ಆಫ್ಘನ್‌ ಸವಾಲು ಹಿಮ್ಮೆಟ್ಟಿಸಿ ಗೆದ್ದ ಟೀಂ ಇಂಡಿಯಾ

KannadaprabhaNewsNetwork | Updated : Jan 12 2024, 11:32 AM IST

ಸಾರಾಂಶ

ಬೌಲರ್‌ಗಳ ಮೊನಚು ದಾಳಿ ಹಾಗೂ ಯುವ ಬ್ಯಾಟರ್‌ಗಳು ಪ್ರದರ್ಶಿಸಿದ ಅಬ್ಬರದ ಆಟ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟಿದೆ.

ಮೊಹಾಲಿ: ಬೌಲರ್‌ಗಳ ಮೊನಚು ದಾಳಿ ಹಾಗೂ ಯುವ ಬ್ಯಾಟರ್‌ಗಳು ಪ್ರದರ್ಶಿಸಿದ ಅಬ್ಬರದ ಆಟ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ನಾಯಕ ರೋಹಿತ್‌ ಶರ್ಮಾ ವಿಫಲರಾದರೂ, ಯುವ ಕ್ರಿಕೆಟಿಗರ ಸಂಘಟಿತ ಆಟದಿಂದಾಗಿ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಮಂಜಿನಿಂದ ಆವೃತ್ತವಾಗಿದ್ದ ಮೊಹಾಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 5 ವಿಕೆಟ್‌ಗೆ ಗಳಿಸಿದ್ದ 158 ರನ್‌. ಭಾರತಕ್ಕೆ ಗುರಿ ದೊಡ್ಡದು ಎನಿಸಲಿಲ್ಲ.ಆರಂಭಿಕ ಆಘಾತದಿಂದ ಚೇತರಿಸಿಕೊಂಡು, 17.3 ಓವರಲ್ಲಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. 

ಅನಗತ್ಯ ರನ್‌ಗೆ ಯತ್ನಿಸಿ ರೋಹಿತ್‌ ರನೌಟಾಗಿ ಪೆವಿಲಿಯನ್‌ಗೆ ಸೇರಿದಾಗ ಭಾರತ ಇನ್ನೂ ರನ್‌ ಖಾತೆ ತೆರೆದಿರಲಿಲ್ಲ. ಆದರೆ ಶುಭ್‌ಮನ್‌ ಗಿಲ್‌(23) ಹಾಗೂ ತಿಲಕ್‌ ವರ್ಮಾ(26) ತಂಡವನ್ನು ಮೇಲೆತ್ತಿದರು. 

ಗಿಲ್‌ ನಿರ್ಗಮನದ ಬಳಿಕ 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಿವಂ ದುಬೆ ಅವರು 3ನೇ ವಿಕೆಟ್‌ಗೆ ತಿಲಕ್‌, 4ನೇ ವಿಕೆಟ್‌ಗೆ ಜಿತೇಶ್‌ ಶರ್ಮಾ(31) ಹಾಗೂ ಮುರಿಯದ 5ನೇ ವಿಕೆಟ್‌ಗೆ ರಿಂಕು ಸಿಂಗ್‌(ಔಟಾಗದೆ 16) ತಲಾ 40+ ರನ್‌ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. 

ಅವರು 40+ ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 60 ರನ್‌ ಸಿಡಿಸಿದದರು. ಮುಜೀಬ್‌ 2 ವಿಕೆಟ್‌ ಕಿತ್ತರು.

ಸಂಘಟಿತ ದಾಳಿ: ಆರಂಭದಲ್ಲೇ ಶಿಸ್ತುಬದ್ಧ ದಾಳಿ ಸಂಘಟಿಸಿದ ಭಾರತ ಆಫ್ಘನ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ವಿಕೆಟ್‌ ಬೀಳದಿದ್ದರೂ ಪವರ್‌-ಪ್ಲೆ ಮುಕ್ತಾಯಕ್ಕೆ ಕೇವಲ 33 ರನ್‌ ಗಳಿಸಿದ್ದ ಆಫ್ಘನ್‌ಗೆ ಬಳಿಕ ಹೆಚ್ಚೇನು ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. 

ನಬಿ 42 ರನ್‌ ಗಳಿಸಿದರೆ, ಅಜ್ಮತುಲ್ಲಾ 29, ಜದ್ರಾನ್‌ 25, ಗುರ್ಬಾಜ್‌ 23 ರನ್‌ ಕೊಡುಗೆ ನೀಡಿದರು. ಮುಕೇಶ್‌, ಅಕ್ಷರ್‌ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 158/5 (ನಬಿ 42, ಅಜ್ಮತುಲ್ಲಾ 29, ಅಕ್ಷರ್‌ 2-23), ಭಾರತ 17.3 ಓವರಲ್ಲಿ 159/4 (ದುಬೆ 60*, ಜಿತೇಶ್‌ 31, ಮುಜೀಬ್‌ 2-21)

ಟರ್ನಿಂಗ್‌ ಪಾಯಿಂಟ್‌: ಆಫ್ಘನ್‌ಗೆ ಪವರ್‌-ಪ್ಲೇನಲ್ಲಿ ಕೇವಲ 33 ರನ್‌ ಬಿಟ್ಟುಕೊಟ್ಟ ಭಾರತ ಎದುರಾಳಿಯನ್ನು ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಿತು. 

ಬಳಿಕ ಆರಂಭಿಕ ಆಘಾತಕ್ಕೊಳಗಾದರೂ ಶಿವಂ ದುಬೆ ಇತರ 3 ಬ್ಯಾಟರ್‌ಗಳ ಜೊತೆಗೂಡಿ ಕಟ್ಟಿದ ಇನ್ನಿಂಗ್ಸ್‌ ಭಾರತಕ್ಕೆ ಜಯ ತಂದುಕೊಟ್ಟಿತು.

11ನೇ ಬಾರಿ ರೋಹಿತ್‌ ಅಂ.ರಾ. ಟಿ20ಯಲ್ಲಿ 11ನೇ ಬಾರಿ ಶೂನ್ಯಕ್ಕೆ ಔಟಾದರು. ಕೆ.ಎಲ್‌.ರಾಹುಲ್‌ 5 ಬಾರಿ ಶೂನ್ಯ ಸುತ್ತಿದ್ದಾರೆ. 16ನೇ ಬಾರಿಭಾರತ ತಂಡ ತವರಿನ ಟಿ20ಯಲ್ಲಿ 16ನೇ ಬಾರಿ 160ಕ್ಕಿಂತ ಕಡಿಮೆ ರನ್‌ ಬೆನ್ನತ್ತಿ ಗೆದ್ದಿದೆ. ಕೇವಲ ಒಂದು ಬಾರಿ ಮಾತ್ರ ಸೋತಿದೆ. 2016ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಸೋಲು ಎದುರಾಗಿತ್ತು.

Share this article