17 ವರ್ಷ ಬಳಿಕ ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದ ಆರ್‌ಸಿಬಿ । ರಜತ್‌ ಪಡೆ 50 ರನ್‌ಗಳ ಜಯಭೇರಿ

ಸಾರಾಂಶ

ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿದೆ. ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ ಗೆಲುವು ಸಾಧಿಸಿತು.

 ಚೆನ್ನೈ: ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿದೆ. ಶುಕ್ರವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ ಗೆಲುವು ಸಾಧಿಸಿತು. ಇದರೊಂದಿಗೆ ಈ ಬಾರಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ಮಾತ್ರವಲ್ಲದೇ, ತನ್ನ ನೆಟ್‌ ರನ್‌ರೇಟ್‌ ಅನ್ನೂ ಕಾಪಾಡಿಕೊಂಡಿದೆ.

ಆರ್‌ಸಿಬಿ ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಇದಕ್ಕೂ ಮುನ್ನ ಗೆದ್ದಿದ್ದು 2008ರಲ್ಲಿ. ಆ ಬಳಿಕ ಬರೀ ಸೋಲುಗಳನ್ನೇ ಕಂಡು ನಿರಾಸೆ ಅನುಭವಿಸಿದ್ದ ತಂಡವು ಈ ಬಾರಿ ಸಂಘಟಿತ ಪ್ರದರ್ಶನ ತೋರಿತು.

ಕಠಿಣ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಬೇಕಾದ ಅನಿವಾರ್ಯತೆ ಸಿಲುಕಿದರೂ, ಅದನ್ನು ಸವಾಲಾಗಿ ಸ್ವೀಕರಿಸಿದ ಆರ್‌ಸಿಬಿ, ಪಾಟೀದಾರ್‌, ಸಾಲ್ಟ್‌, ಡೇವಿಡ್‌, ಪಡಿಕ್ಕಲ್‌ ಹಾಗೂ ಜಿತೇಶ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ ನಷ್ಟಕ್ಕೆ 196 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

175 ರನ್‌ಗಿಂತ ಹೆಚ್ಚಿನ ಮೊತ್ತ ಈ ಪಿಚ್‌ನಲ್ಲಿ ಸುರಕ್ಷಿತ ಎಂದು ಪಿಚ್‌ ರಿಪೋರ್ಟ್‌ ವೇಳೆ ಮ್ಯಾಥ್ಯೂ ಹೇಡನ್‌ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ನಿಜವಾಯಿತು. ಪವರ್‌-ಪ್ಲೇನಲ್ಲೇ ಜೋಶ್‌ ಹೇಜಲ್‌ವುಡ್‌ ಹಾಗೂ ಭುವನೇಶ್ವರ್‌ ಕುಮಾರ್‌, ಚೆನ್ನೈನ ನೀರಿಳಿಸಿದರು. ಅಲ್ಲಿಂದಾಚೆಗೆ ಸಿಎಸ್‌ಕೆಗೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಯಶ್‌ ದಯಾಳ್‌ ಒಂದೇ ಓವರಲ್ಲಿ ಆತಿಥೇಯ ತಂಡಕ್ಕೆ ಡಬಲ್‌ ಆಘಾತ ನೀಡಿದರು. ತಂಡ ಸಂಕಷ್ಟದಲ್ಲಿದ್ದರೂ ಎಂ.ಎಸ್‌.ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿದು ಅಚ್ಚರಿ ಮೂಡಿಸಿದರು. 16 ಎಸೆತದಲ್ಲಿ 30 ರನ್‌ ಸಿಡಿಸಿದ ಧೋನಿ, ಸಪ್ಪೆ ಮುಖ ಹಾಕಿಕೊಂಡು ಕೂತಿದ್ದ ಚೆನ್ನೈನ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಆರ್‌ಸಿಬಿಗೆ ಫಿಲ್‌ ಸಾಲ್ಟ್‌ ಉತ್ತಮ ಆರಂಭ ಒದಗಿಸಿದರು. 16 ಎಸೆತದಲ್ಲಿ 32 ರನ್‌ ಚಚ್ಚಿ, ಧೋನಿಯ ಮಾಂತ್ರಿಕ ಸ್ಪರ್ಶಕ್ಕೆ ಬಲಿಯಾದರು. ಕೊಹ್ಲಿ 31 ರನ್‌ ಗಳಿಸಲು 30 ಎಸೆತ ತೆಗೆದುಕೊಂಡರೂ, ಪಡಿಕ್ಕಲ್‌ (14 ಎಸೆತದಲ್ಲಿ 27), ರಜತ್‌ (32 ಎಸೆತದಲ್ಲಿ 51), ಜಿತೇಶ್‌ (6 ಎಸೆತದಲ್ಲಿ 12), ಡೇವಿಡ್‌ (8 ಎಸೆತದಲ್ಲಿ 22*) ಆರ್‌ಸಿಬಿ ದೊಡ್ಡ ಮೊತ್ತ ದಾಖಲಿಸಲು ನೆರವಾದರು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 196/7 (ರಜತ್‌ 51, ಸಾಲ್ಟ್‌ 32, ನೂರ್‌ 3-36, ಪತಿರನ 2-36), ಚೆನ್ನೈ 20 ಓವರಲ್ಲಿ 146/8 (ರಚಿನ್‌ 41, ಧೋನಿ 30*, ಹೇಜಲ್‌ವುಡ್‌ 3-21, ಲಿವಿಂಗ್‌ಸ್ಟೋನ್‌ 2-28, ಯಶ್‌ 2-18) ಪಂದ್ಯಶ್ರೇಷ್ಠ: ರಜತ್‌ ಪಾಟೀದಾರ್‌

ಚೆಪಾಕ್‌ನಲ್ಲಿ ಸಿಎಸ್‌ಕೆಗೆ ಅತಿದೊಡ್ಡ ಸೋಲು!

50 ರನ್‌ಗಳ ಸೋಲು ಚೆಪಾಕ್‌ ಕ್ರೀಡಾಂಗಣದಲ್ಲಿ ಸಿಎಸ್‌ಕೆಗೆ ರನ್‌ ಆಧಾರದಲ್ಲಿ ಎದುರಾದ ಅತಿದೊಡ್ಡ ಸೋಲು. 2019ರಲ್ಲಿ ಮುಂಬೈ ವಿರುದ್ಧ 46 ರನ್‌ಗಳಿಂದ ಸೋತಿದ್ದು ಈ ಹಿಂದಿನ ದಾಖಲೆ ಎನಿಸಿತ್ತು.

Share this article