ಕ್ರೀಡಾ ಇಲಾಖೆ ಯೂ-ಟರ್ನ್‌:ಮನುಗೆ ಖೇಲ್‌ ರತ್ನ ಪ್ರಶಸ್ತಿ?

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಮನು ಭಾಕರ್‌ಗೆ ಸಿಗುತ್ತಾ ಖೇಲ್‌ ರತ್ನ? ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಹರ್ವಿಂದರ್‌ ಸಿಂಗ್‌ರಿಂದಲೂ ಖೇಲ್‌ ರತ್ನಕ್ಕೆ ಬೇಡಿಕೆ. ಒತ್ತಡದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿದ್ದ ಶೂಟರ್‌ ಮನು ಭಾಕರ್‌ರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಧ್ಯಾನ್‌ಚಂದ್‌ ಖೇಲ್‌ ರತ್ನಕ್ಕೆ ಪರಿಗಣಿಸಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅರ್ಜಿ ಸಲ್ಲಿಕೆಯಲ್ಲಿ ಎಡವಟ್ಟು ಆದ ಕಾರಣ, ಮನು ಹೆಸರನ್ನು ಪ್ರಶಸ್ತಿ ಆಯ್ಕೆ ಸಮಿತಿ ಪರಿಗಣಿಸಿರಲಿಲ್ಲ. ಆದರೆ ಭಾರೀ ಟೀಕೆ ವ್ಯಕ್ತವಾದ ಕಾರಣ, ಕ್ರೀಡಾ ಇಲಾಖೆ ಯೂ-ಟರ್ನ್‌ ಮಾಡಿದಂತೆ ಕಂಡು ಬರುತ್ತಿದೆ.

ಶೀಘ್ರದಲ್ಲೇ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಲಾಖೆ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಸದ್ಯ, ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ಹೈಜಂಪ್‌ ಪಟು ಪ್ರವೀಣ್‌ ಕುಮಾರ್‌ಗೆ ಖೇಲ್‌ ರತ್ನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 30 ಮಂದಿ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದರಲ್ಲಿ 17 ಮಂದಿ ಪ್ಯಾರಾ ಕ್ರೀಡಾಪಟುಗಳು ಇದ್ದಾರೆ ಎನ್ನಲಾಗಿದೆ. ಮನು ತಂದೆ, ಕೋಚ್‌ ಕಿಡಿ!

ಖೇಲ್‌ ರತ್ನಕ್ಕೆ ಮನು ಹೆಸರು ಪರಿಗಣಿಸದೆ ಇದ್ದಿದ್ದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ, ರಾಷ್ಟ್ರೀಯ ರೈಫಲ್‌ ಸಂಸ್ಥೆ ವಿರುದ್ಧ ಮನು ತಂದೆ, ಕೋಚ್‌ ಜಸ್‌ಪಾಲ್‌ ರಾಣಾ ಕೆಂಡಮಂಡಲಗೊಂಡಿದ್ದಾರೆ. ‘ಮನು ತಾನೇಕೆ ಶೂಟಿಂಗ್ ಆಯ್ಕೆ ಮಾಡಿಕೊಂಡೆ, ಒಲಿಂಪಿಕ್ಸ್‌ನಲ್ಲಿ ಏತಕ್ಕಾಗಿ ಪಾಲ್ಗೊಂಡೆ ಎಂದು ನೊಂದಿದ್ದಾಳೆ. ನಾನು ಆಕೆಯನ್ನು ಕ್ರಿಕೆಟರ್‌ ಮಾಡಿದ್ದರೆ, ಎಲ್ಲಾ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿದ್ದವು ಅನಿಸುತ್ತದೆ’ ಎಂದು ಮನು ತಂದೆ ರಾಮ್‌ ಕಿಶನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಮನು ಅವರ ಕೋಚ್‌ ರಾಣಾ, ‘ ಮನು ಯಾರು, ಅವರ ಸಾಧನೆ ಏನು ಎನ್ನುವುದು ಸಚಿವಾಲಯಕ್ಕೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮನು ಸಹ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಾಕಿ, ‘ಅರ್ಜಿ ಸಲ್ಲಿಕೆ ವೇಳೆ ನನ್ನಿಂದಲೇ ತಪ್ಪಾಗಿರಬಹುದು. ಪ್ರಶಸ್ತಿಗಳು ನನ್ನನ್ನು ಹುರಿದುಂಬಿಸಲಿದೆ ನಿಜ. ಆದರೆ, ಅವುಗಳ ಹಿಂದೆ ನಾನು ಯಾವತ್ತೂ ಹೋಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.ಟೋಕಿಯೋದಲ್ಲಿ ಚಿನ್ನ ಗೆದ್ದವರಿಗೆ ಖೇಲ್‌ ರತ್ನ, ಈಗ ಏಕಿಲ್ಲ?: ಸಿಂಗ್ನವದೆಹಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ ಆರ್ಚರಿಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹರ್ವಿಂದರ್‌ ಸಿಂಗ್‌ ಪ್ರಶಸ್ತಿ ವಿತರಣೆಯಲ್ಲಿ ಕೇಂದ್ರ ಕ್ರೀಡಾ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಟೋಕಿಯೋ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ಖೇಲ್‌ ರತ್ನ ನೀಡಲಾಯಿತು. ಆದರೆ ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದವರಿಗೆ ಏಕೆ ಕೊಡುತ್ತಿಲ್ಲ. ಸ್ಪರ್ಧೆ ಬದಲಾಗಿಲ್ಲ, ಘನತೆ ಬದಲಾಗಿಲ್ಲ, ಪದಕ ಬದಲಾಗಿಲ್ಲ, ಹೀಗಿರುವಾಗ ಪ್ರಶಸ್ತಿ ಏಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ. 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್‌ ಚೋಪ್ರಾ, ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವನಿ ಲೇಖರಾ, ಸುಮಿತ್‌ ಅಂತಿಲ್‌ ಹಾಗೂ ಪ್ರಮೋದ್‌ ಭಗತ್‌ಗೆ ಖೇಲ್‌ ರತ್ನ ನೀಡಿ ಗೌರವಿಸಲಾಗಿತ್ತು. ಹರ್ವಿಂದರ್‌ ಟೋಕಿಯೋ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

Share this article