ಗಯಾನ: ಟಿ20 ಕ್ರಿಕೆಟ್‌ನಲ್ಲಿ ತಾನೆಷ್ಟು ಅಪಾಯಕಾರಿ ಎಂಬುದನ್ನು ಅಫ್ಘಾನಿಸ್ತಾನ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಶನಿವಾರ 2021ರ ಟಿ20 ವಿಶ್ವಕಪ್ ರನ್ನರ್-ಅಪ್ ನ್ಯೂಜಿಲೆಂಡ್ ವಿರುದ್ಧ ಆಫ್ಘನ್ 84 ರನ್ ಬೃಹತ್ ಗೆಲುವು ಸಾಧಿಸಿದ್ದು, ಟೂರ್ನಿಯಲ್ಲಿ ಸತತ 2ನೇ ಜಯದೊಂದಿಗೆ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ಆಫ್ಘನ್ 6 ವಿಕೆಟ್‌ಗೆ 159 ರನ್ ಕಲೆಹಾಕಿತು. ಮೊದಲ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ರಹ್ಮಾನುಲ್ಲಾ ಗುರ್ಬಾಜ್ 14.3 ಓವರಲ್ಲಿ 103 ರನ್ ಜೊತೆಯಾಟವಾಡಿದರು.ಜದ್ರಾನ್ 41ಕ್ಕೆ ಔಟಾದರೂ, ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಗುರ್ಬಾಜ್ 56 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 80 ರನ್ ಚಚ್ಚಿದರು.
ಜದ್ರಾನ್ ಔಟಾದ ಬಳಿಕ ಸತತ ವಿಕೆಟ್ ಕಳೆದುಕೊಂಡರೂ ತಂಡ 160ರ ಸನಿಹ ತಲುಪಿತು. ಕೊನೆ ಓವರಲ್ಲಿ 3 ವಿಕೆಟ್ ಉರುಳಿತು.ಚೇಸಿಂಗ್ ಕಷ್ಟವಿದ್ದ ಪಿಚ್‌ನಲ್ಲಿ ಕಿವೀಸ್‌ನ ವಿಕೆಟ್‌ಗಳು ತರಗೆಲೆಯಂತೆ ಉದುರಿದವು. ಮೊದಲ ಎಸೆತದಲ್ಲೇ ಫಿನ್ ಆ್ಯಲೆನ್ ಔಟಾದ ಬಳಿಕ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಗ್ಲೆನ್ ಫಿಲಿಪ್ಸ್(18), ಮ್ಯಾಟ್ ಹೆನ್ರಿ(12) ಹೊರತುಪಡಿಸಿ ಬೇರೆಯಾರೂ ಎರಡಂಕಿ ಮೊತ್ತ ದಾಟಲಿಲ್ಲ.
ತಂಡ 15.2 ಓವರಲ್ಲಿ 75ಕ್ಕೆ ಗಂಟುಮೂಟೆ ಕಟ್ಟಿತು. ರಶೀದ್ ಖಾನ್ 4 ಓವರಲ್ಲಿ 17 ರನ್‌ಗೆ 4, ಫಜಲ್‌ಹಕ್ ಫಾರೂಖಿ 3.2 ಓವರಲ್ಲಿ 17 ರನ್‌ಗೆ 4 ವಿಕೆಟ್ ಕಬಳಿಸಿದರು.ಸ್ಕೋರ್: ಅಫ್ಘಾನಿಸ್ತಾನ 20 ಓವರಲ್ಲಿ 159/6 (ಗುರ್ಬಾಜ್ 80, ಜದ್ರಾನ್ 44, ಬೌಲ್ಟ್ 2-22), ಕಿವೀಸ್ 15.2 ಓವರಲ್ಲಿ 75/10 (ಫಿಲಿಪ್ಸ್ 18, ರಶೀದ್ 4-17, ಫಾರೂಖಿ 4-17) ಪಂದ್ಯಶ್ರೇಷ್ಠ: ಗುರ್ಬಾಜ್.
01ನೇ ಬೌಲರ್: ಟಿ20 ವಿಶ್ವಕಪ್‌ನಲ್ಲಿ ಸತತ 2 ಪಂದ್ಯಗಳಲ್ಲಿ ತಲಾ 4+ ವಿಕೆಟ್ ಕಿತ್ತ ಮೊದಲ ಬೌಲರ್ ಫಾರೂಖಿ.
03ನೇ ಬಾರಿ: ಟಿ20 ವಿಶ್ವಕಪ್ ಪಂದ್ಯದಲ್ಲಿ 1 ತಂಡದ ಇಬ್ಬರು ಬೌಲರ್‌ಗಳು ತಲಾ 4+ ವಿಕೆಟ್ ಕಿತ್ತಿದ್ದು ಇದು 3ನೇ ಬಾರಿ.