ರಿಷಭ್‌ ಸೆಂಚುರಿ : ಪಲ್ಟಿಯಾಗಿ ಉಲ್ಟಾ ಹೊಡೆದ ಇಂಗ್ಲೆಂಡ್‌!

Published : Jun 22, 2025, 08:00 AM IST
Rishabh Pant

ಸಾರಾಂಶ

ರಿಷಭ್‌ ಪಂತ್‌ ಸ್ಫೋಟಕ ಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಕಲೆಹಾಕಿದೆ

ಲೀಡ್ಸ್‌: ರಿಷಭ್‌ ಪಂತ್‌ ಸ್ಫೋಟಕ ಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಕಲೆಹಾಕಿದೆ. ಆದರೆ ಬ್ಯಾಟರ್‌ಗಳಿಗೆ ನೆರವಾಗುತ್ತಿರುವ ಲೀಡ್ಸ್‌ ಕ್ರೀಡಾಂಗಣದ ಪಿಚ್‌ನಲ್ಲಿ ಇಂಗ್ಲೆಂಡ್‌ ಕೂಡಾ ದಿಟ್ಟ ಹೋರಾಟ ಪ್ರದರ್ಶಿಸುತ್ತಿದೆ.

ಮೊದಲ ದಿನ ಸ್ಫೋಟಕ ಆಟವಾಡಿದ್ದ ಭಾರತ 3 ವಿಕೆಟ್‌ ನಷ್ಟದಲ್ಲಿ 359 ರನ್‌ ಕಲೆಹಾಕಿತ್ತು. 2ನೇ ದಿನದ ಮೊದಲ ಅವಧಿಯ ಆರಂಭದಲ್ಲಿ ಇಂಗ್ಲೆಂಡ್‌ನ ಬೆಂಡೆತ್ತಿದ ರಿಷಭ್‌ ಪಂತ್‌-ಶುಭ್‌ಮನ್‌ ಗಿಲ್‌ ಮತ್ತಷ್ಟು ರನ್ ಕಲೆಹಾಕಿತು. ಆದರೆ ಕೊನೆಯಲ್ಲಿ ಮುಗ್ಗರಿಸಿದ ತಂಡ 471 ರನ್‌ಗೆ ಸರ್ವಪತನ ಕಂಡಿತು.

ದಿನದಾಟದ ಆರಂಭಿಕ 13 ಓವರ್‌ಗಳಲ್ಲಿ ರಿಷಭ್‌-ಗಿಲ್‌ ಜೋಡಿ 53 ರನ್‌ ಸೇರಿಸಿತು. ಈ ಜೋಡಿ 4ನೇ ವಿಕೆಟ್‌ಗೆ 209 ರನ್‌ ಜೊತೆಯಾಟವಾಡಿತು. ಆದರೆ ತಂಡದ ಸ್ಕೋರ್‌ 430 ರನ್‌ ಆಗಿದ್ದಾಗ, 147 ರನ್‌ ಗಳಿಸಿದ್ದ ನಾಯಕ ಗಿಲ್‌ ಔಟಾದರು. ಇದು ತಂಡದ ಪತನಕ್ಕೆ ನಾಂದಿ ಹಾಡಿತು.

ದಿಢೀರ್‌ ಕುಸಿತ: ಗಿಲ್‌ ಔಟಾದ ಬಳಿಕ ತಂಡ ದಿಢೀರ್‌ ಕುಸಿತಕ್ಕೊಳಗಾಯಿತು. ಮುಂದಿನ 40 ರನ್‌ ಗಳಿಸುವಷ್ಟರಲ್ಲಿ ತಂಡ ಎಲ್ಲಾ 10 ವಿಕೆಟ್‌ಗಳನ್ನೂ ಕಳೆದುಕೊಂಡು ಇನ್ನಿಂಗ್ಸ್‌ ಕೊನೆಗೊಳಿಸಿತು. 8 ವರ್ಷಗಳ ಬಳಿಕ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ ಕರುಣ್‌ ನಾಯರ್‌ 4 ಎಸೆತಗಳನ್ನು ಎದುರಿಸಿದರೂ ರನ್‌ ಖಾತೆ ತೆರೆಯಲಿಲ್ಲ. ಇವರ ಬೆನ್ನಲ್ಲೇ ರಿಷಭ್‌ ಪಂತ್‌ ಕೂಡಾ ನಿರ್ಗಮಿಸಿದರು. 178 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್‌ ಸೇರಿದಂತೆ 134 ರನ್‌ ಚಚ್ಚಿದ ರಿಷಭ್‌, ಜೋಶ್ ಟಂಗ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ರವೀಂದ್ರ ಜಡೇಜಾ 11 ರನ್‌ ಗಳಿಸಿದರೆ, ಶಾರ್ದೂಲ್‌ ಠಾಕೂರ್ ಗಳಿಕೆ ಕೇವಲ 1 ರನ್‌. ಜೋಶ್‌ ಟಂಗ್‌ ಹಾಗೂ ಬೆನ್‌ ಸ್ಟೋಕ್ಸ್‌ ತಲಾ 2 ವಿಕೆಟ್‌ ಪಡೆದರು.

ಇಂಗ್ಲೆಂಡ್ ಮಿಂಚಿನ ಆಟ: ಭಾರತೀಯ ಬ್ಯಾಟರ್‌ಗಳಂತೆಯೇ ಇಂಗ್ಲೆಂಡ್ ಆಟಗಾರರು ಕೂಡಾ ಪಿಚ್‌ನ ಲಾಭವೆತ್ತುವ ನಿರೀಕ್ಷೆಯಲ್ಲಿದ್ದರೂ, ಮೊದಲ ಓವರ್‌ನಲ್ಲೇ ತಂಡಕ್ಕೆ ಆಘಾತ ಕಾದಿತ್ತು. ಜಸ್‌ಪ್ರೀತ್‌ ಬೂಮ್ರಾ ಎಸೆದ ಮೊದಲ ಓವರ್‌ನಲ್ಲೇ ಜ್ಯಾಕ್‌ ಕ್ರಾವ್ಲಿ, ಸ್ಲಿಪ್‌ನಲ್ಲಿದ್ದ ಕರುಣ್‌ ನಾಯರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಮುಂದಿನ ಕೆಲ ಓವರ್‌ಗಳಲ್ಲಿ ಭಾರತ ಮತ್ತಷ್ಟು ವಿಕೆಟ್‌ ಪಡೆಯುವ ಅವಕಾಶ ಪಡೆಯಿತಾದರೂ, ಅದೃಷ್ಟ ಕೈಕೊಟ್ಟಿರು. ಬೆನ್‌ ಡಕೆಟ್‌ರ 2 ಕ್ಯಾಚ್‌ಗಳನ್ನು ಭಾರತೀಯ ಫೀಲ್ಡರ್ಸ್‌ ಕೈಚೆಲ್ಲಿದರು. ಇದರ ಲಾಭ ಪಡೆದ ಡಕೆಟ್‌ 2ನೇ ವಿಕೆಟ್‌ಗೆ ಓಲಿ ಪೋಪ್‌ ಜೊತೆಗೂಡಿ 122 ರನ್‌ ಸೇರಿಸಿದರು. 2ನೇ ಅವಧಿಯ ಕೊನೆಯಲ್ಲಿ ಉತ್ತಮ ಆಟವಾಡಿದರೂ, ಕೊನೆ ಅವಧಿಯ ಆರಂಭದಲ್ಲೇ ಡಕೆಟ್‌ರನ್ನು ಬೂಮ್ರಾ ಬೌಲ್ಡ್‌ ಮಾಡಿದರು. ಅವರು 62 ರನ್‌ ಗಳಿಸಿ ಔಟಾದರು. ತಂಡ 30 ಓವರ್‌ಗಳಲ್ಲೇ 2 ವಿಕೆಟ್‌ ಕಳೆದುಕೊಂಡು 125ರ ಗಡಿ ದಾಟಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌
ಮಾ.5ರಂದು ಸಚಿನ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮದುವೆ