ಚೆನ್ನೈ: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ವೇಳೆ ತಮ್ಮ ತಾಯಿಯ ಅನಾರೋಗ್ಯ ಕಾರಣಕ್ಕೆ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ತಂಡ ತೊರೆದು ತಾಯಿಯನ್ನು ನೋಡಲು ತೆರಳಿದ್ದರು. ಅಂದಿನ ಘಟನೆಯನ್ನು ಅಶ್ವಿನ್ ಪತ್ನಿ ಪ್ರೀತಿ ತೆರೆದಿಟ್ಟಿದ್ದು, ‘ಅಶ್ವಿನ್‌ರ ತಾಯಿ ಕುಸಿದು ಬಿದ್ದಾಗ ಮೊದಲು ಚೇತೇಶ್ವರ ಪೂಜಾರಗೆ ಕರೆ ಮಾಡಿದ್ದೆ ಎಂದಿದ್ದಾರೆ. ‘ರಾಜ್‌ಕೋಟ್‌ನಿಂದ ಚೆನ್ನೈಗೆ ಉತ್ತಮ ವಿಮಾನ ಸಂಪರ್ಕವಿಲ್ಲ. ಹೀಗಾಗಿ ಅಶ್ವಿನ್‌ಗೆ ಮಾಹಿತಿ ನೀಡಿರಲಿಲ್ಲ. ಪೂಜಾರ ಮತ್ತು ಕುಟುಂಬಸ್ಥರು ನಮಗೆ ಸಹಾಯ ಮಾಡಿದರು. ಬಳಿಕ ಅಶ್ವಿನ್‌ಗೆ ವಿಷಯ ತಿಳಿಸಿದೆವು’ ಎಂದಿದ್ದಾರೆ. ಇನ್ನು ಘಟನೆ ಬಗ್ಗೆ ಮಾತನಾಡಿರುವ ಅಶ್ವಿನ್, ‘ನಾನು ಆಸ್ಪತ್ರೆಗೆ ಬಂದಾಗ ನನ್ನ ತಾಯಿ ಮೊದಲು ಕೇಳಿದ್ದು ನೀನು ಯಾಕೆ ಬಂದೆ ಎಂದಾಗಿತ್ತು. ಕೂಡಲೇ ಹೋಗಿ ಟೆಸ್ಟ್ ಆಡು ಎಂದಿದ್ದರು’ ಎಂದು ತಿಳಿಸಿದ್ದಾರೆ.ಬಾಕ್ಸಿಂಗ್: ಗೆದ್ದ ನಿಶಾಂತ್, ಸೋತು ಹೊರಬಿದ್ದ ಶಿವ
ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ, ಭಾರತದ ತಾರಾ ಬಾಕ್ಸರ್ ನಿಶಾಂತ್ ದೇವ್ ಬಾಕ್ಸಿಂಗ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ 6 ಬಾರಿ ಏಷ್ಯನ್ ಚಾಂಪಿಯನ್‌ಶಿಪ್ ಪದಕ ವಿಜೇತ ಶಿವ ಥಾಪ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಪುರುಷರ 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ಬ್ರಿಟನ್‌ನ ಲೆವಿನ್ ರಿಚರ್ಡ್ಸನ್ ವಿರುದ್ಧ 3-1ರಲ್ಲಿ ಜಯಗಳಿಸಿದರು. 63.5 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಶಿವ ಥಾಪ ಅವರು ಹಾಲಿ ವಿಶ್ವ ಚಾಂಪಿಯನ್, ಉಜ್ಬೇಕಿಸ್ತಾನದ ರುಸ್ಲನ್ ಅಬ್ದುಲ್ಲಾ ವಿರುದ್ಧ ಸೋತರು. ಇನ್ನು ಮಹಿಳೆಯರ ವಿಭಾಗದ 66 ಕೆ.ಜಿ. ಸ್ಪರ್ಧೆಯಲ್ಲಿ ಅಂಕುಶಿತಾ ಬೊರೊ ಅವರು ಫ್ರಾನ್ಸ್‌ನ ಸೊನ್ವಿಕೊ ಎಮಿಲಿ ವಿರುದ್ಧ ಪರಾಭವಗೊಂಡರು.