ಪಿಂಕ್‌ ಬಾಲ್‌ನಲ್ಲಿ ಮತ್ತೆ ಮಂಕಾದ ಭಾರತ: ಆಸ್ಟ್ರೇಲಿಯಾ ವಿರುದ್ಧ ಕೇವಲ 180 ರನ್‌ಗೆ ಆಲೌಟ್‌

KannadaprabhaNewsNetwork | Updated : Dec 07 2024, 04:17 AM IST

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್‌. ಮತ್ತೊಮ್ಮೆ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ. ನಿತೀಶ್‌ ರೆಡ್ಡಿ 42, ರಾಹುಲ್‌ 37. ಸ್ಟಾರ್ಕ್‌ಗೆ 6 ವಿಕೆಟ್‌. ಆಸೀಸ್‌ ಮೊದಲ ದಿನದಂತ್ಯಕ್ಕೆ ಆಸೀಸ್‌ 86/1. ಇನ್ನು 94 ರನ್‌ ಹಿನ್ನಡೆ

ಅಡಿಲೇಡ್‌: ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಒಮ್ಮೆಯೂ ಸೋಲು ಕಾಣದ ಆಸ್ಟ್ರೇಲಿಯಾ ಈ ಬಾರಿಯೂ ತನ್ನ ಸಾಮರ್ಥ್ಯ ಪ್ರದರ್ಶಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಮತ್ತೊಮ್ಮೆ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾದ ಟೀಂ ಇಂಡಿಯಾ, ಶುಕ್ರವಾರ ಆರಂಭಗೊಂಡ 2ನೇ ಟೆಸ್ಟ್‌(ಹಗಲು-ರಾತ್ರಿ)ನಲ್ಲಿ ಹಿನ್ನಡೆ ಅನುಭವಿಸಿದೆ. 

ಬೌಲಿಂಗ್‌ ಬಳಿಕ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ ಆತಿಥೇಯ ಆಸೀಸ್‌ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.ಪರ್ತ್‌ ಟೆಸ್ಟ್‌ನಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ವೈಫಲ್ಯ ಅನುಭವಿಸಿತ್ತು. ಆ ತಪ್ಪು ಅಡಿಲೇಡ್‌ನಲ್ಲೂ ಮರುಕಳಿಸಿತು. ಆಸ್ಟ್ರೇಲಿಯಾ ವೇಗಿಗಳ ಬೌನ್ಸರ್‌ ಮುಂದೆ ಮಂಕಾದ ರೋಹಿತ್‌ ಶರ್ಮಾ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗೆ ಗಂಟುಮೂಟೆ ಕಟ್ಟಿತು. ಬಳಿಕ ತಾಳ್ಮೆಯುತ ಬ್ಯಾಟಿಂಗ್‌ ಪ್ರದರ್ಶಿಸಿದ ಆಸೀಸ್ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 86 ರನ್‌ ಗಳಿಸಿದ್ದು, ಇನ್ನು 94 ರನ್‌ ಹಿನ್ನಡೆಯಲ್ಲಿದೆ.

ಎಕ್ಸ್‌ಟ್ರಾ ಬೌನ್ಸ್‌ಗೆ ತತ್ತರ: ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಮೊದಲ ಎಸೆತದಲ್ಲೇ ಆಘಾತ ಎದುರಾಗಿತ್ತು. ಕಳೆದ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌ಕೆ ವೇಗ ಕಡಿಮೆ ಎಂದು ಅಣಕಿಸಿದ್ದ ಯಶಸ್ವಿ ಜೈಸ್ವಾಲ್‌, ಈ ಬಾರಿ ಸ್ಟಾರ್ಕ್‌ರ ಮೊದಲ ಎಸೆತದಲ್ಲೇ ಔಟಾದರು. ಬಳಿಕ ಇನ್ನಿಂಗ್ಸ್‌ ಕಟ್ಟಿದ್ದು ಕೆ.ಎಲ್‌.ರಾಹುಲ್‌ ಹಾಗೂ ಶುಭ್‌ಮನ್‌ ಗಿಲ್‌. ಈ ಜೋಡಿ 2ನೇ ವಿಕೆಟ್‌ಗೆ 69 ರನ್‌ ಸೇರಿಸಿತು. ಬೋಲೆಂಡ್‌ ಓವರ್‌ನಲ್ಲಿ ಎರಡೆರಡು ಬಾರಿ ಜೀವದಾನ ಪಡೆದಿದ್ದ ರಾಹುಲ್‌, ಮತ್ತೊಮ್ಮೆ ಅತ್ಯಾಕರ್ಷಕ ಹೊಡೆತಗಳ ಮೂಲಕ ಭಾರತಕ್ಕೆ ನೆರವಾದರು. ಆದರೆ 37 ರನ್‌ ಗಳಿಸಿದ್ದಾಗ ಸ್ಟಾರ್ಕ್‌ರ ಎಕ್ಸ್‌ಟ್ರಾ ಬೌನ್ಸ್ ಎಸೆತದಲ್ಲಿ ಮೆಕ್‌ಸ್ವೀನಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. 

ದಿಢೀರ್‌ ಕುಸಿತ: ರಾಹುಲ್‌ ಬೆನ್ನಲ್ಲೇ ಶುಭ್‌ಮನ್‌ ಗಿಲ್‌(31) ಕೂಡಾ ಔಟಾದರು. ಬಳಿಕ ತಂಡ ದಿಢೀರ್‌ ಕುಸಿತಕ್ಕೊಳಗಾಯಿತು. ವಿರಾಟ್‌ ಕೊಹ್ಲಿ 7, ರಿಷಭ್‌ ಪಂತ್‌ 21, ಆರಂಭಿಕ ಕ್ರಮಾಂಕವನ್ನು ರಾಹುಲ್‌ಗೆ ಬಿಟ್ಟುಕೊಟ್ಟಿದ್ದ ನಾಯಕ ರೋಹಿತ್‌ ಶರ್ಮಾ 3 ರನ್‌ಗೆ ಇನ್ನಿಂಗ್ಸ್ ಕೊನೆಗೊಳಿಸಿದರು. 6 ವಿಕೆಟ್‌ಗೆ 109 ರನ್‌ ಗಳಿಸಿದ್ದ ತಂಡಕ್ಕೆ ಆಸರೆಯಾಗಿದ್ದು ನಿತೀಶ್‌ ರೆಡ್ಡಿ. ಅನುಭವಿ ಅಶ್ವಿನ್(21) ಜೊತೆಗೂಡಿ ಅಬ್ಬರಿಸಲು ಶುರುವಿಟ್ಟ ನಿತೀಶ್‌ 54 ಎಸೆತಗಳಲ್ಲಿ 42 ರನ್‌ ಸೇರಿಸಿ, ಭಾರತವನ್ನು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. 

ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ವೇಗಿಗಳ ಪಾಲಾಯಿತು. ಮಿಚೆಲ್‌ ಸ್ಟಾರ್ಕ್‌ 6, ನಾಯಕ ಕಮಿನ್ಸ್‌ ಹಾಗೂ ಬೋಲಂಡ್‌ ತಲಾ 2 ವಿಕೆಟ್‌ ಕಿತ್ತರು.ತಾಳ್ಮೆಯುತ ಬೌಲಿಂಗ್‌: ಪರ್ತ್‌ ಟೆಸ್ಟ್‌ನಲ್ಲಿ ಭಾರತೀಯ ವೇಗಿಗಳನ್ನು ಎದುರಿಸಲು ಪರದಾಡಿದ್ದ ಆಸ್ಟ್ರೇಲಿಯಾ ಬ್ಯಾಟರ್‌ಗಳು ಈ ಪಂದ್ಯದಲ್ಲಿ ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ತಯಾರಿರಲಿಲ್ಲ. ತಂಡ ತಾಳ್ಮೆಯುತ ಬ್ಯಾಟಿಂಗ್‌ ನಡೆಸಿತು. 

ಉಸ್ಮಾನ್‌ ಖವಾಜ(13)ಗೆ ಬೂಮ್ರಾ ಪೆವಿಲಿಯನ್‌ ಹಾದಿ ತೋರಿದರೂ, ಮುರಿಯದ 2ನೇ ವಿಕೆಟ್‌ಗೆ ಮೆಕ್‌ಸ್ವೀನಿ(ಔಟಾಗದೆ 38) ಹಾಗೂ ಮಾರ್ನಸ್‌ ಲಬುಶೇನ್‌(ಔಟಾಗದೆ 20) 62 ರನ್‌ ಸೇರಿಸಿದ್ದು, ತಂಡಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಿಕೊಡಲು ಹೋರಾಡುತ್ತಿದ್ದಾರೆ. ಶನಿವಾರ ಮೊದಲ ಅವಧಿ ಭಾರತದ ಪಾಲಿಗೆ ನಿರ್ಣಾಯಕವಾಗಿದ್ದು, ಬೇಗನೇ ಆಲೌಟ್‌ ಮಾಡುವ ಗುರಿ ಇಟ್ಟುಕೊಂಡಿದೆ.ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 180/10 (ನಿತೀಶ್‌ 42, ರಾಹುಲ್ 37, ಶುಭ್‌ಮನ್‌ 31, ಸ್ಟಾರ್ಕ್‌ 6-48), ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 86/1 (ಮೊದಲ ದಿನದಂತ್ಯಕ್ಕೆ) (ಮೆಕ್‌ಸ್ವೀನಿ 38*, ಲಬುಶೇನ್‌ 20, ಬೂಮ್ರಾ 1-13)

01ನೇ ಬಾರಿ: ಸ್ಟಾರ್ಕ್‌ ಭಾರತ ವಿರುದ್ಧ ಟೆಸ್ಟ್‌ನಲ್ಲಿ ಮೊದಲ ಬಾರಿ 5 ವಿಕೆಟ್ ಗೊಂಚಲು ಪಡೆದರು.

05ನೇ ಬಾರಿ: ಹಗಲು-ರಾತ್ರಿ ಟೆಸ್ಟ್‌ನಲ್ಲಿ ಸ್ಟಾರ್ಕ್‌ಗೆ 5ನೇ ಬಾರಿ 5+ ವಿಕೆಟ್‌. ಯಾವುದೇ ಬೌಲರ್‌ ಪೈಕಿ ಗರಿಷ್ಠ.

03ನೇ ಸಲ: ರಾಹುಲ್‌ ಈ ಬಾರಿ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲೂ ಸ್ಟಾರ್ಕ್‌ ಎಸೆತದಲ್ಲೇ ಔಟಾಗಿದ್ದಾರೆ.

03ನೇ ಬಾರಿ: ಸ್ಟಾರ್ಕ್‌ ಟೆಸ್ಟ್‌ನ ಮೊದಲ ಎಸೆತದಲ್ಲೇ ವಿಕೆಟ್‌ ಕಿತ್ತಿದ್ದು ಇದು 3ನೇ ಬಾರಿ. ಇದು ಜಂಟಿ ಗರಿಷ್ಠ. ವೆಸ್ಟ್‌ಇಂಡೀಸ್‌ನ ಪೆಡ್ರೊ ಕಾಲಿನ್ಸ್‌ ಕೂಡಾ 3 ಬಾರಿ ಈ ಸಾಧನೆ ಮಾಡಿದ್ದಾರೆ. 

2 ಸಲ ಕೈಕೊಟ್ಟ ಫ್ಲಡ್‌ಲೈಟ್ಸ್‌: ಕ್ರೀಡಾಂಗಣ ಕತ್ತಲು ಕತ್ತಲು!

ಆಸ್ಟ್ರೇಲಿಯಾ ಬ್ಯಾಟಿಂಗ್‌ ವೇಳೆ ಅಡಿಲೇಡ್‌ ಓವಲ್‌ ಮೈದಾನದ ಫ್ಲಡ್‌ ಲೈಟ್ಸ್‌ನಲ್ಲಿ 2 ಬಾರಿ ದೋಷ ಕಾಣಿಸಿಕೊಂಡಿತು. 17.2 ಓವರ್‌ ಆಗಿದ್ದಾಗ ಮೊದಲ ಬಾರಿ ಲೈಟ್ಸ್‌ ಕೈಕೊಟ್ಟಿತು. ಕ್ರೀಡಾಂಗಣ ಪೂರ್ಣ ಕತ್ತಲೆ ಆವರಿಸಿತು. ಕೆಲ ನಿಮಿಷಗಳಲ್ಲೇ ಲೈಟ್ಸ್‌ ಸರಿಯಾಗಿ ಪಂದ್ಯ ಆರಂಭಗೊಂಡರೂ, 2 ಎಸೆತಗಳ ಬಳಿಕ ಮತ್ತೆ ಫ್ಲಡ್‌ ಲೈಟ್ಸ್‌ ಆಫ್‌ ಆಯಿತು. ಬಳಿಕ ಮತ್ತೆ ಪಂದ್ಯ ಪುನಾರಂಭಗೊಂಡಿತು.

ಅಡಿಲೇಡ್‌ನಲ್ಲಿ ಮೊದಲ ದಿನ 50000+ ವೀಕ್ಷಕರು

ಪಂದ್ಯದ ಮೊದಲ ದಿನ ಅಡಿಲೇಡ್‌ ಓವಲ್‌ ಕ್ರೀಡಾಂಗಣಕ್ಕೆ 50 ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರು ಆಗಮಿಸಿ, ನೇರವಾಗಿ ಪಂದ್ಯ ವೀಕ್ಷಿಸಿದರು. ಇದು ಅಡಿಲೇಡ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್‌ನ ದಿನವೊಂದರಲ್ಲಿ ದಾಖಲಾದ ಗರಿಷ್ಠ ಸಂಖ್ಯೆ. ಒಟ್ಟಾರೆ ಅಡಿಲೇಡ್‌ ಕ್ರೀಡಾಂಗಣದಲ್ಲಿದು 4ನೇ ಗರಿಷ್ಠ. ಕ್ರೀಡಾಂಗಣ ಒಟ್ಟು 53000 ಆಸನ ಸಾಮರ್ಥ್ಯ ಹೊಂದಿದೆ.

Share this article