ಇಂದಿನಿಂದ ಭಾರತ vs ಇಂಗ್ಲೆಂಡ್‌ ಫೈನಲ್‌ ಟೆಸ್ಟ್‌

KannadaprabhaNewsNetwork | Updated : Mar 07 2024, 10:22 AM IST

ಸಾರಾಂಶ

ಸರಣಿಯಲ್ಲಿ 3-1ರಲ್ಲಿ ಮುನ್ನಡೆಯಲ್ಲಿರುವ ಟೀಂ ಇಂಡಿಯಾ ಮತ್ತೊಂದು ಜಯದ ತವಕದಲ್ಲಿದೆ. ಅತ್ತ ಇಂಗ್ಲೆಂಡ್‌ ಹ್ಯಾಟ್ರಿಕ್‌ ಸೋಲುಂಡಿದ್ದು, ಗೆಲುವಿನೊಂದಿಗೆ ಗುಡ್‌ಬೈ ಹೇಳುವ ನಿರೀಕ್ಷೆಯಲ್ಲಿದೆ. ರಜತ್‌ ಬದಲು ಕನ್ನಡಿಗ ದೇವದತ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗುತ್ತದಯೋ ಕಾದು ನೋಡಬೇಕಿದೆ.

ಧರ್ಮಶಾಲಾ: ಆರಂಭಿಕ ಪಂದ್ಯದಲ್ಲಿ ಎದುರಾದ ಆಘಾತಕಾರಿ ಸೋಲಿನ ಹೊರತಾಗಿಯೂ ಬಳಿಕ ಹ್ಯಾಟ್ರಿಕ್‌ ಜಯದೊಂದಿಗೆ ಬದ್ಧವೈರಿ ಇಂಗ್ಲೆಂಡ್‌ ವಿರುದ್ಧ ಸರಣಿ ತನ್ನದಾಗಿಸಿಕೊಂಡಿರುವ ಟೀಂ ಇಂಡಿಯಾ ಈಗ ಮತ್ತೊಂದು ಗೆಲುವಿನ ತುಡಿತದಲ್ಲಿದೆ. 

ಪ್ರವಾಸಿ ತಂಡದ ವಿರುದ್ಧ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯ ವಿಶ್ವದಲ್ಲೇ ಅತಿ ಸುಂದರ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಗುರುವಾರ ಆರಂಭಗೊಳ್ಳಲಿದ್ದು, ಸರಣಿಯನ್ನು 4-1ರೊಂದಿಗೆ ಮುಕ್ತಾಯಗೊಳಿಸಲು ರೋಹಿತ್ ಶರ್ಮಾ ಪಡೆ ಕಾತರಿಸುತ್ತಿದೆ.

ಅತ್ತ ಇಂಗ್ಲೆಂಡ್‌ ಸರಣಿ ಸೋತರೂ ಗೆಲುವಿನೊಂದಿಗೆ ಭಾರತ ಪ್ರವಾಸಕ್ಕೆ ಗುಡ್‌ಬೈ ಹೇಳಲು ಕಾಯುತ್ತಿದೆ.ಟೀಂ ಇಂಡಿಯಾ ಸರಣಿ ಗೆದ್ದಿರುವ ಹೊರತಾಗಿಯೂ ತಂಡದಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ ಕಡಿಮೆ. 

ಭಾರತಕ್ಕೆ ಜಸ್‌ಪ್ರೀತ್‌ ಬೂಮ್ರಾ ಸೇವೆ ಲಭ್ಯವಿದ್ದು, ಬೌಲಿಂಗ್‌ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಅವರಿಗೆ ಆಕಾಶ್‌ದೀಪ್‌ ಜಾಗ ಬಿಟ್ಟುಕೊಡಬೇಕಾಗಬಹುದು. 

100ನೇ ಟೆಸ್ಟ್‌ಗೆ ಎದುರು ನೋಡುತ್ತಿರುವ ಆರ್‌.ಅಶ್ವಿನ್‌ ಮಹತ್ವದ ಮೈಲುಗಲ್ಲಿನ ಪಂದ್ಯವನ್ನು ಸ್ಮರಣೀಯಗೊಳಿಸುವ ನಿರೀಕ್ಷೆಯಲ್ಲಿದ್ದಾರೆ. ಧರ್ಮಶಾಲಾ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆಯಿದ್ದು, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌ ಟ್ರಂಪ್‌ಕಾರ್ಡ್ಸ್‌ ಎನಿಸಿಕೊಳ್ಳಬಹುದು.

ಸಿಕ್ಕ ಅವಕಾಶ ಬಾಚಿಕೊಳ್ಳಲು ವಿಫಲರಾಗಿರುವ ರಜತ್‌ ಪಾಟೀದಾರ್‌ಗೆ ಮತ್ತೊಂದು ಅವಕಾಶ ಸಿಗುತ್ತದೋ ಅಥವಾ ಕರ್ನಾಟಕದ ಎಡಗೈ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಪಾದಾರ್ಪಣೆ ಮಾಡುತ್ತಾರೊ ಎಂಬ ಕುತೂಹಲವಿದೆ. 

ಅಭೂತಪೂರ್ವ ಲಯದಲ್ಲಿರುವ ಯಶಸ್ವಿ ಜೈಸ್ವಾಲ್ ಪ್ರಮುಖ ಆಕರ್ಷಣೆ ಎನಿಸಿದ್ದು, ಮತ್ತೊಮ್ಮೆ ಅಬ್ಬರಿಸಲು ಕಾಯು ತ್ತಿದ್ದಾರೆ. ಹೊಸ ಮುಖಗಳಾದ ಧ್ರುವ್‌ ಜುರೆಲ್‌, ಸರ್ಫರಾಜ್‌ ಖಾನ್‌ ಕೂಡಾ ಮತ್ತೊಮ್ಮೆ ಮಿಂಚುವ ನಿರೀಕ್ಷೆಯಲ್ಲಿದ್ದಾರೆ.

ವುಡ್‌ ವಾಪಸ್‌: ಸತತ ಸೋಲಿನಿಂದ ಕುಗ್ಗಿ ಹೋಗಿರುವ ಇಂಗ್ಲೆಂಡ್‌ ಈ ಪಂದ್ಯದಲ್ಲಾದರೂ ಗೆದ್ದು ಸರಣಿಗೆ ವಿದಾಯ ಹೇಳುವ ಕಾತರದಲ್ಲಿದೆ. ಪಂದ್ಯಕ್ಕೆ ಈಗಾಗಲೇ ಆಡುವ ಬಳಗವನ್ನು ಇಂಗ್ಲೆಂಡ್‌ ಘೋಷಿಸಿದ್ದು, ಒಂದು ಬದಲಾವಣೆ ಮಾಡಲಾಗಿದೆ. 

ಓಲಿ ರಾಬಿನ್ಸನ್‌ ಬದಲು ಮಾರ್ಕ್‌ ವುಡ್‌ ತಂಡಕ್ಕೆ ಮರಳಿದ್ದಾರೆ. ಟಾಮ್‌ ಹಾರ್ಟ್ಲಿ ಹಾಗೂ ಶೋಯೆಬ್‌ ಬಶೀರ್‌ ತಂಡದಲ್ಲಿರುವ ಇಬ್ಬರು ತಜ್ಞ ಸ್ಪಿನ್ನರ್‌ಗಳು. ಸರಣಿಯ 8 ಇನ್ನಿಂಗ್ಸ್‌ಗಳಲ್ಲಿ 170 ರನ್‌ ಗಳಿಸಿರುವ ಜಾನಿ ಬೇರ್‌ಸ್ಟೋವ್‌ 100ನೇ ಪಂದ್ಯದಲ್ಲಾದರೂ ಅಬ್ಬರಿಸುವ ಕಾತರದಲ್ಲಿದ್ದಾರೆ.

ಒಟ್ಟು ಮುಖಾಮುಖಿ: 135 ಭಾರತ: 34ಇಂಗ್ಲೆಂಡ್‌: 51ಡ್ರಾ: 50

ತಂಡಗಳು: ಭಾರತ(ಸಂಭವನೀಯ): ರೋಹಿತ್‌(ನಾಯಕ), ಜೈಸ್ವಾಲ್‌, ಗಿಲ್‌, ರಜತ್‌/ದೇವದತ್‌, ಸರ್ಫರಾಜ್‌, ಜಡೇಜಾ, ಧ್ರುವ್‌, ಅಶ್ವಿನ್‌, ಕುಲ್ದೀಪ್‌, ಬೂಮ್ರಾ, ಸಿರಾಜ್‌

ಇಂಗ್ಲೆಂಡ್‌(ಆಡುವ 11): ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ಜೋ ರೂಟ್‌, ಬೇರ್‌ಸ್ಟೋವ್, ಸ್ಟೋಕ್ಸ್‌(ನಾಯಕ), ಫೋಕ್ಸ್‌, ಹಾರ್ಟ್ಲಿ, ವುಡ್‌, ಆ್ಯಂಡರ್‌ಸನ್‌, ಬಶೀರ್‌.

ಪಂದ್ಯ: ಬೆಳಗ್ಗೆ 9.30ಕ್ಕೆ, ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18

ಪಿಚ್‌ ರಿಪೋರ್ಟ್‌: ಕಳೆದ 3 ಪಂದ್ಯಗಳಂತೆಯೇ ಧರ್ಮಶಾಲಾ ಕ್ರೀಡಾಂಗಣದ ಪಿಚ್‌ ಕೂಡಾ ನಿಧಾನಗತಿ ಪಿಚ್‌ ಆಗಿದ್ದು, ಹೀಗಾಗಿ ಮೊದಲೆರಡು ದಿನ ಬ್ಯಾಟರ್‌ಗಳು ಸುಲಭವಾಗಿ ರನ್‌ ಗಳಿಸುವ ಸಾಧ್ಯತೆಯಿದೆ. 

ಕೊನೆ 3ನೇ ದಿನದಿಂದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆಯಿದೆ. ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡುವ ಸಾಧ್ಯತೆಯಿದೆ.

ಗೆದ್ದು ಹೊಸ ದಾಖಲೆ ಸೃಷ್ಟಿಸುತ್ತಾ ಭಾರತ?
ಈ ಪಂದ್ಯದಲ್ಲಿ ಭಾರತ ಗೆದ್ದರೆ ದಾಖಲೆ ಸೃಷ್ಟಿಸಲಿದೆ. 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯ ಸೋತು ಬಳಿಕ ಸರಣಿಯನ್ನು 4-1ರಿಂದ ಗೆದ್ದಿದ್ದು ಈ ವರೆಗೆ ಕೇವಲ 2 ತಂಡಗಳು ಮಾತ್ರ. 

1897-98 ಮತ್ತು 1901-02ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ, 1912ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ ಈ ಸಾಧನೆ ಮಾಡಿತ್ತು. ಒಂದು ವೇಳೆ ಭಾರತ ಗೆದ್ದರೆ 112 ವರ್ಷದಲ್ಲೇ ಮೊದಲ ಪಂದ್ಯದ ಸೋಲಿನ ಬಳಿಕ 5 ಪಂದ್ಯದ ಸರಣಿಯಲ್ಲಿ 4-1ರಿಂದ ಗೆದ್ದ ಏಕೈಕ ತಂಡ ಎನಿಸಿಕೊಳ್ಳಲಿದೆ.

Share this article