ಪ್ಯಾರಿಸ್ : ಒಲಿಂಪಿಕ್ಸ್‌ನಲ್ಲಿ 4ನೇ ಪದಕ ಗೆಲ್ಲುವ ಭಾರತದ ನಿರೀಕ್ಷೆ ಅಲ್ಪದರಲ್ಲೇ ಕೈ ತಪ್ಪಿದೆ. ಶುಕ್ರವಾರ ಭಾರತದ ತಾರಾ ಆರ್ಚರಿ ಪಟುಗಳಾದ ಅಂಕಿತಾ ಭಕತ್ ಹಾಗೂ ಧೀರಜ್ ಬೊಮ್ಮದೇವರ ಜೋಡಿ ರೀಕರ್ವ್ ಮಿಶ್ರ ತಂಡ ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 2-6 ಅಂಕಗಳಿಂದ ಸೋಲನುಭವಿಸಿತು.ಅರ್ಹತಾ ಸುತ್ತಿನಲ್ಲಿ ಇಂಡೋನೇಷ್ಯಾದ ಚೊಯಿರುನೀಸಾ-ಆರಿಫ್ ಜೋಡಿ ವಿರುದ್ಧ 5-1 ಅಂಕಗಳಿಂದ ಗೆದ್ದ ಅಂಕಿತಾ-ಧೀರಜ್ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಅಭೂತಪೂರ್ವ ಪ್ರದರ್ಶನವನ್ನು ಕ್ವಾರ್ಟರ್‌ನಲ್ಲೂ ಮುಂದುವರಿಸಿದ ಭಾರತೀಯ ಜೋಡಿ, ಸ್ಪೇನ್‌ನ ಕ್ಯಾನಲೆಸ್ ಎಲಿಯಾ-ಗೊಂಜಾಲೆಜ್ ಪ್ಯಾಬ್ಲೊ ವಿರುದ್ಧ 5-3 ಅಂತರದಲ್ಲಿ ಜಯಭೇರಿ ಬಾರಿಸಿತು. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎಂಬ ಖ್ಯಾತಿಗೆ ಪಾತ್ರವಾಯಿತು.
ಆದರೆ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಲಿಮ್ ಶಿಯೋನ್-ಕಿಮ್ ವೂಜಿನ್ ವಿರುದ್ಧ ಭಾರತಕ್ಕೆ 2-6 ಅಂಕಗಳಿಂದ ಆಘಾತಕಾರಿ ಸೋಲು ಎದುರಾಯಿಯತು. ಬಳಿಕ ಕಂಚಿನ ಪದಕ ಪಂದ್ಯದಲ್ಲೂ ಕಳಪೆ ಆಟವಾಡಿದ ಜೋಡಿ, ಅಮೆರಿಕದ ಕ್ಯಾಸೆ ಕಾಫ್‌ಹೊಲ್ಡ್-ಬ್ರಾಡಿ ಎಲಿಸನ್ ವಿರುದ್ಧ ಪರಾಭವಗೊಂಡಿತು. ಸ್ಪರ್ಧೆಯಲ್ಲಿ ದ.ಕೊರಿಯಾ ಚಿನ್ನ, ಜರ್ಮನಿ ಬೆಳ್ಳಿ ಪದಕ ಜಯಿಸಿತು.
ಭಾರತದ ಅಥ್ಲೀಟ್ಸ್‌ಗೆ 40 ಏರ್ ಕಂಡೀಷನರ್ ರವಾನೆ
ಪ್ಯಾರಿಸ್‌ನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಭಾರತದ ಕ್ರೀಡಾಪಟುಗಳಿಗಾಗಿ ಕೇಂದ್ರ ಕ್ರೀಡಾ ಸಚಿವಾಲಯ 40 ಹೆಚ್ಚುವರಿ ಏರ್ ಕಂಡೀಷನರ್(ಎಸಿ)ಗಳನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಪ್ಯಾರಿಸ್‌ನಲ್ಲಿ ಮಳೆ ಸುರಿದಿದ್ದರೂ ಬಳಿಕ ಬಿಸಿಲಿನ ತಾಪ ಹೆಚ್ಚಿದೆ.
ನಗರದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇದ್ದು, ಅಥ್ಲೀಟ್‌ಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯವು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಅಥ್ಲೀಟ್‌ಗಳು ಉಳಿದಿಕೊಂಡಿರುವ ಕ್ರೀಡಾ ಗ್ರಾಮಕ್ಕೆ 40 ಎಸಿಗಳನ್ನು ಕಳುಹಿಸಿಕೊಟ್ಟಿದೆ. ಎಸಿಗಳನ್ನು ಫ್ರಾನ್ಸ್‌ನಲ್ಲೇ ಖರೀದಿಸಿದ್ದು, ಅದನ್ನು ರಾಯಭಾರ ಕಚೇರಿ ಅಥ್ಲೀಟ್‌ಗಳಿಗೆ ತಲುಪಿಸಿದೆ ಎಂದು ತಿಳಿದುಬಂದಿದೆ.