ವಾಂಖೇಡೆ ಸ್ಟ್ಯಾಂಡ್‌ಗೆರೋಹಿತ್‌ ಶರ್ಮಾ ಹೆಸರು

KannadaprabhaNewsNetwork | Published : Apr 16, 2025 12:42 AM

ಸಾರಾಂಶ

ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಮಂಗಳವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ತಲಾ ಒಂದು ಸ್ಟ್ಯಾಂಡ್‌ಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಮಾಜಿ ನಾಯಕ ಅಜಿತ್‌ ವಾಡೇಕರ್‌ ಮತ್ತು ಐಸಿಸಿ, ಬಿಸಿಸಿಐ ಮಾಜಿ ಅಧ್ಯಕ್ಷ ಶರದ್‌ ಪವಾರ್‌ ಅವರ ಹೆಸರನ್ನು ಇಡಲಾಗಿದೆ.

ಮುಂಬೈ: ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಮಂಗಳವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ತಲಾ ಒಂದು ಸ್ಟ್ಯಾಂಡ್‌ಗೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಮಾಜಿ ನಾಯಕ ಅಜಿತ್‌ ವಾಡೇಕರ್‌ ಮತ್ತು ಐಸಿಸಿ, ಬಿಸಿಸಿಐ ಮಾಜಿ ಅಧ್ಯಕ್ಷ ಶರದ್‌ ಪವಾರ್‌ ಅವರ ಹೆಸರನ್ನು ಇಡಲಾಗಿದೆ. ಎಂಸಿಎ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಎಂಸಿಎ ನಿರ್ಣಯದ ಪ್ರಕಾರ, ದಿವೇಚಾ ಪೆವಿಲಿಯನ್‌ನ 3ನೇ ಸ್ಟ್ಯಾಂಡ್‌ಗೆ ರೋಹಿತ್‌ ಶರ್ಮಾ, ಗ್ರ್ಯಾಂಡ್‌ ಸ್ಟ್ಯಾಂಡ್‌ ಲೆವೆಲ್‌ 2 ಗೆ ಶರದ್‌ ಪವಾರ್‌, ಗ್ರ್ಯಾಂಡ್‌ ಸ್ಟ್ಯಾಂಡ್‌ ಲೆವೆಲ್‌ 4ಗೆ ಅಜಿತ್‌ ವಾಡೇಕರ್‌ ಹೆಸರಿಡಲಾಗಿದೆ.

ಇದರ ಜೊತೆಗೆ ಕಳೆದ ವರ್ಷ ನಿಧನರಾದ ಎಂಸಿಎ ಮಾಜಿ ಅಧ್ಯಕ್ಷ ಅಮೋಲ್ ಕಾಳೆ ಅವರಿಗೆ ಗೌರವ ಸಲ್ಲಿಸಲು ಎಂಸಿಎ ಪೆವಿಲಿಯನ್‌ಲ್ಲಿರುವ ಪಂದ್ಯದ ದಿನದ ಕಚೇರಿಯನ್ನು ‘ಅಮೋಲ್ ಕಾಳೆ ಅವರ ಸ್ಮರಣಾರ್ಥ ಎಂಸಿಎ ಕಚೇರಿ ಲಾಂಜ್‌’ ಎಂದು ಮರುನಾಮಕರಣ ಮಾಡಲಾಗಿದೆ.

ವಿಶ್ವ ಬಿಲಿಯರ್ಡ್ಸ್‌:

ಅಡ್ವಾಣಿ ಫೈನಲ್‌ಗೆ

ಕಾರ್ಲೋ(ಐರ್ಲೆಂಡ್‌): ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಗ್ರ ಆಟಗಾರ ಪಂಕಜ್‌ ಅಡ್ವಾಣಿ ತಮ್ಮ ಎದುರಾಳಿ ಧ್ರುವ್‌ ಸಿತ್ವಾಲಾ ಅವರನ್ನು ಸೋಲಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಎರಡೂವರೆ ಗಂಟೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಡ್ವಾಣಿ, ಧ್ರುವ್ ಅವರನ್ನು 1070-300 ಅಂಕಗಳ ಅಂತರದಿಂದ ಮಣಿಸಿದರು. ಧ್ರುವ್ ಆರಂಭಿಕ ಮುನ್ನಡೆ ಸಾಧಿಸಿದರೂ, ಬಳಿಕ ಅಡ್ವಾಣಿ ಹಿಡಿತ ಸಾಧಿಸಿದರು. 2016ರಿಂದಲೂ ಅಡ್ವಾಣಿ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಶಿಪ್ ಗೆಲ್ಲುತ್ತಾ ಬಂದಿದ್ದು, ಈ ಬಾರಿಯೂ ಗೆಲ್ಲುವ ತವಕದಲ್ಲಿದ್ದಾರೆ.ಮತ್ತೊಂದು ಸೆಮಿಫೈನಲ್‌ ಪಂದ್ಯ ಭಾರತದ ಸೌರವ್ ಕೊಠಾರಿ ಮತ್ತು ಇಂಗ್ಲೆಂಡ್‌ನ ಡೇವಿಡ್‌ ಕಾಸಿಯರ್‌ ನಡುವೆ ನಡೆಯಲಿದೆ.

ಐಸಿಸಿ ಸಭೆಗೆ ಪಿಸಿಬಿ

ಮುಖ್ಯಸ್ಥ ನಕ್ವಿ ಗೈರು

ಕರಾಚಿ: ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಐಸಿಸಿ ಸಭೆಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಮುಖ್ಯಸ್ಥ ಮೊಹ್ಸಿನ್‌ ನಕ್ವಿ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎದುರಾದ ನಷ್ಟಕ್ಕೆ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದ ಪಾಕಿಸ್ತಾನ ಆ ಬಗ್ಗೆ ಸಭೆಯಲಲಿ ಪ್ರಸ್ತಾಪಿಸಿ, ಐಸಿಸಿ ಮೇಲೆ ಒತ್ತಡ ಹೇರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ನಕ್ವಿ ಗೈರಾಗಿದ್ದರಿಂದ ಪಿಸಿಬಿಗೆ ಪರಿಹಾರ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.

Share this article