;Resize=(412,232))
ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ ನಡೆಸಲು ಬಿಸಿಸಿಐ ಭಾರತದ ಐದು ನಗರಗಳನ್ನು ಪಟ್ಟಿ ಮಾಡಿದೆ. ಆದರೆ ಇದರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೆಸರಿಲ್ಲ.
ಟೂರ್ನಿ ಮುಂದಿನ ವರ್ಷ ಫೆ.7ಕ್ಕೆ ಆರಂಭಗೊಂಡು, ಮಾ.8ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಮುಂದಿನ ವಾರ ವೇಳಾಪಟ್ಟಿ ಪ್ರಕಟಗೊಳ್ಳಬಹುದು. ಭಾರತದ 5 ನಗರಗಳಾದ ಅಹಮದಾಬಾದ್, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಜೊತೆಗೆ ಕೊಲಂಬೊ ಸೇರಿ ಶ್ರೀಲಂಕಾದ 3 ನಗರಗಳಲ್ಲೂ ಪಂದ್ಯ ಆಯೋಜನೆಗೊಳ್ಳಲಿವೆ. 2023ರ ಏಕದಿನ ವಿಶ್ವಕಪ್ ಫೈನಲ್‌ಗೆ ಆತಿಥ್ಯ ವಹಿಸಿದ್ದ ಅಹಮದಾಬಾದ್ ಕ್ರೀಡಾಂಗಣದಲ್ಲೇ ಟಿ20 ವಿಶ್ವಕಪ್ ಫೈನಲ್ ಕೂಡಾ ನಡೆಯಲಿದೆ.
ಟೂರ್ನಿಯಲ್ಲಿ ಪಾಕಿಸ್ತಾನ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿವೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಕೊಲಂಬೊದಲ್ಲಿ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಪಾಕ್ ತಂಡ ಫೈನಲ್‌ಗೇರಿದರೆ ಆ ಪಂದ್ಯಕ್ಕೆ ಅಹಮದಾಬಾದ್ ಬದಲು ಕೊಲಂಬೊ ಆತಿಥ್ಯ ವಹಿಸಲಿದೆ. ಹಾಲಿ ಚಾಂಪಿಯನ್ ಭಾರತ ಸೇರಿ ಒಟ್ಟು 20 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.