ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಂಚಿನ ರಾಣಿ ಮನುಗೆ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಬಂಗಾರದ ಕನಸು

KannadaprabhaNewsNetwork | Updated : Aug 03 2024, 04:15 AM IST

ಸಾರಾಂಶ

ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಮನು ಭಾಕರ್‌ ಫೈನಲ್‌ಗೆ. ಪ್ರೆಸಿಷನ್‌, ರ್‍ಯಾಪಿಡ್‌ ಸುತ್ತಿನಲ್ಲಿ ಒಟ್ಟು 590 ಅಂಕ, 2ನೇ ಸ್ಥಾನ. ಇಂದು ಫೈನಲ್‌ ಹಣಾಹಣಿ, ಮನುಗೆ ಐತಿಹಾಸಿಕ ಹ್ಯಾಟ್ರಿಕ್‌ ಪದಕದ ನಿರೀಕ್ಷೆ. ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನಿಯಾಗಿ ಹೊರಬಿದ್ದ ಇಶಾ

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ ಮತ್ತೊಂದು ಐತಿಹಾಸಿಕ ಪದಕದ ಸನಿಹದಲ್ಲಿದೆ. ಈಗಾಗಲೇ ಕ್ರೀಡಾಕೂಟದಲ್ಲಿ 2 ಕಂಚಿನ ಪದಕ ಗೆದ್ದಿರುವ ಸ್ಟಾರ್‌ ಶೂಟರ್‌ ಮನು ಭಾಕರ್‌ ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ಫೈನಲ್‌ ಸ್ಪರ್ಧೆ ನಡೆಯಲಿದ್ದು, ಮನು ಪ್ಯಾರಿಸ್‌ನಲ್ಲಿ ಐತಿಹಾಸಿಕ ಹ್ಯಾಟ್ರಿಕ್‌ ಹಾಗೂ ಚೊಚ್ಚಲ ಚಿನ್ನದ ಪದಕ ಗೆಲ್ಲುವ ಕಾತರದಲ್ಲಿದ್ದಾರೆ.

ಶುಕ್ರವಾರ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ 22 ವರ್ಷದ ಮನು ಪ್ರೆಸಿಷನ್‌ ಹಾಗೂ ರ್‍ಯಾಪಿಡ್‌ ಸುತ್ತಿನಲ್ಲಿ ಒಟ್ಟು 590 ಅಂಕಗಳೊಂದಿಗೆ 2ನೇ ಸ್ಥಾನ ಗಿಟ್ಟಿಸಿಕೊಂಡರು. ಒಟ್ಟು 40 ಶೂಟರ್‌ಗಳಿದ್ದ ಸ್ಪರ್ಧೆಯಲ್ಲಿ ಮನು ಆರಂಭದಲ್ಲಿ ಅಲ್ಪ ಹಿನ್ನಡೆ ಅನುಭವಿಸಿದರು. 

ಪ್ರೆಸಿಷನ್‌ ಸುತ್ತಿನ 3 ಸೆಟ್‌ಗಳಲ್ಲಿ ಕ್ರಮವಾಗಿ 97, 98 ಹಾಗೂ 99 ಅಂಕಗಳೊಂದಿಗೆ ಒಟ್ಟು 294 ಅಂಕ ಗಳಿಸಿದ ಮನು, ರ್‍ಯಾಪಿಡ್‌ ಸುತ್ತಿನ 3 ಸೆಟ್‌ಗಳಲ್ಲಿ ಕ್ರಮವಾಗಿ 100, 98 ಹಾಗೂ 98 ಅಂಕಕ್ಕೆ ಶೂಟ್‌ ಮಾಡಿ ಒಟ್ಟು 296 ಅಂಕ ಗಳಿಸಿದರು. ಹಂಗೇರಿಯ ಮೇಜರ್‌ ವೆರೋನಿಕಾ 592 ಅಂಕಗಳೊಂದಿಗೆ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೇರಿದರು. ಅಗ್ರ-8 ಶೂಟರ್‌ಗಳು ಪದಕ ಸುತ್ತು ಪ್ರವೇಶಿಸಿದ್ದು, ಶನಿವಾರ ಪದಕಕ್ಕಾಗಿ ಸೆಣಸಲಿದ್ದಾರೆ.

ಇಶಾ ನಿರಾಸೆ: ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಶೂಟರ್‌ ಇಶಾ ಸಿಂಗ್‌ ಫೈನಲ್‌ಗೇರದೆ ನಿರಾಸೆ ಅನುಭವಿಸಿದರು. ಪ್ರೆಸಿಷನ್‌ ಸುತ್ತಿನಲ್ಲಿ (95, 96 ಹಾಗೂ 100) 291 ಅಂಕ ಹಾಗೂ ರ್‍ಯಾಪಿಡ್‌ ಸುತ್ತಿನಲ್ಲಿ (ಕ್ರಮವಾಗಿ 97, 96 ಹಾಗೂ 97) 290 ಅಂಕ ಗಳಿಸಿದರು. ಒಟ್ಟಾರೆ 581 ಅಂಕಗಳೊಂದಿಗೆ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಹ್ಯಾಟ್ರಿಕ್‌ ಪದಕ ಗೆದ್ದರೆ ಇತಿಹಾಸ

ಒಲಿಂಪಿಕ್ಸ್‌ ಇತಿಹಾಸದಲ್ಲೇ ಈ ವರೆಗೂ ಭಾರತದಿಂದ ಯಾರೂ ವೈಯಕ್ತಿಕ 3 ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಭಾಕರ್‌ಗೆ ಹೊಸ ಇತಿಹಾಸ ಬರೆಯುವ ಅವಕಾಶವಿದೆ. ಅಥ್ಲೆಟಿಕ್ಸ್‌ನಲ್ಲಿ ನಾರ್ಮನ್‌ ಪ್ರಿಚರ್ಡ್‌(2 ಬೆಳ್ಳಿ), ಕುಸ್ತಿಯಲ್ಲಿ ಸುಶೀಲ್‌ ಕುಮಾರ್‌(1 ಬೆಳ್ಳಿ, 1 ಕಂಚು), ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು(1 ಬೆಳ್ಳಿ, 1 ಕಂಚು) ಈ ವರೆಗೂ ತಲಾ 2 ಪದಕ ಗೆದ್ದಿದ್ದಾರೆ. ಮನು ಈ ಒಲಿಂಪಿಕ್ಸ್‌ನಲ್ಲೇ 2 ಪದಕ ಗೆದ್ದಿದ್ದಾರೆ.

ಸ್ಕೀಟ್‌: 26ನೇ ಸ್ಥಾನ ಪಡೆದ ಅನಂತ್‌ಜೀತ್‌

ಪುರುಷರ ಸ್ಕೀಟ್‌ ವಿಭಾಗದ ಶೂಟಿಂಗ್‌ನ ಅರ್ಹತಾ ಸುತ್ತಿನ ಮೊದಲ ದಿನ ಭಾರತದ ಅನಂತ್‌ಜೀತ್‌ ಸಿಂಗ್‌ 26ನೇ ಸ್ಥಾನಿಯಾದರು. ಒಟ್ಟು 30 ಶೂಟರ್‌ಗಳಿರುವ ಸ್ಪರ್ಧೆಯಲ್ಲಿ ಅನಂತ್‌ 68 ಅಂಕಗಳನ್ನು ಪಡೆದರು. ಈ ವಿಭಾಗದಲ್ಲಿ ಶನಿವಾರ ಇನ್ನೂ 2 ಸುತ್ತಿನ ಪಂದ್ಯಗಳು ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಅಗ್ರ-6 ಸ್ಥಾನ ಪಡೆಯುವ ಶೂಟರ್‌ಗಳು ಫೈನಲ್‌ ಪ್ರವೇಶಿಸಲಿದ್ದಾರೆ. ಶನಿವಾರ ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಅನಂತ್‌ಗೆ ಫೈನಲ್‌ಗೇರುವ ಅವಕಾಶ ಸಿಗಲಿದೆ.

Share this article