ಚೆಪಾಕ್‌ನಲ್ಲಿ ಟೀಂ ಇಂಡಿಯಾಗೆ 2 ವಿಕೆಟ್‌ ರೋಚಕ ಗೆಲುವಿನ ತಿಲಕ! 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ

KannadaprabhaNewsNetwork |  
Published : Jan 26, 2025, 01:33 AM ISTUpdated : Jan 26, 2025, 04:15 AM IST
ಒತ್ತಡದ ನಡುವೆ ಅಮೋಘ ಆಟವಾಡಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ತಿಲಕ್‌ ವರ್ಮಾ.  | Kannada Prabha

ಸಾರಾಂಶ

ಟೀಂ ಇಂಡಿಯಾಗೆ 2 ವಿಕೆಟ್‌ ರೋಚಕ ಗೆಲುವು. ತೀವ್ರ ಒತ್ತಡದ ನಡುವೆಯೂ ಹೋರಾಡಿ ತಂಡವನ್ನು ಗೆಲ್ಲಿಸಿದ ತಿಲಕ್‌ ವರ್ಮಾ. 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ.

ಚೆನ್ನೈ: ತಿಲಕ್‌ ವರ್ಮಾ ಭಾರತ ಕ್ರಿಕೆಟ್‌ನ ಭವಿಷ್ಯದ ಸ್ಟಾರ್‌ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತ ತಂಡದ ಬ್ಯಾಟಿಂಗ್‌ ಬಲವನ್ನು ಪರೀಕ್ಷೆ ಮಾಡಲು ಶನಿವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಸೂಕ್ತ ಸನ್ನಿವೇಶ ನಿರ್ಮಾಣಗೊಂಡಿತ್ತು. 166 ರನ್‌ ಗುರಿ ಬೆನ್ನತ್ತುವಾಗ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟಾಗ, ಏಕಾಂಗಿ ಹೋರಾಟ ನಡೆಸಿದ ತಿಲಕ್‌, ಬಾಲಂಗೋಚಿ ಬ್ಯಾಟರ್‌ಗಳ ಜೊತೆ ಇನ್ನಿಂಗ್ಸ್‌ ಕಟ್ಟಿ ಭಾರತಕ್ಕೆ 2 ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದ್ದು, ತವರಿನಲ್ಲಿ ಮತ್ತೊಂದು ಸರಣಿ ಜಯದತ್ತ ಸಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ಇಂಗ್ಲೆಂಡ್‌ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಭಾರತೀಯ ಸ್ಪಿನ್ನರ್‌ಗಳ ಎದುರು ರನ್‌ ಗಳಿಸಲು ಪರದಾಡಿತು. ನಾಯಕ ಜೋಸ್‌ ಬಟ್ಲರ್‌ ಮತ್ತೊಮ್ಮೆ ತಂಡಕ್ಕೆ ನೆರವಾಗಿ 45 ರನ್‌ ಕೊಡುಗೆ ನೀಡಿದರು. 17ನೇ ಓವರಲ್ಲಿ 137ಕ್ಕೆ 8 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಬ್ರೈಡನ್‌ ಕಾರ್ಸ್‌ರ 31 ರನ್‌ ಸ್ಪರ್ಧಾತ್ಮಕ ಮೊತ್ತ ತಲುಪಲುಯ ಸಹಕಾರಿಯಾಯಿತು. ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಬಳಿಸಿದರು. ತಿಲಕ್‌ ಮನಮೋಹಕ ಆಟ: ಮೊದಲ ಓವರ್‌ನಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಅಭಿಷೇಕ್‌ ಶರ್ಮಾ 12, ಸಂಜು ಸ್ಯಾಮ್ಸನ್‌ 5 ರನ್‌ಗೆ ಔಟಾದರು. ನಾಯಕ ಸೂರ್ಯಕುಮಾರ್‌ 12, ಧೃವ್‌ ಜುರೆಲ್‌ 4, ಹಾರ್ದಿಕ್‌ ಪಾಂಡ್ಯ 7 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. 10ನೇ ಓವರಲ್ಲಿ 78 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.

3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ತಿಲಕ್‌, ವಿಕೆಟ್‌ ಉಳಿಸಿಕೊಳ್ಳುವುದರ ಜೊತೆಗೆ ಅಗತ್ಯ ರನ್‌ರೇಟ್‌ ಕೈಮೀರದಂತೆ ಎಚ್ಚರ ವಹಿಸಿದರು. ಮೊದಲು 6ನೇ ವಿಕೆಟ್‌ಗೆ ವಾಷಿಂಗ್ಟನ್‌ ಸುಂದರ್‌ (26) ಜೊತೆ 38 ರನ್‌ ಸೇರಿಸಿದ ತಿಲಕ್‌, ಆ ಬಳಿಕ 8ನೇ ವಿಕೆಟ್‌ಗೆ ಅರ್ಶ್‌ದೀಪ್‌ ಜೊತೆ 20 ರನ್‌ ಕಲೆಹಾಕಿದರು.

ಬಳಿಕ ಮುರಿಯದ 9ನೇ ವಿಕೆಟ್‌ಗೆ ರವಿ ಬಿಷ್ಣೋಯ್‌ ಜೊತೆಗೂಡಿ 14 ಎಸೆತದಲ್ಲಿ 20 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರವಿ ಕ್ರೀಸ್‌ಗಿಳಿದಾಗ ಭಾರತಕ್ಕೆ ಗೆಲ್ಲಲು 18 ಎಸೆತದಲ್ಲಿ 20 ರನ್‌ ಬೇಕಿತ್ತು. 18ನೇ ಓವರಲ್ಲಿ 7, 19ನೇ ಓವರಲ್ಲಿ 7 ರನ್‌ ಕದ್ದ ಭಾರತ, ಕೊನೆಯ ಓವರ್‌ಗೆ 6 ರನ್‌ ಉಳಿಸಿಕೊಂಡಿತು. 20ನೇ ಓವರ್‌ನ ಮೊದಲ ಎಸೆತದಲ್ಲಿ 2 ರನ್‌ ಪಡೆದ ತಿಲಕ್‌, 2ನೇ ಎಸೆತವನ್ನು ಬೌಂಡರಿಗಟ್ಟಿ ಭಾರತವನ್ನು ಜಯದ ದಡ ಸೇರಿಸಿದರು.

ತಿಲಕ್‌ 55 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್‌ನೊಂದಿಗೆ ಔಟಾಗದೆ 72 ರನ್‌ ಗಳಿಸಿದರೆ, ಬಿಷ್ಣೋಯ್‌ 5 ಎಸೆತದಲ್ಲಿ 2 ಬೌಂಡರಿಯೊಂದಿಗೆ 9 ರನ್‌ ಗಳಿಸಿ ಗೆಲುವಿಗೆ ಕೊಡುಗೆ ನೀಡಿದರು. ಸ್ಕೋರ್‌: ಇಂಗ್ಲೆಂಡ್‌ 20 ಓವರಲ್ಲಿ 165/9 ( ಬಟ್ಲರ್‌ 45, ಕಾರ್ಸ್‌ 31, ಅಕ್ಷರ್‌ 2-32, ವರುಣ್‌ 2-38), ಭಾರತ 19.2 ಓವರಲ್ಲಿ 166/8 (ತಿಲಕ್‌ 72*, ವಾಷಿಂಗ್ಟನ್‌ 26, ಬಿಷ್ಣೋಯ್‌ 9*, ಕಾರ್ಸ್‌ 3-29) ಪಂದ್ಯಶ್ರೇಷ್ಠ: ತಿಲಕ್‌ ವರ್ಮಾ

--ಮತ್ತೆ ಶಮಿಗಿಲ್ಲ ಚಾನ್ಸ್‌!

ವೇಗಿ ಮೊಹಮದ್‌ ಶಮಿ 2ನೇ ಪಂದ್ಯದಲ್ಲೂ ಆಡಲಿಲ್ಲ. ಶುಕ್ರವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದ ಶಮಿ, ಶನಿವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಅವರನ್ನು ಆಡಿಸದೆ ಇರಲು ಭಾರತ ತಂಡ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌