ಕಪ್‌ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ

Published : Dec 13, 2025, 05:43 AM IST
High Court

ಸಾರಾಂಶ

 ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಲಿದೆಯೇ ಎಂಬುದು ಡಿ.16ರಂದು ಗೊತ್ತಾಗಲಿದೆ. ಈ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ಸಿಐಡಿಗೆ ಸೂಚಿಸಿತ್ತು. ಅಂತೆಯೇ ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ ಹೈಕೋರ್ಟ್‌ ಅನುಮತಿ ಪಡೆದ ನಂತರವೇ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿಐಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಅರ್ಜಿ ವಿಚಾರಣೆ ಮಂಗಳವಾರ ನಡೆಯಲಿದ್ದು, ಅಂದು ನ್ಯಾಯಾಲಯವು ನೀಡುವ ಆದೇಶದತ್ತ ಸಿಐಡಿ ಚಿತ್ತ ಹರಿಸಿದೆ.

ಈ ದುರಂತಕ್ಕೆ ಆರ್‌ಸಿಬಿ ತಂಡದ ಆಡಳಿತ ಮಂಡಳಿ, ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಹಾಗೂ ಅಂದು ಅಭಿನಂದನಾ ಕಾರ್ಯಕ್ರಮ ಆಯೋಜನೆ ಹೊಣೆ ಹೊತ್ತಿದ್ದ ಡಿಎನ್‌ಎ ಸಂಸ್ಥೆ ಕಾರಣವಾಗಿದೆ ಎಂದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಇದಕ್ಕೆ ಪೂರಕ ಪುರಾವೆ ಸಹ ಸಿಐಡಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಬಾಲಕಿ ಸೇರಿದಂತೆ 11 ಮಂದಿ ಮೃತಪಟ್ಟಿದ್ದರು. ಈ ಬಗ್ಗೆ ಡಿಎನ್‌ಎ, ಆರ್‌ಸಿಬಿ ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ವಿರುದ್ಧ ಆರೋಪ ಹೊರಿಸಿ ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣದಲ್ಲಿ ಡಿಎನ್‌ಎ ಸಂಸ್ಥೆಯ ನಾಲ್ವರು ಬಂಧಿತರಾಗಿದ್ದರು. ಬಳಿಕ ಪ್ರಕರಣದ ಬಗ್ಗೆ ತನಿಖೆಗೆ ಸಿಐಡಿಗೆ ಸರ್ಕಾರ ವಹಿಸಿತ್ತು.

ಬಾಡಿ ವಾರ್ನ್ ಕ್ಯಾಮೆರಾ ದೃಶ್ಯಗಳು ಸಂಗ್ರಹ:

ಈ ಪ್ರಕರಣದ ಸುದೀರ್ಘವಾಗಿ ಆರು ತಿಂಗಳು ತನಿಖೆ ನಡೆಸಿದ ಸಿಐಡಿ, ಘಟನೆಗೆ ಕಾರಣಕರ್ತರ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿದೆ. ಅಂದು ವಿಜಯೋತ್ಸವ ಮೆರವಣಿಗೆ ಹಾಗೂ ಅಭಿನಂದನಾ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವ ತಯಾರಿ, ಗಣ್ಯರಿಗೆ ಆಹ್ವಾನ ಹಾಗೂ ಬಂದೋಬಸ್ತ್ ಹೀಗೆ ಪ್ರತಿಯೊಂದರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕೆಎಸ್‌ಸಿಎ ಆಡಳಿತ ಮಂಡಳಿ, ಆರ್‌ಸಿಬಿ ಫ್ರಾಂಚೈಸಿ, ಡಿಎನ್‌ಎ ಕಂಪನಿಯ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸಹ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿದ್ದಾರೆ. ಅಂದು ಭದ್ರತೆಯಲ್ಲಿದ್ದ ಪೊಲೀಸರು ಧರಿಸಿದ್ದ ಬಾಡಿ ವೋರ್ನ್‌ ಕ್ಯಾಮೆರಾ ಹಾಗೂ ಕ್ರೀಡಾಂಗಣ ಹಾಗೂ ಅದರ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಿ ಅವಲೋಕಿಸಿದೆ. ಹಾಗೆಯೇ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಯಿಂದ ವಾಟಿಟಾಕಿಗೆ ರವಾನೆಯಾದ ತುರ್ತು ಸಂದೇಶಗಳ ಬಗ್ಗೆ ಸಹ ಸಿಐಡಿ ಮಾಹಿತಿ ಕಲೆ ಹಾಕಿ ಪರಾರ್ಮಿಶಿಸಿ ಆರೋಪ ಪಟ್ಟಿ ತಯಾರಿಸಿದೆ ಎಂದು ತಿಳಿದು ಬಂದಿದೆ.

ವಿರಾಟ್ ಕೊಹ್ಲಿ ಅಭಿನಂದನೆಗೆ ತರಾತುರಿ ಮಾಡಿ ಎಡವಟ್ಟು?

ಐಪಿಎಲ್‌ ಟೂರ್ನಿ ಮುಗಿದ ನಂತರ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಯ್ಲಿ ಅವರಿಗೆ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿದ್ದವು. ಹೀಗಾಗಿ ಟ್ರೋಫಿ ಗೆದ್ದ ಮರುದಿನವೇ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ತನ್ನ ತಂಡದ ಆಟಗಾರರನ್ನು ಅಭಿನಂದಿಸಲು ಆರ್‌ಸಿಬಿ ಫ್ರಾಂಚೈಸಿ ಅತುರಪಟ್ಟಿತು ಎನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡದೆ ಏಕಾಏಕಿ ವಿಜಯೋತ್ಸವದ ಮೆರ‍ವಣಿಗೆಗೆ ಬಗ್ಗೆ ಪ್ರಕಟಿಸಿತ್ತು. ಅಲ್ಲದೆ ಮೊದಲು ಟಿಕೆಟ್ ಎಂದು ಹೇಳಿ ಆನಂತರ ಉಚಿತ ಪ್ರವೇಶ ಎಂದಿತ್ತು. ಹೀಗೆ ಪ್ರತಿ ಹಂತದಲ್ಲಿ ಆಯೋಜಕರು ತೋರಿದ ಗೊಂದಲಕಾರಿ ನಡೆ ಮಹಾದುರಂತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂವಹನ ಕೊರತೆ?

ಇನ್ನು ಆಯೋಜನೆ ಸಂಬಂಧ ಪೊಲೀಸರು, ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಮಧ್ಯೆ ಸಂವಹನ ಕೊರತೆ ಸಹ ಘಟನೆಗೆ ಕಾರಣವಾಗಿದೆ ಎಂದು ಸಿಐಡಿ ತನಿಖೆಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ. ದೊಡ್ಡ ಕಾರ್ಯಕ್ರಮದ ಆಯೋಜನೆ ವೇಳೆ ಸಮಯ ಪಡೆದು ಪೂರ್ವಸಿದ್ಧತೆ ಮಾಡಬೇಕಿತ್ತು. ಆದರೆ ಸಂಬಂಧಪಟ್ಟ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪೊಲೀಸರ ಮಧ್ಯೆ ಸಂವಹನ ಕೊರತೆ ಎದುರಾಗಿದೆ ಎನ್ನಲಾಗಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

₹10 ಲಕ್ಷ ಕೊಡಿ, ಮೆಸ್ಸಿ ಜೊತೆಗೆ ಒಂದು ಫೋಟೋ ತೆಗೆಸಿಕೊಳ್ಳಿ!
ಹರಿಣ ಪಡೆಗೆ ಶರಣಾದ ಟೀಂ ಇಂಡಿಯಾ