ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಗುರಿ

KannadaprabhaNewsNetwork |  
Published : Dec 14, 2023, 01:30 AM IST

ಸಾರಾಂಶ

2024ರ ಟಿ20 ವಿಶ್ವಕಪ್‌ಗೆ ಹೆಚ್ಚು ಸಮಯ ಉಳಿದಿಲ್ಲವಾದ್ದರಿಂದ ಭಾರತ ತಂಡ ಆಡುವ ಪ್ರತಿ ಪಂದ್ಯವೂ ಮಹತ್ವದ್ದೇ ಆಗಿರಲಿದೆ. ದ.ಆಫ್ರಿಕಾ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯ ಗುರುವಾರ ನಡೆಯಲಿದ್ದು, 0-1ರಿಂದ ಹಿಂದಿರುವ ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಒತ್ತಡದ ಜೊತೆಗೆ ವಿಶ್ವಕಪ್‌ ಸಿದ್ಧತೆಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದು ಕಡೆ.

ಜೋಹಾನ್ಸ್‌ಬರ್ಗ್‌: 2024ರ ಟಿ20 ವಿಶ್ವಕಪ್‌ಗೆ ಹೆಚ್ಚು ಸಮಯ ಉಳಿದಿಲ್ಲವಾದ್ದರಿಂದ ಭಾರತ ತಂಡ ಆಡುವ ಪ್ರತಿ ಪಂದ್ಯವೂ ಮಹತ್ವದ್ದೇ ಆಗಿರಲಿದೆ. ದ.ಆಫ್ರಿಕಾ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯ ಗುರುವಾರ ನಡೆಯಲಿದ್ದು, 0-1ರಿಂದ ಹಿಂದಿರುವ ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಒತ್ತಡದ ಜೊತೆಗೆ ವಿಶ್ವಕಪ್‌ ಸಿದ್ಧತೆಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿಯಂತಹ ಅನುಭವಿಗಳನ್ನೇ ಹೆಚ್ಚು ನೆಚ್ಚಿಕೊಳ್ಳದೆ 2024ರ ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಯುವ ವೇಗದ ಬೌಲಿಂಗ್‌ ಪಡೆಯನ್ನು ಸಿದ್ಧಪಡಿಸಲು ಟೀಂ ಇಂಡಿಯಾದ ಆಡಳಿತ ಪ್ರಯತ್ನಿಸುತ್ತಿದ್ದು, ಆ ಪ್ರಯತ್ನ ಸದ್ಯಕ್ಕೆ ಫಲ ನೀಡುವಂತೆ ಕಾಣುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಅರ್ಶ್‌ದೀಪ್‌ ಸಿಂಗ್‌ ಹಾಗೂ ಮುಕೇಶ್‌ ಕುಮಾರ್‌ ದುಬಾರಿಯಾದರೂ ಎನ್ನುವುದಕ್ಕಿಂತ ಹೆಚ್ಚಾಗಿ ಇಬ್ಬರೂ ಯಾವುದೇ ಯೋಜನೆಗಳಿಲ್ಲದೆ ಬೌಲ್‌ ಮಾಡಿದ್ದು, ತಂಡದ ಆಡಳಿತಕ್ಕೆ ತಲೆಬಿಸಿ ತಂದಿರುವುದರಲ್ಲಿ ಅನುಮಾನವಿಲ್ಲ. ಈ ಸರಣಿಗೂ ಮುನ್ನ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ 4-1ರಲ್ಲಿ ಜಯ ಸಾಧಿಸಿತ್ತಾದರೂ, ಭಾರತೀಯ ಬೌಲರ್‌ಗಳಿಂದ ಗುಣಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ಬೆಂಗಳೂರಲ್ಲಿ ನಡೆದಿದ್ದ 5ನೇ ಪಂದ್ಯದಲ್ಲಿ ಅರ್ಶ್‌ದೀಪ್‌ ಆಕರ್ಷಕ ಕೊನೆ ಓವರ್‌ ಬೌಲ್‌ ಮಾಡಿದ್ದನ್ನು ಹೊರತುಪಡಿಸಿದರೆ, ಸರಣಿಯಲ್ಲಿ ಅವರಾಡಿದ 4 ಪಂದ್ಯಗಳಲ್ಲಿ 10.68ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದರು. ಮುಕೇಶ್‌ ತಮ್ಮ ಬೌಲಿಂಗ್‌ ವೇಗವನ್ನು ಹೆಚ್ಚಿಸಿಕೊಂಡಿದ್ದರೂ, ನಿಯಂತ್ರಣ ಸಾಧಿಸುವಲ್ಲಿ ಎಡವುತ್ತಿದ್ದಾರೆ. ಆಸೀಸ್‌ ವಿರುದ್ಧ ಅವರೂ ಸಹ 9.12ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದರು. ಮಂಗಳವಾರ ಗೆರ್ಬೆಹಾದಲ್ಲಿ ದ.ಆಫ್ರಿಕಾ ವಿರುದ್ಧ ನಡೆದ 2ನೇ ಟಿ20ಯಲ್ಲಿ ಈ ಇಬ್ಬರೂ ತಮ್ಮ ಕಳಪೆ ಬೌಲಿಂಗ್‌ ಮುಂದುವರಿಸಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣಗಳಲ್ಲೊಂದು. 1 ವರ್ಷ 4 ತಿಂಗಳ ಬಳಿಕ ಅಂ.ರಾ.ಟಿ20 ಪಂದ್ಯವನ್ನಾಡಿದ ರವೀಂದ್ರ ಜಡೇಜಾ ಸಹ ಪರಿಣಾಮಕಾರಿಯಾಗಲಿಲ್ಲ. ಈ ಪಂದ್ಯದಲ್ಲಿ ಮತ್ತೊಮ್ಮೆ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಆಡಿಸುವ ಸಾಧ್ಯತೆ ಇದೆ. 2ನೇ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ರನ್ನು ಹೊರಗಿಟ್ಟು ಆಡಿದ್ದ ಭಾರತ, ಈ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಆದರೆ ಶ್ರೇಯಸ್‌ಗಾಗಿ ಜಾಗ ಬಿಟ್ಟುಕೊಡುವವರು ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.ಆರಂಭಿಕರಾದ ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌ ಲಯಕ್ಕೆ ಮರಳಲು ಕಾಯುತ್ತಿದ್ದರೆ, ನಾಯಕ ಸೂರ್ಯಕುಮಾರ್‌ ಹಾಗೂ ರಿಂಕು ಸಿಂಗ್‌ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಸರಣಿ ಜಯದ ನಿರೀಕ್ಷೆಯಲ್ಲಿದ್ದು, ವಿಶ್ವಕಪ್‌ ಮುಂದಿರುವಾಗ ವಿಶ್ವ ನಂ.1 ತಂಡದ ವಿರುದ್ಧದ ಗೆಲುವು ಸಹಜವಾಗಿಯೇ ಹರಿಣ ಪಡೆಯ ಆತ್ಮವಿಶ್ವಾಸ ಹೆಚ್ಚಿಸಲಿದೆ. ಪಂದ್ಯ ಆರಂಭ: ರಾತ್ರಿ 8.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಬಹಿಷ್ಕಾರದಿಂದ ಪಾಕ್‌ ಯೂಟರ್ನ್‌ ?ಭಾರತ ಜತೆ ಟಿ 20 ಪಂದ್ಯದ ಕುರಿತು ಇಂದು ಘೋಷಣೆ ?
ಮುಳುಗುತ್ತಿದ್ದ ಭಾರತಕ್ಕೆ ಬೆಳಕಾದ ‘ಸೂರ್ಯ’!