ಕ್ರೀಡಾ ಸಾಧಕರಿಗೆ ಕೇಂದ್ರ ಸರ್ಕಾರದ ಗೌರವ : ಶ್ರೀಜೇಶ್‌ಗೆ ಪದ್ಮಭೂಷಣ, ಆರ್‌.ಅಶ್ವಿನ್‌ಗೆ ಪದ್ಮಶ್ರೀ ಪ್ರಶಸ್ತಿ

KannadaprabhaNewsNetwork |  
Published : Jan 26, 2025, 01:35 AM ISTUpdated : Jan 26, 2025, 04:10 AM IST
ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಭಾರತ ಹಾಕಿ ತಂಡದ ಮಾಜಿ ನಾಯಕ, ದಿಗ್ಗಜ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌.  | Kannada Prabha

ಸಾರಾಂಶ

ಕ್ರೀಡಾ ಸಾಧಕರಿಗೆ ಕೇಂದ್ರ ಸರ್ಕಾರದ ಗೌರವ. ಪದ್ಮಶ್ರೀ ಪಡೆದ ಐ.ಎಂ.ವಿಜಯನ್‌, ಹರ್ವಿಂದರ್‌ ಸಿಂಗ್‌, ಸತ್ಯಪಾಲ್ ಸಿಂಗ್‌.

ನವದೆಹಲಿ: ಭಾರತ ಹಾಕಿ ತಂಡದ ಮಾಜಿ ನಾಯಕ, ದಿಗ್ಗಜ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣಕ್ಕೆ ಆಯ್ಕೆಯಾಗಿದ್ದಾರೆ.

 ಇದೇ ವೇಳೆ ಇತ್ತೀಚೆಗೆ ಅಂ.ರಾ. ಕ್ರಿಕೆಟ್‌ನಿಂದ ನಿವೃತ್ತಿಯಾದ ದಿಗ್ಗಜ ಸ್ಪಿನ್ನರ್‌ ಆರ್‌.ಅಶ್ವಿನ್‌, ದಿಗ್ಗಜ ಫುಟ್ಬಾಲಿಗ ಐ.ಎಂ.ವಿಜಯನ್‌, ಪ್ಯಾರಾಲಿಂಪಿಕ್‌ನ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಹರ್ವಿಂದರ್‌ ಸಿಂಗ್‌ ಹಾಗೂ ಪ್ಯಾರಾ ಅಥ್ಲೆಟಿಕ್ಸ್‌ ಕೋಚ್‌ ಸತ್ಯಪಾಲ್‌ ಸಿಂಗ್‌, 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾಗಲಿದ್ದಾರೆ. 

ಶ್ರೀಜೇಶ್‌, ಹಾಕಿ

36 ವರ್ಷದ 2 ಬಾರಿ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ. 2020, 2022, 2024ರಲ್ಲಿ ಎಫ್‌ಐಎಚ್ ವಿಶ್ವ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನರಾಗಿದ್ದರು. 2014, 2022ರ ಏಷ್ಯಾಡ್‌ ಚಿನ್ನ ವಿಜೇತ ತಂಡದ ಸದಸ್ಯ. ಸದ್ಯ ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರಲ್ಲಿ ಪದ್ಮಶ್ರೀ, 2021ರಲ್ಲಿ ಖೇಲ್‌ ರತ್ನ ಲಭಿಸಿತ್ತು. 

ಆರ್‌.ಅಶ್ವಿನ್‌, ಕ್ರಿಕೆಟ್‌

ಭಾರತ ಕ್ರಿಕೆಟ್‌ ತಂಡವನ್ನೂ ಮೂರೂ ಮಾದರಿಯಲ್ಲಿ ಪ್ರತಿನಿಧಿಸಿರುವ ಆಟಗಾರ. 106 ಟೆಸ್ಟ್‌ಗಳಲ್ಲಿ 537 ವಿಕೆಟ್‌ ಕಬಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್‌, 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ತಮ್ಮ ಹೆಸರಲ್ಲಿ ಅನೇಕ ಬೌಲಿಂಗ್‌ ದಾಖಲೆಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಂ.ರಾ. ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 

ಐಎಂ ವಿಜಯನ್‌, ಫುಟ್ಬಾಲ್‌

ಭಾರತ ಫುಟ್ಬಾಲ್‌ ಕಂಡ ಶ್ರೇಷ್ಠ ಆಟಗಾರರ ಪೈಕಿ ಒಬ್ಬರು. ಕೇರಳ ಪೊಲೀಸ್‌ ತಂಡದ ಪರ ವೃತ್ತಿಬದುಕು ಆರಂಭಿಸಿದ ವಿಜಯನ್‌ 1992ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 2003ರ ವರೆಗೂ ಅಂ.ರಾ. ಫುಟ್ಬಾಲ್‌ನಲ್ಲಿ ಸಕ್ರಿಯರಾಗಿದ್ದ ವಿಜಯನ್‌ ಭಾರತ ಪರ 72 ಪಂದ್ಯದಲ್ಲಿ 29 ಗೋಲು ಗಳಿಸಿದ್ದಾರೆ. 2003ರಲ್ಲಿ ಅರ್ಜುನ ಪ್ರಶಸ್ತಿ ಸಿಕ್ಕಿತ್ತು.

ಹರ್ವಿಂದರ್‌, ಪ್ಯಾರಾ ಆರ್ಚರಿ

ಹರ್ಯಾಣದ ಹರ್ವಿಂದರ್‌ 2 ಬಾರಿ ಪ್ಯಾರಾಲಿಂಪಿಕ್‌ ಪದಕ ವಿಜೇತ ಆರ್ಚರಿ ಪಟು. 2020 ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪುರುಷರ ರೀಕರ್ವ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಗೆದ್ದಿದ್ದ ಹರ್ವಿಂದರ್‌, 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 33ರ ಹರ್ವಿಂದರ್‌ 2018ರ ಪ್ಯಾರಾ ಏಷ್ಯಾಡ್‌ನಲ್ಲೂ ಚಿನ್ನ ಗೆದ್ದಿದ್ದರು. 

ಸತ್ಯಪಾಲ್‌, ಪ್ಯಾರಾ ಅಥ್ಲೆಟಿಕ್ಸ್‌

2007ರಿಂದಲೂ ಭಾರತ ಪ್ಯಾರಾ ಅಥ್ಲೆಟಿಕ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿರುವ ಉತ್ತರ ಪ್ರದೇಶದ ಸತ್ಯಪಾಲ್‌ ಸಿಂಗ್‌, ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಅತಿಕಿರಿಯ ಕೋಚ್‌ ಎನ್ನುವ ಹಿರಿಮೆ ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಹಲವು ಪ್ಯಾರಾಲಿಂಪಿಕ್ಸ್‌, ಪ್ಯಾರಾ ಏಷ್ಯಾಡ್‌ಗಳಲ್ಲಿ ಪಾಲ್ಗೊಂಡಿದ್ದಾರೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌