ಭಾರತ vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ರೋಚಕ ಟೈ : ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಟೀಂ ಇಂಡಿಯಾ

KannadaprabhaNewsNetwork | Updated : Aug 03 2024, 04:12 AM IST

ಸಾರಾಂಶ

ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಭಾರತ. ನಿಸ್ಸಾಂಕ, ವೆಲ್ಲಲಗೆ ಫಿಫ್ಟಿ, ಲಂಕಾ 8 ವಿಕೆಟಿಗೆ 230. ರೋಹಿತ್‌ ಅಬ್ಬರದ ಅರ್ಧಶತಕ. ಕೈಕೊಟ್ಟ ಇತರ ಬ್ಯಾಟರ್ಸ್‌. 47.5 ಓವರಲ್ಲಿ 230 ರನ್‌ಗೆ ಆಲೌಟ್‌. ಸೂಪರ್‌ ಓವರ್‌ ಇಲ್ಲ, ಪಂದ್ಯ ಟೈ

ಕೊಲಂಬೊ: ಸುಲಭದಲ್ಲಿ ಗೆಲ್ಲಬಹುದು ಎಂದು ಊಹಿಸಲಾಗಿದ್ದ ಪಂದ್ಯವನ್ನು ಕೈ ಚೆಲ್ಲಿದ ಹಾಲಿ ಟಿ20 ವಿಶ್ವ ಚಾಂಪಿಯನ್‌ ಭಾರತ ತಂಡ, ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಬೌಲರ್‌ಗಳ ಶಿಸ್ತುಬದ್ಧ ದಾಳಿ, ರೋಹಿತ್‌ ಶರ್ಮಾರ ಸ್ಫೋಟಕ ಆರಂಭದ ಹೊರತಾಗಿಯೂ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯ ಮೊದಲ ಪಂದ್ ಪಂದ್ಯ ಗೆಲ್ಲಲು ವಿಫಲವಾಗಿದೆ. ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 8 ವಿಕೆಟ್‌ ಕಳೆದುಕೊಂಡರು 230 ರನ್‌ ಕಲೆಹಾಕಿತು. 

ಗುರಿ ದೊಡ್ಡದಲ್ಲದಿದ್ದರೂ ಭಾರತದ ಬ್ಯಾಟರ್‌ಗಳು ಪರದಾಡಿದರು. ತಂಡ ಗೆಲುವಿನ ಸನಿಹದಲ್ಲಿದ್ದರೂ 47.5 ಓವರ್‌ಗಳಲ್ಲಿ 230 ರನ್‌ಗೆ ಆಲೌಟಾಯಿತು.ಸಿಕ್ಸರ್‌ ಮೂಲಕವೇ ತಂಡದ ರನ್‌ ಖಾತೆ ತೆರೆದ ನಾಯಕ ರೋಹಿತ್‌ ಶರ್ಮಾ ಸ್ಫೋಟಕ ಆಟವಾಡಿದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಆರಂಭಿಕ ಆಟಗಾರ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ನೊಂದಿಗೆ 58 ರನ್‌ ಸಿಡಿಸಿ ದುನಿತ್‌ ವೆಲ್ಲಲಗೆ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. 

ಆ ಬಳಿಕ ಯಾವ ಬ್ಯಾಟರ್‌ಗೂ ದೊಡ್ಡ ಇನ್ನಿಂಗ್ಸ್‌ ಕಟ್ಟಲು ಸಾಧ್ಯವಾಗಲಿಲ್ಲ. ರೋಹಿತ್‌ ಜೊತೆಗೆ ಇನ್ನಿಂಗ್ಸ್‌ ಆರಂಭಿಸಿದ್ದ ಶುಭ್‌ಮನ್‌ ಗಿಲ್‌ 16 ರನ್‌ ಗಳಿಸಲು 35 ಎಸೆತಗಳನ್ನು ತೆಗೆದುಕೊಂಡರು. ವಿರಾಟ್‌ ಕೊಹ್ಲಿ ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದರೂ 24 ರನ್‌ಗೆ ನಿರ್ಗಮಿಸಿದರು. ವಾಷಿಂಗ್ಟನ್‌ ಸುಂದರ್‌ 5, ಶ್ರೇಯಸ್‌ ಅಯ್ಯರ್‌ 23, ಕೆ.ಎಲ್‌.ರಾಹುಲ್‌ 31 ರನ್‌ ಸಿಡಿಸಿ ಪೆವಿಲಿಯನ್ ಸೇರಿದರು. 189ಕ್ಕೆ 6 ವಿಕೆಟ್‌ ಕಳೆದುಕೊಂಡ ತಂಡ ಸೋಲಿನ ಭೀತಿಗೆ ಸಿಲುಕಿತು. ಅಕ್ಷರ್‌ ಪಟೇಲ್‌ 33 ರನ್‌ ಗಳಿಸಿ ಔಟಾದ ಬಳಿಕ ಶಿವಂ ದುಬೆ 25 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ 1 ರನ್‌ ಬೇಕಿದ್ದಾಗ ದುಬೆ, ಬಳಿಕ ಅರ್ಶ್‌ದೀಪ್‌ ಔಟಾದರು.

ಶಿಸ್ತುಬದ್ಧ ದಾಳಿ: ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಲಂಕಾ ಆರಂಭಿಕ ಆಘಾತಕ್ಕೊಳಗಾಯಿತು. 3ನೇ ಓವರ್‌ನಲ್ಲೇ ಆವಿಷ್ಕಾ ಫೆರ್ನಾಂಡೊ ವಿಕೆಟ್‌ ಕಿತ್ತ ಸಿರಾಜ್‌ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ ಪಥುಂ ನಿಸ್ಸಾಂಕ ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಅವರು 75 ಎಸೆತಗಳಲ್ಲಿ 56 ರನ್‌ ಸಿಡಿಸಿದರು. ಕುಸಾಲ್‌ ಮೆಂಡಿಸ್‌ 14, ಸದೀರ ಸಮರವಿಕ್ರಮ 8, ನಾಯಕ ಅಸಲಂಕ 13, ಜನಿತ್‌ ಲಿಯಾನಗೆ 20 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

 101ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡ ಬೇಗನೇ ಆಲೌಟಾಗುವ ಭೀತಿಯಲ್ಲಿತ್ತು. ಆದರೆ ಕೊನೆವರೆಗೂ ಹೋಡಾಡಿದ ದುನಿತ್‌ ವೆಲ್ಲಲಗೆ 65 ಎಸೆತಗಳಲ್ಲಿ ಔಟಾಗದೆ 67 ರನ್‌ ಸಿಡಿಸಿ ತಂಡವನ್ನು 230ರ ಗಡಿ ತಲುಪಿಸಿದರು. ಕೊನೆಯಲ್ಲಿ ಹಸರಂಗ 24, ಅಕೀಲ ಧನಂಜಯ 17 ರನ್‌ ಕೊಡುಗೆ ನೀಡಿದರು.ಭಾರತದ ಪರ ಅರ್ಶ್‌ದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ 2, ಸಿರಾಜ್‌, ಶಿವಂ ದುಬೆ, ಕುಲ್ದೀಪ್‌ ಯಾದವ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ 1 ವಿಕೆಟ್‌ ಕಿತ್ತರು.ಸ್ಕೋರ್‌: ಶ್ರೀಲಂಕಾ 50 ಓವರಲ್ಲಿ 230/8 (ವೆಲ್ಲಲಗೆ 67*, ನಿಸ್ಸಾಂಕ 56, ಅಕ್ಷರ್‌ 2-33, ಅರ್ಶ್‌ದೀಪ್‌ 2-47), ಭಾರತ 47.5 ಓವರ್‌ಗಳಲ್ಲಿ 230/10 (ರೋಹಿತ್‌ 58, ಅಕ್ಷರ್‌ 33, ಹಸರಂಗ 3-58)

ಸಿಕ್ಸರ್‌ನಲ್ಲಿ ರೋಹಿತ್‌ ಶರ್ಮಾ ವಿಶ್ವ ದಾಖಲೆ

ಪಂದ್ಯದಲ್ಲಿ 3 ಸಿಕ್ಸರ್‌ ಸಿಡಿಸಿದ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಗರಿಷ್ಠ ಸಿಕ್ಸರ್‌ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ರೋಹಿತ್‌ 124 ಪಂದ್ಯಗಳಲ್ಲಿ 234 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮೊರ್ಗನ್‌ ದಾಖಲೆ ಮುರಿದರು. ಮೊರ್ಗನ್‌ 198 ಪಂದ್ಯಗಳಲ್ಲಿ 233 ಸಿಕ್ಸರ್‌ ಸಿಡಿಸಿದ್ದರು. ಎಂ.ಎಸ್‌.ಧೋನಿ 332 ಪಂದ್ಯಗಳಲ್ಲಿ 211 ಸಿಕ್ಸರ್‌ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ 324 ಪಂದ್ಯಗಳಲ್ಲಿ 171, ನ್ಯೂಜಿಲೆಂಡ್‌ನ ಬ್ರೆಂಡಾನ್‌ ಮೆಕಲಂ 121 ಪಂದ್ಯಗಳಲ್ಲಿ 170 ಸಿಕ್ಸರ್‌ ಬಾರಿಸಿದ್ದಾರೆ. 

ಭಾರತ- ಶ್ರೀಲಂಕಾ ಸತತ 2 ಪಂದ್ಯ ಟೈ

ಭಾರತ ಹಾಗೂ ಶ್ರೀಲಂಕಾ ನಡುವಿನ ಸತತ 2ನೇ ಪಂದ್ಯ ಟೈ ಆಯಿತು. ಟಿ20 ಸರಣಿಯ 3ನೇ ಪಂದ್ಯ ಟೈ ಆಗಿತ್ತು. ಸೂಪರ್‌ ಓವರ್‌ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಆದರೆ ಶುಕ್ರವಾರದ ಏಕದಿನ ಪಂದ್ಯಕ್ಕೆ ಸೂಪರ್‌ ಓವರ್‌ ಇರಲಿಲ್ಲ. ಹೀಗಾಗಿ ಪಂದ್ಯವನ್ನು ಟೈ ಎಂದೇ ಘೋಷಿಸಲಾಯಿತು.

Share this article