ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್‌ನಲ್ಲಿ ಕೊನೆಗೂ ಮಳೆರಾಯನಿಗೆ ಗೆಲುವು ದಕ್ಕಿದೆ. ಪಂದ್ಯದ ಮೊದಲ ದಿನದಿಂದಲೂ ಅಡ್ಡಿಪಡಿಸುತ್ತಿದ್ದ ಮಳೆ, ಕೊನೆ ದಿನದವರೆಗೂ ಕಾಟ ಕೊಟ್ಟಿತು. ಹೀಗಾಗಿ ರೋಚಕ ಕ್ಲೈಮ್ಯಾಕ್ಸ್‌ನ ನಿರೀಕ್ಷೆ ಹುಟ್ಟುಹಾಕಿದ್ದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
4ನೇ ದಿನದ ವರೆಗೂ ಆಸ್ಟ್ರೇಲಿಯಾ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದರೂ, ಕೊನೆ ದಿನ ಪಂದ್ಯಕ್ಕೆ ಟ್ವಿಸ್ಟ್ ಲಭಿಸಿ, ಒಂದು ಹಂತದಲ್ಲಿ ಭಾರತದ ಗೆಲುವಿನ ಆಸೆ ಚಿಗುರೊಡೆದಿತ್ತು. ಆದರೆ ರೋಚಕ ಪೈಪೋಟಿಗೆ ಮಳೆ ಅನುಮತಿಸಲಿಲ್ಲ. 275 ರನ್‌ಗಳ ಗುರಿ ಪಡೆದ ಭಾರತ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದಾಗ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಬಳಿಕ ರೆಫ್ರಿಗಳು ಡ್ರಾ ಎಂದು ಘೋಷಿಸಿದರು. ಸದ್ಯ 5 ಪಂದ್ಯಗಳ ಸರಣಿ 1-1ರಲ್ಲೇ ಸಮಬಲಗೊಂಡಿದೆ.
8 ರನ್ ಸೇರಿಸಿ ಆಲೌಟ್: ಮಂಗಳವಾರ ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬೂಮ್ರಾ, ಆಕಾಶ್‌ದೀಪ್‌ರ ಸಾಹಸ ಹಾಗೂ ಮಳೆಯ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸಲ್ಲಿ ಫಾಲೋ ಆನ್ ತಪ್ಪಿಸಿಕೊಂಡಿತ್ತು. ದಿನದಂತ್ಯಕ್ಕೆ 9 ವಿಕೆಟ್‌ಗೆ 252 ರನ್ ಗಳಿಸಿತ್ತು. ಕೊನೆ ದಿನವಾದ ಬುಧವಾರ 8 ರನ್ ಸೇರಿಸಿದ ಭಾರತ 260ಕ್ಕೆ ಆಲೌಟಾಯಿತು. ಆಕಾಶ್‌ದೀಪ್ 31 ರನ್ ಗಳಿಸಿ ಔಟಾದರು.
ಆಸೀಸ್ ಪೆವಿಲಿಯನ್ ಪರೇಡ್: ಕೊನೆ ದಿನದಾಟದ ಮೊದಲ ಅವಧಿ ಬಹುತೇಕ ಮಳೆಗೆ ಆಹುತಿಯಾಗಿತ್ತು. ಕೇವಲ 4 ಓವರ್ ಮಾತ್ರ ಎಸೆಯಲು ಸಾಧ್ಯವಾಯಿತು. ಹೀಗಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್ ಮುನ್ನಡೆ ಗಳಿಸಿದ್ದ ಆಸೀಸ್, 2ನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ ಆಟಕ್ಕೆ ಒತ್ತುಕೊಟ್ಟಿತು. ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿ ಪಂದ್ಯ ಗೆಲ್ಲುವ ಕಾತರದಲ್ಲಿದ್ದ ತಂಡ ಸತತ ವಿಕೆಟ್ ಬಿದ್ದರೂ ತಲೆಕೆಡಿಸಿಕೊಳ್ಳಲಿಲ್ಲ.
ಉಸ್ಮಾನ್ ಖವಾಜ(8) ಹಾಗೂ ಲಬುಶೇನ್(1)ಗೆ ಬೂಮ್ರಾ ಪೆವಿಲಿಯನ್ ಹಾದಿ ತೋರಿದರೆ, ಮೆಕ್‌ಸ್ವೀನಿ(4) ಹಾಗೂ ಮಿಚೆಲ್ ಮಾರ್ಷ್(2)ರನ್ನು ಆಕಾಶ್‌ದೀಪ್ ಔಟ್ ಮಾಡಿದರು. ಸ್ಟೀವ್ ಸ್ಮಿತ್ ಹಾಗೂ 17 ರನ್ ಗಳಿಸಿದ್ದ ಅಪಾಯಕಾರಿ ಟ್ರ್ಯಾವಿಸ್ ಹೆಡ್‌ರನ್ನು ಮೊಹಮದ್ ಸಿರಾಜ್ ಪೆವಿಲಿಯನ್‌ಗೆ ಅಟ್ಟಿದರು. ಆದರೆ ಅಲೆಕ್ಸ್ ಕೇರಿ ಔಟಾಗದೆ 20, ನಾಯಕ ಕಮಿನ್ಸ್ 22 ರನ್ ಗಳಿಸಿ, ಮುನ್ನಡೆಯನ್ನು 275ಕ್ಕೆ ವಿಸ್ತರಿಸಲು ನೆರವಾದರು. ತಂಡ 18 ಓವರಲ್ಲಿ 7 ವಿಕೆಟ್‌ಗೆ 89 ರನ್ ಗಳಿಸಿದ್ದಾಗ ಅಚ್ಚರಿ ರೀತಿಯಲ್ಲಿ ಡಿಕ್ಲೇರ್ ಘೋಷಿಸಿತು. 54 ಓವರ್‌ಗಳಲ್ಲಿ 275 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತುವ ಅನಿವಾರ್ಯತೆಗೆ ಸಿಲುಕಿದ ಭಾರತಕ್ಕೆ ಪಂದ್ಯ ಡ್ರಾಗೊಳಿಸಿದರೂ ಸಾಕಿತ್ತು. ಇದಕ್ಕೆ ಮಳೆ ಕೂಡಾ ನೆರವಾಯಿತು. 2.1 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. ಬಳಿಕ ಪಂದ್ಯ ನಡೆಯಲಿಲ್ಲ. ಇತ್ತಂಡಗಳು ಡ್ರಾಗೆ ತೃಪ್ತಿಪಟ್ಟುಕೊಂಡವು.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತ್ತು. ಸ್ಕೋರ್: ಆಸ್ಟ್ರೇಲಿಯಾ 445/10 ಮತ್ತು 89/7 ಡಿಕ್ಲೇರ್(ಕಮಿನ್ಸ್ 22, ಅಲೆಕ್ಸ್ ಕೇರಿ 20, ಬೂಮ್ರಾ 3-18, ಆಕಾಶ್‌ದೀಪ್ 2-28, ಸಿರಾಜ್ 2-36), ಭಾರತ 260/10 (ಆಕಾಶ್ 31, ಕಮಿನ್ಸ್ 4/81) ಮತ್ತು 8/0 (ಜೈಸ್ವಾಲ್ ಔಟಾಗದೆ 4, ರಾಹುಲ್ ಔಟಾಗದೆ 4)
ಕಪಿಲ್, ಇಶಾಂತ್ ದಾಖಲೆ ಮುರಿದ ವೇಗಿ ಬೂಮ್ರಾ
ಹೊರ ದೇಶವೊಂದರಲ್ಲಿ ಗರಿಷ್ಠ ಟೆಸ್ಟ್ ವಿಕೆಟ್ ಕಿತ್ತ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅವರು ಕಪಿಲ್ ದೇವ್ ಹಾಗೂ ಇಶಾಂತ್ ಶರ್ಮಾ ದಾಖಲೆ ಮುರಿದಿದ್ದಾರೆ. ಬೂಮ್ರಾ ಬುಧವಾರ 3 ವಿಕೆಟ್ ಪಡೆದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ವಿಕೆಟ್ ಗಳಿಕೆಯನ್ನು 53ಕ್ಕೆ ಹೆಚ್ಚಿಸಿದರು. ಕಪಿಲ್ ದೇವ್ ಆಸ್ಟ್ರೇಲಿಯಾದಲ್ಲಿ 51 ವಿಕೆಟ್, ಇಶಾಂತ್ ಶರ್ಮಾ ಇಂಗ್ಲೆಂಡ್‌ನಲ್ಲಿ 51 ವಿಕೆಟ್ ಪಡೆದಿದ್ದರು. ಈ ಮೂವರ ಹೊರತಾಗಿ ಬೇರೆ ಯಾವುದೇ ಭಾರತೀಯ ಬೌಲರ್, ಹೊರ ದೇಶವೊಂದರಲ್ಲಿ 50+ ವಿಕೆಟ್ ಪಡೆದಿಲ್ಲ.
9/94: ಆಸ್ಟ್ರೇಲಿಯಾದಲ್ಲಿ ಬೂಮ್ರಾ 2ನೇ ಶ್ರೇಷ್ಠ ಆಟ
ಬೂಮ್ರಾ ಈ ಪಂದ್ಯದಲ್ಲಿ 94 ರನ್ ನೀಡಿ 9 ವಿಕೆಟ್ ಪಡೆದರು. ಇದು ಭಾರತೀಯ ವೇಗಿಗಳಿಂದ ಆಸ್ಟ್ರೇಲಿಯಾದಲ್ಲಿ ದಾಖಲಾದ 2ನೇ ಶ್ರೇಷ್ಠ ಪ್ರದರ್ಶನ. 2018ರಲ್ಲಿ ಮೆಲ್ಬರ್ನ್‌ನಲ್ಲಿ ಬೂಮ್ರಾ 84 ರನ್‌ಗೆ 9 ವಿಕೆಟ್ ಪಡೆದಿದ್ದರು. ಪಟ್ಟಿಯಲ್ಲಿ ಅಗ್ರ-3ರಲ್ಲೂ ಬೂಮ್ರಾ ಇರುವುದು ವಿಶೇಷ. ಇತ್ತೀಚೆಗೆ ಪರ್ತ್ ಟೆಸ್ಟ್‌ನಲ್ಲಿ ಅವರು 72ಕ್ಕೆ 8 ವಿಕೆಟ್ ಪಡೆದಿದ್ದರು. 1985ರಲ್ಲಿ ಅಡಿಲೇಡ್‌ನಲ್ಲಿ ಕಪಿಲ್ ದೇವ್ 109ಕ್ಕೆ 8 ವಿಕೆಟ್ ಪಡೆದಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.