ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗರಹಳ್ಳಿಯ ಬೈತೂರಪ್ಪ ಪೊವ್ಚದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ನಡೆಸಲಾದ ಶಿವರಾತ್ರಿ ಹಬ್ಬದ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಎಲ್ಲ ಧರ್ಮಿಯರು ಭಾಗವಹಿಸಿ ಸಾಮರಸ್ಯ ಮೆರೆದು ಸಹೋದರತೆಯನ್ನು ಸಾರಿದರು.
ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಸಂಜೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೂ ಸುದೀರ್ಘವಾದ ಭಜನಾ ಕಾರ್ಯಕ್ರಮಗಳು ನಡೆದವು. ನಂತರ ಬೈತೂರಪ್ಪ, ಪೊವ್ಚದಿ ದೇವರಿಗೆ ವಿಶೇಷ ಆರಾಧನೆ ಪೂಜೆ, ಅಲಂಕಾರ ಪೂಜೆ, ನೈವೇದ್ಯ ಪೂಜೆಗಳು ನಡೆದವು. ಇದಾದ ನಂತರ ದೇವರಿಗೆ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ನಂತರ ನಡೆದ ಸ್ಥಳೀಯ ಮಕ್ಕಳ, ಭಜನಾ ಮಂಡಳಿಯ ಪುರುಷರ, ಮಹಿಳೆಯರ ನೃತ್ಯರೂಪಕ, ನೆರೆದಿದ್ದವರ ಮನಸೂರೆಗೊಂಡಿತು. ಗೀತ ಗಾಯನಗಳು ಸಾರ್ವಜನಿಕರನ್ನು ಮನಸೂರೆಗೊಳಿಸಿತು.
ಸಮಿತಿಯ ವತಿಯಿಂದ ನಾಟಕದ ನಿರ್ದೇಶನವನ್ನು ಮಾಡಿದ ವಿಶಾಲ್ ಸುವರ್ಣ ಮತ್ತು ಅದಕ್ಕೆ ಹಿನ್ನಲೆ ಸ್ವರ ಸಂಯೋಜನೆ ಮಾಡಿದ ತನುಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಹಾದೇವ ಈಶ್ವರ ದೇವರಿಗೆ ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾಧ್ಯ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ನಡೆದ ನಂತರ ವಿವಿಧ ಹೂವುಗಳಿಂದ ಅಲಂಕಾರ ಪೂಜೆ ನಡೆಯಿತು. ರಾತ್ರಿ ಬಿಲ್ವರ್ಚನೆ, ಕೊನೆಯಲ್ಲಿ ದೇವಾಲಯದಲ್ಲಿ ಭಕ್ತರ ಹರಕೆಯ ಭಾಗವಾಗಿ ದೀಪರಾಧನೆ ನಡೆಯಿತು.
ತಡರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಮಹಾಶಿವರಾತ್ರಿಯ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಮನಿಷ್ ಪೂಜಾರಿ ತಂಡದವರಿಂದ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದ್ದವು.