ಬೆಂಗಳೂರು : ಮುಡಾ ಹಗರಣ ಸಂಬಂಧ ರಾಜ್ಯದ ಕಾನೂನು ಪ್ರಕಾರವೇ ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧಕ್ಕೆ ತೆರಳಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಮುಡಾ ದಾಖಲೆಗಳನ್ನು ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಬರೆದ ನಿರ್ಣಯ ಪತ್ರದಲ್ಲಿ ನನ್ನ ಮೇಲೆಯೂ ಆರೋಪ ಇದೆ ಎಂದು ಉಲ್ಲೇಖಿಸಲಾಗಿದೆ. ಆರೋಪ ಇರುವುದು ಸತ್ಯ. ಆದರೆ, ಆರೋಪ ಸಾಬೀತಾಗುವವರೆಗೆ ಅಪರಾಧಿಯಲ್ಲ. ನನ್ನ ಮೇಲಿನ ಆರೋಪವನ್ನು ನಾನು ಎದುರಿಸುತ್ತೇನೆ. ಸಚಿವರು ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡುವುದು ಕಾನೂನು ಬಾಹಿರ ಹಾಗೂ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಆದರೆ, ಕಾನೂನು ಪ್ರಕಾರವೇ ರಾಜ್ಯಪಾಲರನ್ನು ಭೇಟಿಯಾಗಿದ್ದೇನೆ ಎಂದರು.
ಹೈಕೋರ್ಟ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಸಚಿವರು ಆ ಸುತ್ತೋಲೆ ಏನು ಎಂಬುದನ್ನು ನೋಡಿಯೇ ಇಲ್ಲವೇ? ಜನಪ್ರತಿನಿಧಿ ವಿರುದ್ಧ ಪೊಲೀಸ್ ದೂರು ನೀಡಿದ ಬಳಿಕ ಕ್ರಮ ಕೈಗೊಳ್ಳದಿದ್ದರೆ ನಾವು ಖಾಸಗಿ ದೂರಿಗೆ ಹೋಗಬಹುದು. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲು ಪೂರ್ವಾನುಮತಿಯನ್ನು ಲಗತ್ತಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಭಿಯೋಜನೆಗೆ ಅನುಮತಿ ಸಿಕ್ಕರೆ ಮಾತ್ರವೇ ನ್ಯಾಯಾಲಯಕ್ಕೆ ಹೋಗಲು ಸಾಧ್ಯ ಎಂದು ತಿಳಿಸಿದರು.
ಕೆಸರೆ ಗ್ರಾಮದಲ್ಲಿ ಇಲ್ಲದಿದ್ದ ಭೂಮಿಯನ್ನು ಖರೀದಿ ಮಾಡಲಾಗುತ್ತದೆ ಮತ್ತು ಅದನ್ನು ಭೂ ಪರಿವರ್ತನೆ ಮಾಡಲಾಗುತ್ತದೆ. ಇಲ್ಲದೇ ಇದ್ದ ಭೂಮಿಯನ್ನು ದಾನ ಪತ್ರ ಮಾಡಲಾಗುತ್ತದೆ. ಇಲ್ಲದಿದ್ದ ಜಮೀನಿಗೆ ಪರಿಹಾರವಾಗಿ ಪರ್ಯಾಯ ನಿವೇಶನ ಪಡೆದುಕೊಳ್ಳಲಾಗಿದೆ. ಇಲ್ಲದೇ ಇರುವ ಜಮೀನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹೇಗೆ ಪರ್ಯಾಯ ಪರಿಹಾರ ನಿವೇಶನ ಪಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.