ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ನಲ್ಲಿ ಬಹುತೇಕ ಸಮಯ ಮಳೆಯಿಂದಾಗಿ ವ್ಯರ್ಥವಾದರೂ, ಪಂದ್ಯ ರೋಚಕತೆ ಉಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಸ್ಪರ್ಧೆಯೊಳಗೊಂದು ಸ್ಪರ್ಧೆ ನಡೆಯುತ್ತಿದ್ದು, ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದ್ದರೆ, ಭಾರತ ಡ್ರಾ ಸಾಧಿಸಲು ಹೋರಾಟ ನಡೆಸುತ್ತಿದೆ.
ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬೂಮ್ರಾ, ಆಕಾಶ್‌ದೀಪ್‌ರ ಸಾಹಸ ಹಾಗೂ ಮಳೆಯ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸಲ್ಲಿ ಫಾಲೋ ಆನ್ ತಪ್ಪಿಸಿಕೊಂಡಿದ್ದು, ಆಸ್ಟ್ರೇಲಿಯಾ ಮತ್ತೊಮ್ಮೆ ಬ್ಯಾಟ್ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. 4ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 252 ರನ್ ಗಳಿಸಿ, ಇನ್ನೂ 193 ರನ್ ಹಿನ್ನಡೆಯಲ್ಲಿದ್ದರೂ ಭಾರತೀಯ ಪಾಳಯದಲ್ಲಿ ಸಮಾಧಾನವಂತೂ ಇದೆ.5ನೇ ಹಾಗೂ ಕೊನೆಯ ದಿನವಾದ ಮಳೆಯಿಂದ ಮತ್ತಷ್ಟು ನೆರವು ಸಿಗುವ ನಿರೀಕ್ಷೆ ಇದ್ದು, ಭಾರತ ಸೋಲಿನಿಂದ ಬಚಾವ್ ಆಗುವ ವಿಶ್ವಾಸವಿರಿಸಿಕೊಂಡಿದೆ.ರಾಹುಲ್‌ಗೆ ಲಕ್, ರೋಹಿತ್ ಫೇಲ್: 3ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 51 ರನ್ ಗಳಿಸಿದ್ದ ಭಾರತ, 4ನೇ ದಿನದಾಟದ ಮೊದಲ ಎಸೆತದಲ್ಲೇ ಜೀವದಾನ ಪಡೆಯಿತು. ಸ್ಲಿಪ್‌ನಲ್ಲಿದ್ದ ಸ್ಟೀವ್ ಸ್ಮಿತ್ ಸುಲಭ ಕ್ಯಾಚ್ ಕೈಚೆಲ್ಲಿ ರಾಹುಲ್ ಕ್ರೀಸ್‌ನಲ್ಲಿ ಮುಂದುವರಿಯಲು ಅನುಕೂಲ ಮಾಡಿಕೊಟ್ಟರು. ಆದರೆ, ನಾಯಕ ರೋಹಿತ್ ಶರ್ಮಾ (10) ಅವರ ವಿಕೆಟ್ ಉರುಳಿಸಿದ ಪ್ಯಾಟ್ ಕಮಿನ್ಸ್, ಆಸೀಸ್ ಮೇಲುಗೈ ಸಾಧಿಸಲು ಕಾರಣರಾದರು.ರಾಹುಲ್-ಜಡ್ಡು ಹೋರಾಟ: ಜೀವದಾನ ಸಿಕ್ಕಾಗ 33 ರನ್ ಗಳಿಸಿದ್ದ ರಾಹುಲ್, ಆ ಮೊತ್ತಕ್ಕೆ ಇನ್ನೂ 51 ರನ್ ಸೇರಿಸಿ ಅತ್ಯಮೂಲ್ಯ 84 ರನ್ ಕೊಡುಗೆ ನೀಡಿದರು. ಜಡೇಜಾ ಜೊತೆ ಸೇರಿ 6ನೇ ವಿಕೆಟ್‌ಗೆ 67 ರನ್ ಸೇರಿಸಿದರು. ಈ ನಡುವೆ ಮೀನಖಂಡದ ಸೆಳೆತಕ್ಕೆ ಒಳಗಾದ ವೇಗಿ ಜೋಶ್ ಹೇಜಲ್‌ವುಡ್ ಮೈದಾನ ತೊರೆಯಬೇಕಾಯಿತು.
ರಾಹುಲ್ ಔಟಾದ ಬಳಿಕ, ಜಡೇಜಾ ಇನ್ನಷ್ಟು ಎಚ್ಚರಿಕೆಯಿಂದ ಆಡಿದರು. ನಿತೀಶ್ ರೆಡ್ಡಿ ಜೊತೆ 7ನೇ ವಿಕೆಟ್‌ಗೆ 53 ರನ್ ಕಲೆಹಾಕಿದರು. 77 ರನ್ ಗಳಿಸಿ ಜಡೇಜಾ 9ನೇಯವರಾಗಿ ಔಟಾದಾಗ, ಭಾರತಕ್ಕೆ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 32 ರನ್ ಬೇಕಿತ್ತು.10ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಜಸ್‌ಪ್ರೀತ್ ಬೂಮ್ರಾ ಹಾಗೂ ಆಕಾಶ್‌ದೀಪ್ ಔಟಾಗದೆ 39 ರನ್ ಸೇರಿಸಿ ತಂಡದ ಪಾಲಿಗೆ ಆಪತ್ಭಾಂಧವರಾದರು. ಆಕಾಶ್ 31 ಎಸೆತದಲ್ಲಿ ಔಟಾಗದೆ 27 ರನ್ ಗಳಿಸಿದ್ದು, ಬೂಮ್ರಾ 27 ಎಸೆತದಲ್ಲಿ 10 ರನ್ ದಾಖಲಿಸಿ ಅಜೇಯರಾಗಿ ಉಳಿದಿದ್ದಾರೆ.
ಕೊನೆಯ ದಿನವಾದ ಬುಧವಾರ, ಆಸ್ಟ್ರೇಲಿಯಾ ಮೊದಲು ಭಾರತವನ್ನು ಮೊದಲ ಇನ್ನಿಂಗ್ಸಲ್ಲಿ ಆಲೌಟ್ ಮಾಡಿ, 2ನೇ ಇನ್ನಿಂಗ್ಸಲ್ಲಿ ಅಂದಾಜು 20 ಓವರ್ ಬ್ಯಾಟ್ ಮಾಡಿ, 300ರ ಆಸುಪಾಸಿನಲ್ಲಿ ಗುರಿ ನಿಗದಿಪಡಿಸಿ ಬಳಿಕ ಭಾರತವನ್ನು ಮತ್ತೊಮ್ಮೆ ಆಲೌಟ್ ಮಾಡಬೇಕಿದೆ. ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ. ಸ್ಕೋರ್: ಆಸ್ಟ್ರೇಲಿಯಾ 445/10, ಭಾರತ (ಮೊದಲ ಇನ್ನಿಂಗ್ಸ್) 252/9 (ರಾಹುಲ್ 84, ಜಡೇಜಾ 77, ಆಕಾಶ್ 27*, ಬೂಮ್ರಾ 10*, ಕಮಿನ್ಸ್ 4/80, ಸ್ಟಾರ್ಕ್ 3/83)---ಡ್ರೆಸ್ಸಿಂಗ್ ರೂಂನಲ್ಲಿ
ಸಂಭ್ರಮಿಸಿದ ಭಾರತ!ಆಕಾಶ್‌ದೀಪ್ ಬೌಂಡರಿ ಬಾರಿಸಿ ಭಾರತವನ್ನು ಫಾಲೋ ಆನ್‌ನಿಂದ ಪಾರು ಮಾಡುತ್ತಿದ್ದಂತೆ ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಪಂದ್ಯ ಗೆದ್ದವರಂತೆ ಸಂಭ್ರಮಿಸಲಾಯಿತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಗೌತಮ್ ಗಂಭೀರ್ ಸೇರಿ ಎಲ್ಲ ಆಟಗಾರರು ಸಂಭ್ರಮದಲ್ಲಿ ಭಾಗಿಯಾದರು. ಸಾಮಾಜಿಕ ತಾಣಗಳಲ್ಲಿ ಭಾರತೀಯ ಆಟಗರರು ಸಂಭ್ರಮಿಸುವ ವಿಡಿಯೋ ವೈರಲ್ ಆಗಿದೆ.
====ಹೇಜಲ್‌ವುಡ್ ಈಸರಣಿಯಿಂದಲೇ ಔಟ್?
ಮೀನಖಂಡದ ಸೆಳೆತಕ್ಕೆ ತುತ್ತಾಗಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ 3ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಅವರು ಬಹುತೇಕ ಈ ಸರಣಿಯಿಂದಲೇ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.