ಬ್ರಿಡ್ಜ್‌ಟೌನ್(ಬಾರ್ಬಡೊಸ್): ಒಂದು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ಉಣಬಡಿಸಿ, ಥ್ರಿಲ್ಲರ್ ಪಂದ್ಯಗಳ ಮೂಲಕ ತುದಿಗಾಲಲ್ಲಿ ನಿಲ್ಲಿಸಿದ್ದ 9ನೇ ಆವೃತ್ತಿ ಐಸಿಸಿ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದೆ. ಶನಿವಾರ ಬಾರ್ಬಡೊಸ್ ಕ್ರೀಡಾಂಗಣದಲ್ಲಿ ಈ ಬಾರಿ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು, ಬಹುನಿರೀಕ್ಷಿತ ಟ್ರೋಫಿಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪರಸ್ಪರ ಸೆಣಸಾಡಲಿವೆ.
ಟ್ರೋಫಿ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿರಿಸಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ 3ನೇ ಬಾರಿ ಫೈನಲ್‌ಗೇರಲು ಯಶಸ್ವಿಯಾಗಿದೆ. 2007ರ ಚೊಚ್ಚಲ ಆವೃತ್ತಿಯಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿದೆ. ಅತ್ತ ‘ಚೋಕರ್ಸ್’ ಖ್ಯಾತಿಯ ಹರಿಣ ಪಡೆ ಐಸಿಸಿ ವಿಶ್ವಕಪ್(ಏಕದಿನ, ಟಿ20)ಗಳಲ್ಲಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದು, ಟ್ರೋಫಿ ಗೆಲ್ಲಲು ತನ್ನೆಲ್ಲಾ ಅಸ್ತ್ರ ಪ್ರಯೋಗಿಸಲಿದೆ.
ಭಾರತವೇ ಫೇವರಿಟ್: ಟೂರ್ನಿಯಲ್ಲಿನ ಪ್ರದರ್ಶನ ನೋಡಿದರೆ ಭಾರತವೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್‌ಗೇರಿದ್ದ ತಂಡ, ಈ ಸಲವೂ ಒಂದೂ ಪಂದ್ಯ ಸೋಲದೆ ಪ್ರಶಸ್ತಿ ಸುತ್ತಿಗೇರಿದೆ. ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಗೆದ್ದಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣ.ಒಂದಿಬ್ಬರ ಆಟಕ್ಕೆ ಜೋತು ಬೀಳದೆ ತಂಡವಾಗಿ ಆಡುತ್ತಿರುವ ಭಾರತ, ಫೈನಲ್‌ನಲ್ಲಿ ಎಡವದಂತೆ ನೋಡಬೇಕಿದೆ. ಟೂರ್ನಿಯುದ್ದಕ್ಕೂ ವಿಫಲವಾಗಿರುವ ವಿರಾಟ್ ಕೊಹ್ಲಿ ತನ್ನೆಲ್ಲಾ ಆಟವನ್ನು ಫೈನಲ್‌ಗೇ ಮೀಸಲಿರಿಸಿರುವಂತೆ ತೋರುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಿ ತಂಡದ ಕೈ ಹಿಡಿಯಬೇಕಿದೆ.
ರೋಹಿತ್ ಶರ್ಮಾ ಅಮೋಘ ಆಟ ತಂಡದ ಪ್ಲಸ್ ಪಾಯಿಂಟ್. ಸೂರ್ಯಕುಮಾರ್, ರಿಷಭ್ ಪಂತ್ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿ ಅರಿತು ಆಡಬೇಕಿದೆ.ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡ್ ಪ್ರದರ್ಶನ ತಂಡದ ಸೋಲು-ಗೆಲುವು ನಿರ್ಧರಿಸುವಂತಿದ್ದು, ಇವರಿಬ್ಬರು ಅಬ್ಬರಿಸಿದರೆ ಭಾರತಕ್ಕೆ ಟ್ರೋಫಿ ಸುಲಭದಲ್ಲಿ ಒಲಿಯಲಿದೆ. ಕುಲ್ದೀಪ್ ಯಾದವ್ ಸ್ಪಿನ್ ಕೈಚಳಕ, ಬೂಮ್ರಾ ಹಾಗೂ ಅರ್ಶ್‌ದೀಪ್ ಸಿಂಗ್‌ರ ವೇಗದ ದಾಳಿ ಎದುರಿಸುವುದು ದ.ಆಫ್ರಿಕಾಕ್ಕೆ ಸವಾಲಾಗುವುದಂತೂ ಪಕ್ಕಾ.
ಕೈ ಹಿಡಿಯುತ್ತಾ ಅದೃಷ್ಟ: ವಿಶ್ವಕಪ್‌ಗಳಲ್ಲಿ ಈ ವರೆಗೂ 7 ಬಾರಿ ಸೆಮಿಫೈನಲ್‌ನಲ್ಲಿ ಸೋತು, ಇದೇ ಮೊದಲ ಬಾರಿ ಗೆದ್ದು ಫೈನಲ್‌ಗೇರಿರುವ ಆಫ್ರಿಕಾಕ್ಕೆ ಈಗ ಅಗತ್ಯವಾಗಿ ಬೇಕಿರುವುದು ಅದೃಷ್ಟ ಕೈ ಹಿಡಿಯುವುದು. ತಂಡದ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದು, ಅಜೇಯವಾಗಿ ಉಳಿದಿದೆ. ಬೌಲಿಂಗ್ ವಿಭಾಗ ಈ ಬಾರಿ ತಂಡದ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ. ರಬಾಡ, ನೋಕಿಯಾ, ಮಾರ್ಕೊ ಯಾನ್ಸನ್ ಪ್ರಚಂಡ ವೇಗವನ್ನು ಎದುರಿಸುವುದೇ ಎದುರಾಳಿಗೆ ಸವಾಲಾಗಿ ಪರಿಣಮಿಸಿದೆ. ಸ್ಪಿನ್ನರ್ ತಜ್ಬೇಜ್ ಶಮ್ಸಿ ಉತ್ಕೃಷ್ಟ ಲಯದಲ್ಲಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಡಿ ಕಾಕ್, ಮಾರ್ಕರಮ್, ಡೇವಿಡ್ ಮಿಲ್ಲರ್, ಕ್ಲಾಸೆನ್, ಟ್ರಿಸ್ಟನ್ ಸ್ಟಬ್ಸ್‌ರಂತದ ಅಪಾಯಕಾರಿ ಆಟಗಾರರ ದಂಡೇ ಇದೆ.
ಒಟ್ಟು ಮುಖಾಮುಖಿ: 26
ಭಾರತ: 14ದ.ಆಫ್ರಿಕಾ: 11ಫಲಿತಾಂಶವಿಲ್ಲ: 01
ಸಂಭವನೀಯ ಆಟಗಾರರ ಪಟ್ಟಿಭಾರತ: ರೋಹಿತ್(ನಾಯಕ), ವಿರಾಟ್, ರಿಷಭ್, ಸೂರ್ಯಕುಮಾರ್, ದುಬೆ, ಹಾರ್ದಿಕ್, ಅಕ್ಷರ್, ಜಡೇಜಾ, ಬೂಮ್ರಾ, ಕುಲ್ದೀಪ್, ಅರ್ಶ್‌ದೀಪ್.ದ.ಆಫ್ರಿಕಾ: ಡಿ ಕಾಕ್, ಹೆಂಡ್ರಿಕ್ಸ್, ಮಾರ್ಕ್‌ರಮ್(ನಾಯಕ), ಕ್ಲಾಸೆನ್, ಮಿಲ್ಲರ್, ಸ್ಟಬ್ಸ್, ಯಾನ್ಸನ್, ಮಹಾರಾಜ್, ರಬಾಡ, ನೋಕಿಯಾ, ತಜ್ರೇಜ್
ಪಂದ್ಯ: ರಾತ್ರಿ 8 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.
ಪಿಚ್ ರಿಪೋರ್ಟ್: ಬಾರ್ಬಡೊಸ್ ಕ್ರೀಡಾಂಗಣದಲ್ಲಿ ಈ ಬಾರಿ 8 ಪಂದ್ಯಗಳು ನಡೆದಿವೆ. ಮೊದಲ ಪಂದ್ಯ(ಒಮಾನ್-ನಮೀಬಿಯಾ) ಸೂಪರ್ ಓವರ್‌ಗೆ ಹೋಗಿದ್ದರೆ, ಆ ನಂತರ ಇಲ್ಲಿ ಯಾವುದೇ ಪಂದ್ಯದಲ್ಲೂ ನಿಕಟ ಸ್ಪರ್ಧೆ ಕಂಡುಬಂದಿಲ್ಲ. 2ನೇ ಪಂದ್ಯ ಮಳೆಗೆ ಬಲಿಯಾಗಿದ್ದರೆ, ನಂತರದ 4 ಪಂದ್ಯಗಳ ಪೈಕಿ 3ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿವೆ. ಕಳೆದೆರಡು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡಕ್ಕೆ ಸುಲಭ ಗೆಲುವು ಲಭಿಸಿದೆ. ಈ ಕ್ರೀಡಾಂಗಣದಲ್ಲಿ ಈ ಬಾರಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಆಡಿ ಗೆದ್ದಿದ್ದರೆ, ದ.ಆಫ್ರಿಕಾ ಮೊದಲ ಬಾರಿ ಆಡಲಿದೆ.
ಮಳೆ ಅಡ್ಡಿಪಡಿಸಿದರೆ ಪಂದ್ಯ ಭಾನುವಾರಕ್ಕೆ ಮುಂದೂಡಿಕೆ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ ಬಾರ್ಬಡೊಸ್‌ನಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಭೀತಿ ಇದೆ. ಒಂದು ವೇಳೆ ಭಾರಿ ಮಳೆಯಿಂದಾಗಿ ಶನಿವಾರ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಪಂದ್ಯ ಭಾನುವಾರಕ್ಕೆ ಮುಂದೂಡಲಾಗುತ್ತದೆ. ಭಾನುವಾರವೂ ಮಳೆಯಿಂದಾಗಿ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಭಾರತ ಹಾಗೂ ದಕ್ಷಿಣ ಆಫ್ರಿಕಾವನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.