ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!

Published : Dec 18, 2025, 12:11 PM IST
Prashant Veer

ಸಾರಾಂಶ

ಶಿಕ್ಷಕ ತಂದೆಯ ವೇತನ, ಅಜ್ಜನ ಪಿಂಚಣಿ ಹಣದಿಂದಲೇ ತನ್ನ ಕ್ರಿಕೆಟ್‌ ಖರ್ಚನ್ನು ನಿಭಾಯಿಸುತ್ತಿದ್ದ ಉತ್ತರ ಪ್ರದೇಶದ ಯುವ ಕ್ರಿಕೆಟಿಗ ಪ್ರಶಾಂತ್‌ ವೀರ್‌ ಬದುಕು ಕೂಡಾ ಐಪಿಎಲ್‌ನಿಂದಲೇ ಬದಲಾಗಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

 ಮುಂಬೈ: ನೂರಾರು ಕ್ರಿಕೆಟಿಗರ ಬದುಕು ಬದಲಿಸಿರುವ ಐಪಿಎಲ್‌, ಈ ಬಾರಿಯೂ ಕೆಲ ಪ್ರತಿಭಾವಂತ ಯುವ ಕ್ರಿಕೆಟಿಗರ ಪಾಲಿಗೆ ಬೆಳಕಾಗಿದೆ. ಶಿಕ್ಷಕ ತಂದೆಯ ವೇತನ, ಅಜ್ಜನ ಪಿಂಚಣಿ ಹಣದಿಂದಲೇ ತನ್ನ ಕ್ರಿಕೆಟ್‌ ಖರ್ಚನ್ನು ನಿಭಾಯಿಸುತ್ತಿದ್ದ ಉತ್ತರ ಪ್ರದೇಶದ ಯುವ ಕ್ರಿಕೆಟಿಗ ಪ್ರಶಾಂತ್‌ ವೀರ್‌ ಬದುಕು ಕೂಡಾ ಐಪಿಎಲ್‌ನಿಂದಲೇ ಬದಲಾಗಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

ಪ್ರಶಾಂತ್‌ ವೀರ್‌ಗೆ ಸಿಕ್ಕಿದ್ದು ಬರೋಬ್ಬರಿ ₹14.20 ಕೋಟಿ

ಬುಧವಾರ ನಡೆದ ಹರಾಜಿನಲ್ಲಿ ಪ್ರಶಾಂತ್‌ ವೀರ್‌ಗೆ ಸಿಕ್ಕಿದ್ದು ಬರೋಬ್ಬರಿ ₹14.20 ಕೋಟಿ. ಏಕಕಾಲಕ್ಕೆ ಉತ್ತರ ಪ್ರದೇಶ ಹಿರಿಯರ ತಂಡ ಹಾಗೂ ಅಂಡರ್‌-23 ತಂಡದ ಪರ ಆಡುತ್ತಿದ್ದ 20 ವರ್ಷದ ಆಲ್ರೌಂಡರ್‌ ಪ್ರಶಾಂತ್‌ರನ್ನು ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖರೀದಿಸಿದೆ.

ಪ್ರಶಾಂತ್‌ ತಂದೆ ಶಾಲಾ ಶಿಕ್ಷಕರಾಗಿದ್ದು, ತಿಂಗಳಿಗೆ ಕೇವಲ 12 ಸಾವಿರ ವೇತನವಿದೆ. ತನ್ನ ಅಜ್ಜ ನಿಧನವಾಗುವವರೆಗೂ, ಅವರ ಪಿಂಚಣಿ ಹಣದಿಂದಲೇ ಪ್ರಶಾಂತ್‌ ತಮ್ಮ ಕ್ರಿಕೆಟ್‌ ಖರ್ಚನ್ನು ನಿಭಾಯಿಸುತ್ತಿದ್ದರು. ತಮ್ಮ ಆಲ್ರೌಂಡ್‌ ಆಟದ ಮೂಲಕ ರವೀಂದ್ರ ಜಡೇಜಾ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದ ಪ್ರಶಾಂತ್‌ ಪ್ರತಿಭೆಗೆ ಮಿನಿ ಹರಾಜಿನಲ್ಲಿ ಭರ್ಜರಿ ಫಲ ಸಿಕ್ಕಿದೆ.

‘ಇದು ಕನಸಿನಂತೆ ಭಾಸವಾಗುತ್ತಿದೆ. ದೊಡ್ಡ ಮೊತ್ತಕ್ಕೆ ಹರಾಜಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಕುಟುಂಬ ಈವರೆಗೂ ಇಷ್ಟೊಂದು ಹಣ ನೋಡಿಲ್ಲ. ಈ ಹಣದಿಂದ ಏನು ಮಾಡಬೇಕೆಂದು ತೋಚುತ್ತಿಲ್ಲ. ಅದನ್ನು ಇನ್ನು ನನ್ನ ಕುಟುಂಬ ನಿರ್ಧರಿಸುತ್ತದೆ’ ಎಂದು ಪ್ರಶಾಂತ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸರ್ಫರಾಜ್‌, ಪೃಥ್ವಿ ಶಾಗೆ ಐಪಿಎಲ್‌ನಲ್ಲಿ ಮರುಜನ್ಮ

ಈ ಬಾರಿ ಐಪಿಎಲ್‌ ಮೂಲಕ ಕೆಲ ಆಟಗಾರರಿಗೆ ಪುನರ್ಜನ್ಮ ಸಿಕ್ಕಂತಾಗಿದೆ. ಅದರಲ್ಲಿ ಪ್ರಮುಖರು ಸರ್ಫರಾಜ್‌ ಖಾನ್‌ ಹಾಗೂ ಪೃಥ್ವಿ ಶಾ. ಪ್ರತಿಭಾವಂತ ಕ್ರಿಕೆಟಿಗನಾಗಿದ್ದರೂ ಭಾರತ ತಂಡದಿಂದ ಹೊರಗುಳಿದಿರುವ ಮುಂಬೈನ ಸರ್ಫರಾಜ್‌, ಕಳೆದೆರಡು ವರ್ಷಗಳಲ್ಲಿ ಐಪಿಎಲ್‌ನಲ್ಲೂ ಆಡಿಲ್ಲ. ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ತೋರಿರಲಿಲ್ಲ. ಈ ಬಾರಿ ಹರಾಜಿನಲ್ಲಿ ಅವರು ಹೆಸರು ಬಂದಾಗಲೂ ಖರೀದಿಗೆ ಯಾವ ತಂಡವೂ ಮುಂದಾಗಲಿಲ್ಲ. 

ಅನ್‌ಸೋಲ್ಡ್‌ ಪಟ್ಟಿ ಸೇರ್ಪಡೆಗೊಂಡರು. ಇದರೊಂದಿಗೆ ಸರ್ಫರಾಜ್‌ ಐಪಿಎಲ್‌ ಬದುಕು ಮುಕ್ತಾಯವಾಯಿತು ಎಂದೇ ವಿಶ್ಲೇಷಿಸಲಾಗುತ್ತಿತ್ತು. ಆದರೆ 2ನೇ ಬಾರಿ ಹೆಸರು ಬಂದಾಗ ಚೆನ್ನೈ ತಂಡ ಮೂಲಬೆಲೆ ₹75 ಲಕ್ಷಕ್ಕೆ ಸರ್ಫರಾಜ್‌ರನ್ನು ಖರೀದಿಸಿತು. ಮತ್ತೊಂದೆಡೆ ಪೃಥ್ವಿ ಶಾ ಕೂಡಾ ಈ ಬಾರಿ ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದರು. ಕಳೆದ ವರ್ಷ ಐಪಿಎಲ್‌ನಿಂದ ಹೊರಗಿದ್ದ ಪೃಥ್ವಿ, ಈ ಬಾರಿಯೂ ಟೂರ್ನಿಗೆ ಇಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ 2ನೇ ಬಾರಿ ಹರಾಜಿಗೆ ಹೆಸರು ಕೂಗಿದಾಗ ಅವರ ಮೂಲಬೆಲೆ ₹75 ಲಕ್ಷಕ್ಕೆ ಡೆಲ್ಲಿ ತಂಡ ತನ್ನ ತೆಕ್ಕೆಗೆ ಪಡೆದುಕೊಂಡಿತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!
ಐಪಿಎಲ್‌ : ಗ್ರೀನ್‌ಗೆ ₹25.2, ಪತಿರನಗೆ ₹18 ಕೋಟಿ ಜಾಕ್‌ಪಾಟ್‌