;Resize=(412,232))
ಅಬು ಧಾಬಿ: ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಬಾರಿ ಐಪಿಎಲ್ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆಯೇ ಬಂಪರ್ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಅವರನ್ನು ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ ₹25.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಜೊತೆಗೆ ಶ್ರೀಲಂಕಾದ ವೇಗಿ ಮಥೀಶ ಪತಿರನ ಕೂಡಾ ಜಾಕ್‌ಪಾಟ್ ಹೊಡೆದಿದ್ದು, ಬರೋಬ್ಬರಿ ₹18 ಕೋಟಿಗೆ ಕೋಲ್ಕತಾ ಪಾಲಾಗಿದ್ದಾರೆ.
ಬುಧವಾರ ಅಬು ಧಾಬಿಯಲ್ಲಿ 19ನೇ ಆವೃತ್ತಿಯ ಐಪಿಎಲ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಎಲ್ಲಾ ಫ್ರಾಂಚೈಸಿಗಳು ಕಳೆದ ಬಾರಿ ಇದ್ದ ಬಹುತೇಕ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದರಿಂದ ಖಾಲಿ ಇದ್ದ ಕೆಲ ಸ್ಥಾನಗಳನ್ನಷ್ಟೇ ಹರಾಜಿನಲ್ಲಿ ತುಂಬಿಸಿಕೊಂಡಿತು. ಒಟ್ಟು 359 ಆಟಗಾರರು ನೋಂದಾಯಿಸಿದ್ದರೂ, ಮಧ್ಯಾಹ್ನದಿಂದ ರಾತ್ರಿ 9.15ರ ವರೆಗೆ ನಡೆದ ಹರಾಜಿನಲ್ಲಿ 29 ವಿದೇಶಿಗರು ಸೇರಿದಂತೆ 77 ಆಟಗಾರರು 10 ತಂಡಗಳಿಗೆ ಮಾರಾಟಗೊಂಡರು. ತಂಡಗಳು ಒಟ್ಟು ₹215.45 ಕೋಟಿ ಖರ್ಚು ಮಾಡಿದವು.
ಈ ಬಾರಿ ಹರಾಜಿನಲ್ಲಿ ಭಾರತೀಯರಿಗೆ ಅದರಲ್ಲೂ ಅನ್‌ಕ್ಯಾಪ್ಡ್(ಅಂತಾರಾಷ್ಟ್ರೀಯ ಪಂದ್ಯ ಆಡದ) ಆಟಗಾರರಿಗೆ ಭಾರೀ ಬೇಡಿಕೆ ಕಂಡು ಬಂತು. ಹರಾಜಾದ 77 ಆಟಗಾರರ ಪೈಕಿ 40 ಮಂದಿ ಅನ್‌ಕ್ಯಾಪ್ಡ್ ಆಟಗಾರರೇ ಇದ್ದಾರೆ. 20 ವರ್ಷದ ಸ್ಪಿನ್ನರ್ ಪ್ರಶಾಂತ್ ವೀರ್, 19 ವರ್ಷದ ಸ್ಫೋಟಕ ಆಟಗಾರ ಕಾರ್ತಿಕ್ ಶರ್ಮಾ, 29 ವರ್ಷದ ಜಮ್ಮು-ಕಾಶ್ಮೀರ ವೇಗಿ ಆಖಿಬ್ ನಬಿ(ಡೆಲ್ಲಿ ಕ್ಯಾಪಿಟಲ್ಸ್-8.40 ಕೋಟಿ ರು.) ಸೇರಿ ಪ್ರಮುಖರು ಹರಾಜಾದರು. ಅಲ್ಲದೆ, ಭಾರತದ ತಾರಾ ಆಟಗಾರರಾದ ಪೃಥ್ವಿ ಶಾ(₹75 ಲಕ್ಷ) ಡೆಲ್ಲಿ ತಂಡದ ಪಾಲಾದರೆ, ಸರ್ಫರಾಜ್ ಖಾನ್(₹75 ಲಕ್ಷ) ಚೆನ್ನೈ ಸೇರ್ಪಡೆಗೊಂಡರು. ಕಳೆದ ಬಾರಿ ಕೋಲ್ಕತಾ ಪರ ಆಡಿದ್ದ ವೆಂಕಟೇಶ್ ಅಯ್ಯರ್‌ರನ್ನು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ₹7 ಕೋಟಿ ನೀಡಿ ಖರೀದಿಸಿತು.
ಗ್ರೀನ್ 25.20 ಕೋಟಿ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. 2023ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ 24.75 ಕೋಟಿ ರು. ನೀಡಿ ಮಿಚೆಲ್ ಸ್ಟಾರ್ಕ್‌ರನ್ನು ಖರೀದಿಸಿದ್ದು ಈವರೆಗಿನ ದಾಖಲೆ ಎನಿಸಿಕೊಂಡಿತ್ತು.
ಬೆಂಗಳೂರಲ್ಲೇ ಐಪಿಎಲ್ ಉದ್ಘಾಟನಾ
ಪಂದ್ಯ: ವೆಂಕಟೇಶ್ ಪ್ರಸಾದ್ ವಿಶ್ವಾಸ
ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನೆ ಪಂದ್ಯ ನಡೆಸುವಂತೆ ಈಗಾಗಲೇ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದೇನೆ. ಬಿಸಿಸಿಐ ಸಹ ಬೆಂಗಳೂರಿನಲ್ಲಿ ಈ ಬಾರಿಯ ಉದ್ಘಾಟನೆ ಪಂದ್ಯ ನಡೆಸಲು ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷ ಐಪಿಎಲ್ ಟ್ರೋಫಿ ಗೆದ್ದ ಹೋಂ ಗ್ರೌಂಡ್ ನಲ್ಲೇ ಉದ್ಘಾಟನೆ ಪಂದ್ಯ ನಡೆಯುತ್ತಿತ್ತು. ಆರ್ ಸಿಬಿ ಸಂಭ್ರಮಾಚರಣೆಯ ವೇಳೆ ಘಟನೆಯಿಂದ ಸಾಕಷ್ಟು ಗೊಂದಲಗಳಾಗಿತ್ತು. ಹೀಗಾಗಿ, ನಮ್ಮ ತಂಡ ಚುನಾವಣೆ ಗೆದ್ದ ಬಳಿಕ ಈಗಾಗಲೇ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ. ಸಿಎಂ, ಡಿಸಿಎಂ ಈಗಾಗಲೇ ಪಂದ್ಯಾವಳಿ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗೃಹ ಸಚಿವರ ಜೊತೆ ಫೋನ್ ಮೂಲಕ ಮಾತನಾಡಿದ್ದೇನೆ ಎಂದರು.
ಶೀಘ್ರದಲ್ಲೇ ಈ ಬಾರಿಯ ಐಪಿಎಲ್ ಉದ್ಘಾಟನೆ ಪಂದ್ಯದ ದಿನಾಂಕ ನಿಗದಿಯಾಗಲಿದೆ. ಬೆಂಗಳೂರಿನಲ್ಲಿ ಐಪಿಎಲ್, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲಾ ಮಾದರಿಯ ಪಂದ್ಯಗಳು ನಡೆಯುತ್ತದೆ ಎಂದು ಅವರು ತಿಳಿಸಿದರು.
ಕೊಹ್ಲಿ ಬೆಂಗಳೂರಿಗೆ
ವಿಜಯ್ ಹಜಾರೆ ಪಂದ್ಯಕ್ಕೆ ಬೆಂಗಳೂರಿಗೆ ವಿರಾಟ್ ಕೊಹ್ಲಿ ಬರಲಿದ್ದಾರೆ. ಚಿನ್ನಸ್ವಾಮಿ ಸೇರಿದಂತೆ ಮೂರು ಕ್ರೀಡಾಂಗಣ ಬೆಂಗಳೂರಿನಲ್ಲಿದೆ. ದೆಹಲಿ ತಂಡದಿಂದ ಈ ಬಾರಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಪಂದ್ಯ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದರು.
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಎಲ್ಲಾ ಮಾತುಕತೆಗಳು ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಕ್ಲಬ್ ನಲ್ಲಿ ಸಾಕಷ್ಟು ಗೊಂದಗಳಾಗಿತ್ತು. ಎಲ್ಲಾ ಗೊಂದಲಗಳನ್ನ ನಮ್ಮ ತಂಡ ಬಗೆಹರಿಸಿ ಉತ್ತಮ ಕ್ರಿಕೆಟ್ ಗೆ ಆದ್ಯತೆ ನೀಡುತ್ತೇವೆ ಎಂದು ಅವರು ಹೇಳಿದರು.
ಇನ್‌ಸ್ಟಾಗ್ರಾಂನ ವೈರಲ್ ಸ್ಟಾರ್, ಬೀದರ್ ಸ್ಪಿನ್ನರ್‌ಗೆ ಹರಾಜಿನಲ್ಲಿ ಬೇಡಿಕೆಯಿಲ್ಲ!
ಮುಂಬೈ: ಯಾವುದೇ ವೃತ್ತಿಪರ ಕ್ರಿಕೆಟ್ ಆಡದಿದ್ದರೂ ಇನ್‌ಸ್ಟಾಗ್ರಾಂ ರೀಲ್ಸ್‌ಗಳ ಮೂಲಕವೇ ಹಲವು ಕ್ರಿಕೆಟಿಗರು, ಐಪಿಎಲ್ ತಂಡಗಳ ಗಮನಸೆಳೆದಿದ್ದ ಯುವ ಸ್ಪಿನ್ನರ್ ಇಜಾಜ್ ಸವಾರಿಯಾ ಅವರು ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬಿಕರಿಯಾಗಲಿಲ್ಲ. ಇಜಾಜ್ ಹುಟ್ಟೂರು ರಾಜಸ್ಥಾನ. ಆದರೆ ತಮ್ಮ ತಂದೆಯ ಕೆಲಸದ ಕಾರಣದಿಂದಾಗಿ ಇಜಾಜ್ ಕುಟುಂಬ ಕೆಲ ವರ್ಷ ಬೀದರ್‌ನಲ್ಲಿ ನೆಲೆಸಿತ್ತು. ಅಲ್ಲೇ ಕ್ಲಬ್ ಕ್ರಿಕೆಟ್ ಆಡುತ್ತಿದ್ದ ಇಜಾಜ್, ಬಳಿಕ ಜೈಪುರಕ್ಕೆ ಮರಳಿದ್ದರು. ಇತ್ತೀಚೆಗೆ ಅವರು ತಮ್ಮ ಬೌಲಿಂಗ್ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಪಂಜಾಬ್, ಚೆನ್ನೈ ತಂಡ ಅವರನ್ನು ಟ್ರಯಲ್ಸ್‌ಗೆ ಕರೆದಿತ್ತು. ಹರಾಜಿನಲ್ಲಿ ಬಿಕರಿಯಾಗುವ ನಿರೀಕ್ಷೆ ಇದ್ದರೂ, ಅನ್‌ಸೋಲ್ಡ್ ಆದರು.
ಐಪಿಎಲ್ ಹರಾಜು ₹25.20 ಕೋಟಿಗೆ ಬಿಡ್ ಆದ್ರೂ ಗ್ರೀನ್‌ಗೆ ಸಿಗುವುದು ಬರೀ ₹18 ಕೋಟಿ ಮಾತ್ರ
ಆಸ್ಟ್ರೇಲಿಯಾದ ಗ್ರೀನ್ ₹25.20 ಕೋಟಿಗೆ ಕೋಲ್ಕತಾ ತಂಡದ ಪಾಲಾಗಿದ್ದಾರೆ. ಆದರೆ ಹರಾಜಿನ ಮೊತ್ತದಲ್ಲಿ ಗ್ರೀನ್‌ಗೆ ಸಿಗುವುದು ₹18 ಕೋಟಿ ಮಾತ್ರ. ವಿದೇಶಿ ಆಟಗಾರರು ಮಿನಿ ಹರಾಜಿನಲ್ಲಿ ಮಾತ್ರ ಪಾಲ್ಗೊಂಡು ಹೆಚ್ಚಿನ ಲಾಭ ಗಳಿಸುತ್ತಿರುವ ಬಗ್ಗೆ ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಹೀಗಾಗಿ, ಭಾರತೀಯ ಆಟಗಾರರ ಮೌಲ್ಯ ಕಾಪಾಡುವ ಮತ್ತು ವಿದೇಶಿ ಆಟಗಾರರು ಹೆಚ್ಚಿನ ಲಾಭ ಪಡೆಯುವುದನ್ನು ತಪ್ಪಿಸಲು ಕಳೆದ ವರ್ಷ ಬಿಸಿಸಿಐ ಹೊಸ ನಿಯಮ ಅಳವಡಿಸಿತ್ತು. ಇದರ ಪ್ರಕಾರ ಯಾವುದೇ ವಿದೇಶಿ ಆಟಗಾರನಿಗೆ ಮಿನಿ ಹರಾಜಿನಲ್ಲಿ ಗರಿಷ್ಠ ₹18 ಕೋಟಿ ನೀಡಬಹುದು. ಒಂದು ವೇಳೆ ಫ್ರಾಂಚೈಸಿಗಳು ₹18 ಕೋಟಿಗಿಂತ ಹೆಚ್ಚಿಗೆ ಬಿಡ್ ಮಾಡಿದರೆ, ಹೆಚ್ಚುವರಿ ಹಣವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಗೆ ಬಳಸಲಿದೆ. ಅಂದರೆ ಗ್ರೀನ್‌ಗೆ ಬಿಡ್ ಮಾಡಲಾದ ₹25.20 ಕೋಟಿಯಲ್ಲಿ, ₹7.20 ಕೋಟಿ ಬಿಸಿಸಿಐಗೆ ಹೋಗಲಿದೆ. ಆದರೆ ಕೆಕೆಆರ್ ಪರ್ಸ್‌ನಿಂದ ಸಂಪೂರ್ಣ ₹25.20 ಕೋಟಿ ಕಡಿತಗೊಳ್ಳಲಿದೆ.
ಪ್ರಶಾಂತ್, ಕಾರ್ತಿಕ್ ಐಪಿಎಲ್‌ನ ದುಬಾರಿ ಅನ್‌ಕ್ಯಾಪ್ಡ್ ಕ್ರಿಕೆಟಿಗರು
ಐಪಿಎಲ್ ಇತಿಹಾಸದಲ್ಲೇ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆದ ಅನ್‌ಕ್ಯಾಪ್ಡ್(ಅಂತಾರಾಷ್ಟ್ರೀಯ ಪಂದ್ಯ ಆಡದ) ಆಟಗಾರರು ಎಂಬ ಖ್ಯಾತಿಗೆ ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ ಪಾತ್ರರಾಗಿದ್ದಾರೆ. ಇವರಿಬ್ಬರನ್ನೂ ಸಿಎಸ್‌ಕೆ ತಂಡ ತಲಾ ₹14.20 ಕೋಟಿ ನೀಡಿ ಖರೀದಿಸಿತು. 2022ರ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ₹10 ಕೋಟಿ ನೀಡಿ ವೇಗಿ ಆವೇಶ್ ಖಾನ್‌ರನ್ನು ಖರೀದಿಸಿತ್ತು. ಈ ಮೂಲಕ ಅವೇಶ್ ಐಪಿಎಲ್‌ನಲ್ಲಿ ಅತಿ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದರು.
ಮಯಾಂಕ್, ವಿದ್ವತ್ ಸೇರಿ ಪ್ರಮುಖರು ಅನ್‌ಸೋಲ್ಡ್
ಈ ಬಾರಿ ಹರಾಜಿನಲ್ಲೂ ಕೆಲ ಪ್ರಮುಖ ಆಟಗಾರರು ಯಾವುದೇ ತಂಡಕ್ಕೆ ಬಿಕರಿಯಾಗಲಿಲ್ಲ. ಭಾರತದ ತಾರಾ ಕ್ರಿಕೆಟಿಗರಾದ ಮಯಾಂಕ್ ಅಗರ್‌ವಾಲ್, ಕರ್ಣ್ ಶರ್ಮಾ, ತನುಶ್ ಕೋಟ್ಯನ್, ಕನ್ನಡಿಗ ಅಭಿನವ್ ಮನೋಹರ್, ನ್ಯೂಜಿಲೆಂಡ್‌ನ ಡೆವೊನ್ ಕಾನ್‌ವೇ, ಆಸ್ಟ್ರೇಲಿಯಾದ ಜೇಕ್ ಫ್ರೇಸರ್, ಸ್ಟೀವ್ ಸ್ಮಿತ್, ಇಂಗ್ಲೆಂಡ್‌ನ ಜೆಮೀ ಸ್ಮಿತ್, ಗಸ್ ಆಟ್ಕಿನ್ಸನ್ ಸೇರಿ ಪ್ರಮುಖರು ಬಿಕರಿಯಾಗಲಿಲ್ಲ.
ಹರಾಜಾದ ಏಕೈಕ ಕನ್ನಡಿಗ ಯಶ್‌ರಾಜ್
ಈ ಬಾರಿ ಹರಾಜಿನಲ್ಲಿ ಮಾರಾಟವಾದ ಕರ್ನಾಟಕದ ಏಕೈಕ ಆಟಗಾರ ಯಶ್‌ರಾಜ್ ಪೂಂಜಾ. ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ₹30 ಲಕ್ಷಕ್ಕೆ ಮಾರಾಟವಾದರು. ಆದರೆ ದೊಡ್ಡ ಮೊತ್ತ ನಿರೀಕ್ಷಿಸಿದ್ದ ಮಯಾಂಕ್ ಅಗರ್‌ವಾಲ್, ವಿದ್ವತ್ ಕಾವೇರಪ್ಪ, ಮನೋಜ್ ಭಾಂಡಗೆ, ಅಭಿನವ್ ಮನೋಹರ್ ಸೇರಿ ಪ್ರಮುಖರು ಯಾವುದೇ ತಂಡಕ್ಕೆ ಬಿಕರಿಯಾಗಲಿಲ್ಲ.
ಜಡೇಜಾ ‘ಉತ್ತರಾಧಿಕಾರಿ’ ಪ್ರಶಾಂತ್, 19ರ ಕಾರ್ತಿಕ್‌ಗೆ ಚೆನ್ನೈನಿಂದ ಬಂಪರ್
ಈ ಬಾರಿ ಹರಾಜಿನಲ್ಲಿ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದು ಇಬ್ಬರು ಯುವ ಕ್ರಿಕೆಟಿಗರು. ಪ್ರಶಾಂತ್ ವೀರ್ ಹಾಗೂ ಕಾರ್ತಿಕ್ ಶರ್ಮಾ. ಉತ್ತರ ಪ್ರದೇಶದ 20 ವರ್ಷದ ಪ್ರಶಾಂತ್ ಯುಪಿ ಲೀಗ್‌ನಲ್ಲಿ ನೋಯ್ಡಾ ಪರ ಮಿಂಚಿದ್ದು, ಈ ಬಾರಿ ಮುಷ್ತಾಕ್ ಅಲಿ ಟಿ20 ಟೂರ್ನಿ ಹಾಗೂ ಉತ್ತರ ಪ್ರದೇಶ ಪರ ಅಂಡರ್-23 ಟೂರ್ನಿಯಲ್ಲೂ ಆಡಿದ್ದಾರೆ. ಪ್ರತಿಭಾವಂತ ಆಲ್ರೌಂಡರ್ ಆಗಿರುವ ಪ್ರಶಾಂತ್‌ರನ್ನು ಟ್ರಯಲ್ಸ್‌ನಲ್ಲಿ ಗುರುತಿಸಿದ್ದ ಸಿಎಸ್‌ಕೆ, ರವೀಂದ್ರ ಜಡೇಜಾಗೆ ಸಮರ್ಥ ಉತ್ತರಾಧಿಕಾರಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಇನ್ನು, ಕಾರ್ತಿಕ್ ಶರ್ಮಾ ರಾಜಸ್ಥಾನದವರು. ಇನ್ನೂ 19 ವರ್ಷ. ಮುಷ್ತಾಕ್ ಅಲಿ ಟಿ20ಯಲ್ಲಿ ಆಡಿರುವ 12 ಪಂಧ್ಯಗಳಲ್ಲಿ ಕಾರ್ತಿಕ್ 28 ಸಿಕ್ಸರ್ ಬಾರಿಸಿದ್ದು, 164 ಸ್ಟ್ರೈಕ್‌ರೇಟ್‌ನಲ್ಲಿ 334 ರನ್ ಕಲೆಹಾಕಿದ್ದಾರೆ. 2024-25ರ ವಿಜಯ್ ಹಜಾರೆಯಲ್ಲಿ 9 ಪಂದ್ಯಗಳಲ್ಲಿ 445 ರನ್ ಸಿಡಿಸಿದ್ದರು. ಅಲ್ಲದೆ ರಣಜಿಯಲ್ಲಿ 3 ಶತಕವನ್ನೂ ಬಾರಿಸಿದ್ದಾರೆ.
ದುಬಾರಿ ಭಾರತೀಯ ಆಟಗಾರರು
ಆಟಗಾರ ಮೊತ್ತ ತಂಡ
ಕಾರ್ತಿಕ್ ಶರ್ಮಾ 14.2 ಕೋಟಿ ಚೆನ್ನೈ
ಪ್ರಶಾಂತ್ ವೀರ್ 14.2 ಕೋಟಿ ಚೆನ್ನೈ
ಆಖಿಬ್ ನಬಿ 8.40 ಕೋಟಿ ಡೆಲ್ಲಿ
ರವಿ ಬಿಷ್ಣೋಯ್ 7.20 ಕೋಟಿ ರಾಜಸ್ಥಾನ
ವೆಂಕಿ ಅಯ್ಯರ್ 7.00 ಕೋಟಿ ಆರ್‌ಸಿಬಿ
ಮಾ.26ರಿಂದ ಐಪಿಎಲ್,
ಮೇ 31ರಂದು ಫೈನಲ್
ಮುಂಬೈ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2026ರ ಮಾರ್ಚ್ 26ಕ್ಕೆ ಆರಂಭಗೊಳ್ಳಲಿದೆ. ಟೂರ್ನಿ ಮೇ 31ರಂದು ಕೊನೆಗೊಳ್ಳಲಿದೆ. ಆದರೆ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ, ಪಂದ್ಯಗಳು ನಡೆಯುವ ನಗರಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಅಲ್ಲದೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಆಗಿರುವ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುವ ಬಗ್ಗೆ ಊಹಾಪೋಹ ಹರಿದಾಡುತ್ತಿದೆ. ಆದರೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸುವ ಬಗ್ಗೆ ಕರ್ನಾಟಕ ಸರ್ಕಾರ, ಬಿಸಿಸಿಐ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.