇಜರ್ ಅಂಕಗಳು ತಲಾ 28 ಅಂಕಗಳೊಂದಿಗೆ ಟೈ ಆಯಿತು. ಹೀಗಾಗಿ 3ನೇ ಸ್ಥಾನಕ್ಕಾಗಿ ಶೂಟ್‌ಆಫ್ ನಡೆಸಲಾಯಿತು.ಮನು 5 ಪ್ರಯತ್ನಗಳಲ್ಲಿ 3 ಬಾರಿ ಮಾತ್ರ ಗುರಿಗೆ ಶೂಟ್ ಮಾಡಿದರೆ, ವೆರೋನಿಕಾ 4 ಅಂಕ ಸಂಪಾದಿಸಿ 3ನೇ ಸ್ಥಾನ ಗಿಟ್ಟಿಸಿಕೊಂಡರು.
ದಕ್ಷಿಣ ಕೊರಿಯಾದ ಯಾಂಗ್ ಜಿನ್ ಚಿನ್ನಕ್ಕೆ ಕೊರಳೊಡ್ಡಿದರೆ, ಫ್ರಾನ್ಸ್‌ನ ಕ್ಯಾಮಿಲ್ಲೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.ಮನು ಕ್ರೀಡಾಕೂಟದಲ್ಲಿ 2 ಪದಕಗಳನ್ನು ಗೆದ್ದಿದ್ದರು. 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗ ಹಾಗೂ 10 ಮೀ. ಏರ್ ಪಿಸ್ತೂಲ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಜಯಿಸಿದ್ದರು. ಶನಿವಾರವೂ ಪದಕ ಗೆದ್ದಿದ್ದರೆ ಒಲಿಂಪಿಕ್ಸ್‌ನಲ್ಲಿ 3 ವೈಯಕ್ತಿಕ ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ದಾಖಲೆ ಬರೆಯುತ್ತಿದ್ದರು.