ಆರ್‌ಸಿಬಿ vs ಪಂಜಾಬ್‌: ಪ್ಲೇ-ಆಫ್‌ ರೇಸ್‌ ಗೆಲ್ಲೋರ್‍ಯಾರು?

KannadaprabhaNewsNetwork |  
Published : May 09, 2024, 01:01 AM ISTUpdated : May 09, 2024, 04:30 AM IST
ಆರ್‌ಸಿಬಿ ನಾಯಕ ಡು ಪ್ಲೆಸಿ | Kannada Prabha

ಸಾರಾಂಶ

ಧರ್ಮಶಾಲಾದಲ್ಲಿ ನಿರ್ಣಾಯಕ ಕದನ. 11 ಪಂದ್ಯಗಳಲ್ಲಿ ತಲಾ 8 ಅಂಕ ಹೊಂದಿರುವ ಇತ್ತಂಡಗಳು. ಗೆಲ್ಲುವ ತಂಡದ ಪ್ಲೇ-ಆಫ್‌ ಆಸೆ ಜೀವಂತ. ಸೋತರೆ ನಾಕೌಟ್‌ ಬಾಗಿಲು ಬಂದ್‌. ಹ್ಯಾಟ್ರಿಕ್‌ ಗೆದ್ದಿರುವ ಆರ್‌ಸಿಬಿಗೆ ಮತ್ತೊಂದು ಜಯ ಕಾತರ. ಕೊಹ್ಲಿ, ಜ್ಯಾಕ್ಸ್‌, ಡು ಪ್ಲೆಸಿ ಮೇಲೆ ಎಲ್ಲರ ಚಿತ್ತ.

ಧರ್ಮಶಾಲಾ: ಆರ್‌ಸಿಬಿ ಕಪ್‌ ಗೆಲ್ಲುತ್ತೋ ಇಲ್ಲವೋ ಎನ್ನುವುದು ಆ ಮೇಲಿನ ಮಾತು. ಈಗ ಏನಿದ್ದರೂ ಅದೃಷ್ಟ ಕೈಹಿಡಿದು ಆರ್‌ಸಿಬಿ ಪ್ಲೇ-ಆಫ್‌ಗೇರಬಹುದಾ ಎಂಬ ಕುತೂಹಲ ಎಲ್ಲರಲ್ಲಿದೆ. 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಲ್ಲಿ ಬಹಳಷ್ಟು ಹಿಂದೆ ಉಳಿದಿರುವ ಆರ್‌ಸಿಬಿಗೆ ಈಗ ಪ್ರತಿ ಪಂದ್ಯವೂ ಡು ಆರ್‌ ಡೈ ಕದನ.

ಗುರುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ಮುಂದಿರುವ ಆಯ್ಕೆ ಗೆಲುವು ಮಾತ್ರ. ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದ ಆರ್‌ಸಿಬಿ ಇನ್ನು ಪ್ಲೇ-ಆಫ್‌ಗೇರುವುದೇ ಇಲ್ಲ ಅಂದುಕೊಂಡವರೇ ಜಾಸ್ತಿ. ಆದರೆ ಕಳೆದ 3 ಪಂದ್ಯಗಳ ತಂಡದ ಪ್ರದರ್ಶನ ಎಲ್ಲವನ್ನೂ ಉಲ್ಟಾ ಮಾಡಿದೆ. ಅಭೂತಪೂರ್ವ ಪ್ರದರ್ಶನ ತೋರಿ ಹ್ಯಾಟ್ರಿಕ್‌ ಜಯ ಸಾಧಿಸಿರುವ ಆರ್‌ಸಿಬಿ ಸದ್ಯ 11ರಲ್ಲಿ 4 ಜಯ ಸಾಧಿಸಿದ್ದು, 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. 

ಅತ್ತ ಪಂಜಾಬ್‌ ಪರಿಸ್ಥಿತಿ ಕೂಡಾ ಆರ್‌ಸಿಬಿಗಿಂತ ಭಿನ್ನವಾಗಿಲ್ಲ. 11 ಪಂದ್ಯಗಳಲ್ಲಿ 8 ಅಂಕದೊಂದಿಗೆ ತಂಡ 8ನೇ ಸ್ಥಾನದಲ್ಲಿದೆ.ಎರಡು ತಂಡಕ್ಕೂ ಪ್ಲೇ-ಆಫ್‌ ಹಾದಿ ಕಷ್ಟವಿದ್ದರೂ, ಅಸಾಧ್ಯವೇನಲ್ಲ. ಉಳಿದ 3 ಪಂದ್ಯಗಳನ್ನೂ ಗೆದ್ದು, ಇತರ ತಂಡಗಳ ಫಲಿತಾಂಶ ತಮ್ಮ ಪರವಾಗಿ ಬಂದರೆ ಪ್ಲೇ-ಆಫ್‌ಗೇರಲೂಬಹುದು. ಆದರೆ ಈ ಪಂದ್ಯದ ಮೂಲಕ ಒಂದು ತಂಡ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡರೆ, ಮತ್ತೊಂದು ತಂಡದ ಹಾದಿ ಬಂದ್‌ ಆಗುವುದು ಖಚಿತ.

ಸುಧಾರಿತ ಆಟ: ಟೂರ್ನಿಯ ಆರಂಭದಲ್ಲಿ ವಿಫಲವಾಗಿದ್ದ ಆರ್‌ಸಿಬಿ ಆಟಗಾರರು ಈಗ ಮೈಕೊಡವಿ ಎದ್ದು ನಿಂತಿದ್ದಾರೆ. ಅದರಲ್ಲೂ ವಿರಾಟ್‌ ಕೊಹ್ಲಿ ಅಭೂತಪೂರ್ವ ಲಯ ಮುಂದುವರಿಸುತ್ತಿದ್ದು, ವಿಲ್‌ ಜ್ಯಾಕ್ಸ್‌, ಡು ಪ್ಲೆಸಿ ಫಾರ್ಮ್‌ಗೆ ಮರಳಿದ್ದಾರೆ. ರಜತ್‌ ಪಾಟೀದಾರ್‌, ಗ್ರೀನ್‌, ದಿನೇಶ್‌ ಕಾರ್ತಿಕ್‌ ಕೂಡಾ ಮಿಂಚುತ್ತಿರುವುದು ತಂಡದ ಪ್ಲಸ್‌ ಪಾಯಿಂಟ್‌. ಮತ್ತೊಂದೆಡೆ ಬೌಲರ್‌ಗಳೂ ಸುಧಾರಿತ ಪ್ರದರ್ಶನ ನೀಡುತ್ತಿದ್ದಾರೆ. ಸಿರಾಜ್‌, ದಯಾಳ್‌, ವೈಶಾಖ್‌, ಕರ್ಣ್‌ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. 

ಸೇಡಿಗೆ ಕಾತರ: ಪಂಜಾಬ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದ್ದ ಆರ್‌ಸಿಬಿ ವಿರುದ್ಧ. ಹೀಗಾಗಿ ತಂಡಕ್ಕಿದು ನಿರ್ಣಾಯಕ ಪಂದ್ಯದ ಜೊತೆಗೆ ಸೇಡಿನ ಕದನವೂ ಹೌದು. ಆದರೆ ಅಸ್ಥಿರ ಆಟ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ತನ್ನ ಬತ್ತಳಿಕೆಯಲ್ಲಿರುವ ಅಸ್ತ್ರಗಳನೆಲ್ಲಾ ಉಪಯೋಗಿಸಿ, ಸುಧಾರಿತ ಪ್ರದರ್ಶನ ನೀಡಿದರಷ್ಟೇ ತನ್ನ 2ನೇ ತವರು ಧರ್ಮಶಾಲಾದಲ್ಲಿ ಗೆಲುವು ದಕ್ಕಲಿದೆ. 

ಒಟ್ಟು ಮುಖಾಮುಖಿ: 32 

ಆರ್‌ಸಿಬಿ: 17ಪಂಜಾಬ್‌: 15

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ, ಡು ಪ್ಲೆಸಿ(ನಾಯಕ), ಜ್ಯಾಕ್ಸ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ದಿನೇಶ್‌, ಸ್ವಪ್ನಿಲ್‌, ಕರ್ಣ್‌, ಸಿರಾಜ್‌, ದಯಾಳ್‌, ವೈಶಾಖ್‌.ಪಂಜಾಬ್‌: ಬೇರ್‌ಸ್ಟೋವ್‌, ರೋಸೌ, ಶಶಾಂಕ್, ಕರ್ರನ್‌, ಜಿತೇಶ್‌, ಅಶುತೋಶ್‌, ಹರ್‌ಪ್ರೀತ್‌, ಹರ್ಷಲ್‌, ಚಹರ್‌, ರಬಾಡ, ಅರ್ಶ್‌ದೀಪ್‌.

ಪಂದ್ಯ: ಸಂಜೆ 7.30ಕ್ಕೆ

ಪಿಚ್‌ ರಿಪೋರ್ಟ್: ಧರ್ಮಶಾಲಾ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎಂದು ಕರೆಸಿಕೊಳ್ಳುತ್ತಿದ್ದರೂ ಬೌಲರ್‌ಗಳೇ ಹೆಚ್ಚಿನ ನೆರವು ಪಡೆದ ಉದಾಹರಣೆ ಇದೆ. ಹೆಚ್ಚಿನ ಬೌನ್ಸ್ ಕೂಡಾ ಇರಲಿದೆ. ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಹೆಚ್ಚಾಗಿ ಗೆದ್ದ ಇತಿಹಾಸವಿದೆ. ಹೀಗಾಗಿ ಟಾಸ್‌ ನಿರ್ಣಾಯಕ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!