ವಿಶ್ವ ಚಾಂಪಿಯನ್‌ ಗುಕೇಶ್ ನಮ್ಮವ : ಜೋರಾದ ತಮಿಳು vs ತೆಲುಗು ಸಮರ : ₹5 ಕೋಟಿ ಘೋಷಿಸಿದ ತಮಿಳುನಾಡು

KannadaprabhaNewsNetwork |  
Published : Dec 14, 2024, 12:46 AM ISTUpdated : Dec 14, 2024, 04:13 AM IST
d gukesh

ಸಾರಾಂಶ

ರಾಜ್ಯಸಭೆ, ಲೋಕಸಭೆ, ದಿಗ್ಗಜರಿಂದ ಗುಕೇಶ್‌ಗೆ ಶ್ಲಾಘನೆ. ಭಾರತ ಕ್ರಿಕೆಟ್ ತಂಡ ಕೂಡಾ ಗುಕೇಶ್‌ರನ್ನು ಕೊಂಡಾಡಿದೆ. ತಂಡದ ಪರವಾಗಿ ತಾರಾ ಆಟಗಾರ ಶುಭ್‌ಮನ್‌ ಗಿಲ್‌, ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದರು.

ಸಿಂಗಾಪುರ: ಚೆಸ್‌ ಇತಿಹಾಸದಲ್ಲೇ ಅತಿ ಕಿರಿಯ ವಿಶ್ವ ಚಾಂಪಿಯನ್‌ ಎನಿಸಿಕೊಂಡಿರುವ ಭಾರತದ 18 ವರ್ಷದ ಡಿ.ಗುಕೇಶ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ಗುಕೇಶ್‌ ಗುರುವಾರ ಚೀನಾದ ಡಿಂಗ್‌ ಲಿರೆನ್‌ ವಿರುದ್ಧ ಗೆಲ್ಲುವ ಮೂಲಕ ಚಾಂಪಿಯನ್‌ ಪಟ್ಟಕ್ಕೇರಿದ್ದರು. 

ಶುಕ್ರವಾರ ಲೋಕಸಭೆಯಲ್ಲಿ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ಜಗ್‌ದೀಪ್‌ ಧನ್‌ಖರ್‌ ಅವರು ಗುಕೇಶ್‌ರ ಸಾಧನೆಯನ್ನು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು. ಗುಕೇಶ್‌ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಶ್ಲಾಘಿಸಿದರು.

 ಇನ್ನು, ಭಾರತ ಕ್ರಿಕೆಟ್ ತಂಡ ಕೂಡಾ ಗುಕೇಶ್‌ರನ್ನು ಕೊಂಡಾಡಿದೆ. ತಂಡದ ಪರವಾಗಿ ತಾರಾ ಆಟಗಾರ ಶುಭ್‌ಮನ್‌ ಗಿಲ್‌, ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದರು. ವಿಶ್ವದೆಲ್ಲೆಡೆಯ ದಿಗ್ಗಜ ಚೆಸ್‌ ಪಟುಗಳು, ಭಾರತದ ಹಾಲಿ-ಮಾಜಿ ಕ್ರೀಡಾ ತಾರೆಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡಾ ಗುಕೇಶ್‌ ಸಾಧನೆಯನ್ನು ಕೊಂಡಾಡಿದ್ದಾರೆ.

₹5 ಕೋಟಿ ಘೋಷಿಸಿದ ತಮಿಳುನಾಡು ಸರ್ಕಾರ

ಚಾಂಪಿಯನ್‌ ಗುಕೇಶ್‌ಗೆ ಶುಕ್ರವಾರ ತಮಿಳುನಾಡು ಸರ್ಕಾರ ₹5 ಕೋಟಿ ನಗದು ಬಹುಮಾನ ಘೋಷಿಸಿದೆ. ‘ಗುಕೇಶ್‌ ಸಾಧನೆ ದೇಶಕ್ಕೆ ಅಪಾರ ಹೆಮ್ಮೆ, ಸಂಭ್ರಮ ತಂದುಕೊಟ್ಟಿದೆ. ಭವಿಷ್ಯದಲ್ಲಿ ಗುಕೇಶ್‌ ಮತ್ತಷ್ಟು ಉನ್ನತಿಗೇರಲಿ’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಶುಭ ಹಾರೈಸಿದ್ದಾರೆ. 

ಗುಕೇಶ್ ನಮ್ಮವ: ಜೋರಾದ ತಮಿಳ್‌ vs ತೆಲುಗು ಸಮರ!

ಡಿ.ಗುಕೇಶ್‌ ಚಾಂಪಿಯನ್‌ ಆದ ಬೆನ್ನಲ್ಲೇ, ಅವರು ನಮ್ಮ ರಾಜ್ಯದವ ಎಂದು ತಮಿಳುನಾಡು ಮತ್ತು ಆಂಧ್ರಪ್ರದೇಶ ನಡುವೆ ಸಮರ ಶುರುವಾಗಿದೆ. ಗುಕೇಶ್‌ಗೆ ಅಭಿನಂದನೆ ಸಲ್ಲಿಸಿದ ತಮಿಳುನಾಡು ಸಿಎಂ ಸ್ಟಾಲಿನ್‌, ‘ನಿಮ್ಮ ಸಾಧನೆಗೆ ತಮಿಳುನಾಡು ಹೆಮ್ಮೆ ಪಡುತ್ತಿದೆ’ ಎಂದಿದ್ದರು. ಅಲ್ಲದೆ, ₹5 ಕೋಟಿ ನಗದು ಕೂಡಾ ಘೋಷಿಸಿದ್ದಾರೆ. 

ಅಲ್ಲಿನ ಕ್ರೀಡಾ ಸಚಿವ ಉಧಯನಿಧಿ ಸ್ಟಾಲಿನ್‌, ‘ಗುಕೇಶ್‌ ನಮ್ಮ ಹುಡುಗ’ ಎಂದು ಉಲ್ಲೇಖಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಗುಕೇಶ್‌ಗೆ ಅಭಿನಂದನೆ ಸಲ್ಲಿಸಿ, ‘ನಮ್ಮ ತೆಲುಗು ಹುಡುಗ’ ಎಂದು ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ತಮಿಳುನಾಡು ಮತ್ತು ಆಂಧ್ರದ ಜನರು ಗುಕೇಶ್‌ ತಮ್ಮವ ಎಂದು ಕಿತ್ತಾಟ ಆರಂಭಿಸಿದ್ದಾರೆ. ಗುಕೇಶ್‌ ಪೋಷಕರು ತೆಲುಗು ಭಾಷಿಕರು. ಆದರೆ ಗುಕೇಶ್‌ ಹುಟ್ಟಿದ್ದು ಚೆನ್ನೈನಲ್ಲಿ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ