14 ತಿಂಗಳ ಬಳಿಕ ವೇಗಿ ಶಮಿ ತಂಡಕ್ಕೆ : ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ

KannadaprabhaNewsNetwork |  
Published : Jan 12, 2025, 01:15 AM ISTUpdated : Jan 12, 2025, 04:15 AM IST
ಮೊಹಮದ್‌ ಶಮಿ | Kannada Prabha

ಸಾರಾಂಶ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗೆ ಭಾರತ ತಂಡ ಪ್ರಕಟ. ನಿತೀಶ್‌, ಧ್ರುವ್‌ ಜುರೆಲ್‌ಗೆ ಸ್ಥಾನ. ಶುಭ್‌ಮನ್‌ ಗಿಲ್ ಹೊರಕ್ಕೆ: ರಜತ್‌ ಪಾಟೀದಾರ್‌ಗೆ ಸ್ಥಾನವಿಲ್ಲ. ಜಿತೇಶ್‌ ಶರ್ಮಾ ಬದಲು ಧ್ರುವ್‌ ಜುರೆಲ್‌ಗೆ ಸ್ಥಾನ.

ಮುಂಬೈ: 2023ರ ಏಕದಿನ ವಿಶ್ವಕಪ್‌ ಫೈನಲ್‌ ಬಳಿಕ ಗಾಯದ ಕಾರಣದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದ ತಾರಾ ವೇಗಿ ಮೊಹಮದ್ ಶಮಿ 14 ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. 

ಶನಿವಾರ ಪ್ರಕಟಗೊಂಡ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಶಮಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಜ.22ರಿಂದ ಕೋಲ್ಕತಾದಲ್ಲಿ ಸರಣಿ ಆರಂಭಗೊಳ್ಳಲಿದೆ. ಇದಕ್ಕಾಗಿ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿತು. ಸೂರ್ಯಕುಮಾರ್‌ ಯಾದವ್‌ ನಾಯಕತ್ವ ವಹಿಸಲಿದ್ದಾರೆ. ಶಮಿ 2022ರ ನವೆಂಬರ್‌ನಲ್ಲಿ ಕೊನೆ ಬಾರಿ ಭಾರತ ತಂಡದ ಪರ ಟಿ20 ಆಡಿದ್ದರು. 

ಅಚ್ಚರಿ ಎಂಬಂತೆ ಅವರನ್ನು ಮತ್ತೆ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರು ಇಂಗ್ಲೆಂಡ್‌ ಏಕದಿನ, ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.ಟಿ20 ಸರಣಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌, ವಿಕೆಟ್‌ ಕೀಪರ್‌ ರಿಷಭ್ ಪಂತ್‌, ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌ ತಂಡಕ್ಕೆ ಆಯ್ಕೆಯಾಗಿಲ್ಲ. ಸಂಜು ಸ್ಯಾಮ್ಸನ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ತಂಡದಲ್ಲಿದ್ದು, ಧ್ರುವ್‌ ಜುರೆಲ್‌ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಮಿಂಚಿದ್ದ ನಿತೀಶ್‌ ಕುಮಾರ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಹರ್ಷಿತ್‌ ರಾಣಾ, ವಾಷಿಂಗ್ಟನ್‌ ಸುಂದರ್‌, ಹಾರ್ದಿಕ್‌ ಪಾಂಡ್ಯ, ರವಿ ಬಿಷ್ಣೋಯ್‌ ಕೂಡಾ ತಂಡದಲ್ಲಿದ್ದಾರೆ.ತಂಡ: ಸೂರ್ಯಕುಮಾರ್‌ ಯಾದವ್‌(ನಾಯಕ), ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ, ರಿಂಕು ಸಿಂಗ್‌, ನಿತೀಶ್‌ ಕುಮಾರ್‌ ರೆಡ್ಡಿ, ಅಕ್ಷರ್‌ ಪಟೇಲ್‌, ಹರ್ಷಿತ್‌ ರಾಣಾ, ಅರ್ಶ್‌ದೀಪ್‌ ಸಿಂಗ್‌, ಮೊಹಮದ್ ಶಮಿ, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ವಾಷಿಂಗ್ಟನ್‌ ಸುಂದರ್‌, ಧ್ರುವ್‌ ಜುರೆಲ್‌.

ಅಕ್ಷರ್‌ ಪಟೇಲ್‌ ಉಪನಾಯಕ

ಕಳೆದ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಕ್ಷರ್‌ ಪಟೇಲ್‌ರನ್ನು ಬಿಸಿಸಿಐ ಇಂಗ್ಲೆಂಡ್‌ ಸರಣಿಗೆ ಉಪನಾಯಕನನ್ನಾಗಿ ನೇಮಿಸಿದೆ. ಈ ಮೊದಲು ಹಲವು ಸರಣಿಗಳಲ್ಲಿ ಹಾರ್ದಿಕ್‌ ಪಾಂಡ್ಯ ಉಪನಾಯಕರಾಗಿರುತ್ತಿದ್ದರು. ಕಳೆದ ವರ್ಷ ಶ್ರೀಲಂಕಾ ಸರಣಿಗೆ ಹಾರ್ದಿಕ್‌ ಬದಲು ಶುಭ್‌ಮನ್‌ ಗಿಲ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಬಳಿಕ ದ.ಆಫ್ರಿಕಾ ಟಿ20 ಸರಣಿಗೆ ಉಪನಾಯಕನ ಸ್ಥಾನ ಖಾಲಿ ಬಿಡಲಾಗಿತ್ತು. ಈ ಬಾರಿ ಸರಣಿಯಲ್ಲಿ ಗಿಲ್ ಬದಲು ಅಕ್ಷರ್‌ಗೆ ಹೊಣೆ ನೀಡಲಾಗಿದೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌