;Resize=(412,232))
ನ್ಯೂಯಾರ್ಕ್: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದ ತಂಡಕ್ಕೆ ಬರೋಬ್ಬರಿ 50 ಮಿಲಿಯನ್ ಯುಎಸ್ ಡಾಲರ್(452 ಕೋಟಿ ರು.) ನಗದು ಬಹುಮಾನ ಸಿಗಲಿದೆ ಎಂದು ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ಘೋಷಿಸಿದೆ.
ಬುಧವಾರ ದೋಹಾದಲ್ಲಿ ನಡೆದ ಸಭೆ ಬಳಿಕ ಫಿಫಾ ಈ ಪ್ರಕಟನೆ ಹೊರಡಿಸಿತು. 2022ರ ವಿಶ್ವಕಪ್‌ಗಿಂತ ಈ ಬಾರಿ ಒಟ್ಟಾರೆ ಬಹುಮಾನ ಮೊತ್ತದಲ್ಲಿ ಶೇ.50ರಷ್ಟು ಹೆಚ್ಚಿಸಲಾಗಿದೆ. ಕಳೆದ ಬಾರಿ ವಿಶ್ವಕಪ್ ಗೆದ್ದಾಗ ಅರ್ಜೆಂಟೀನಾ ತಂಡಕ್ಕೆ ₹347 ಕೋಟಿ ಲಭಿಸಿತ್ತು. ಅದಕ್ಕಿಂತ 100 ಕೋಟಿಗೂ ಹೆಚ್ಚು ಮೊತ್ತ ಮುಂದಿನ ವರ್ಷ ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ. ಇನ್ನು, ಈ ವಿಶ್ವಕಪ್‌ನ ರನ್ನರ್-ಅಪ್ ತಂಡಕ್ಕೆ ₹298 ಕೋಟಿ, 3ನೇ ಸ್ಥಾನಿ ತಂಡಕ್ಕೆ ₹262 ಕೋಟಿ, 4ನೇ ಸ್ಥಾನ ಪಡೆದ ತಂಡಕ್ಕೆ ₹244 ಕೋಟಿ ನಗದು ಸಿಗಲಿದೆ.
ಟೂರ್ನಿಯಲ್ಲಿ 33ರಿಂದ 48ರ ನಡುವೆ ಸ್ಥಾನ ಪಡೆದ ತಂಡಗಳಿಗೆ ತಲಾ ₹81 ಕೋಟಿ, 17ರಿಂದ 32ನೇ ಸ್ಥಾನ ಪಡೆದ ತಂಡಗಳಿಗೆ ತಲಾ ₹99 ಕೋಟಿ, 9ರಿಂದ 16ನೇ ಸ್ಥಾನ ಪಡೆದ ತಂಡಗಳಿಗೆ ತಲಾ ₹135 ಕೋಟಿ, ಕ್ವಾರ್ಟರ್ ಫೈನಲ್‌ನಲ್ಲಿ ಹೊರಬೀಳುವ 4 ತಂಡಗಳಿಗೆ ತಲಾ ₹171 ಕೋಟಿ ಸಿಗಲಿದೆ. ಹೆಚ್ಚುವರಿಯಾಗಿ ಎಲ್ಲಾ ತಂಡಗಳಿಗೂ ಸಿದ್ಧತೆಗಾಗಿ ತಲಾ ₹13 ಕೋಟಿ ಸಿಗಲಿದೆ. ಅಂದರೆ ಟೂರ್ನಿಯಲ್ಲಿ ಆಡುವ ಪ್ರತಿ ತಂಡಗಳೂ ಕನಿಷ್ಠ ₹94 ಕೋಟಿ ಮೊತ್ತವನ್ನು ತನ್ನದಾಗಿಸಿಕೊಳ್ಳಲಿವೆ.
2026ರ ಫಿಫಾ ವಿಶ್ವಕಪ್‌ಗೆ ನಿಗದಿಪಡಿಸಲಾಗಿರುವ ಬಹುಮಾನ ಮೊತ್ತ ಒಟ್ಟು 5925 ಕೋಟಿ ರು.
ಸ್ಥಾನ ನಗದು ಮೊತ್ತ
ಚಾಂಪಿಯನ್ ₹452 ಕೋಟಿ
ರನ್ನರ್-ಅಪ್ ₹298 ಕೋಟಿ
3ನೇ ಸ್ಥಾನ ₹262 ಕೋಟಿ
4ನೇ ಸ್ಥಾನ ₹244 ಕೋಟಿ
5-8 ಸ್ಥಾನ ತಲಾ ₹171 ಕೋಟಿ
9-16 ಸ್ಥಾನ ತಲಾ ₹135 ಕೋಟಿ
17-32 ಸ್ಥಾನ ತಲಾ ₹99 ಕೋಟಿ
33-48 ಸ್ಥಾನ ತಲಾ ₹81 ಕೋಟಿ
ಒಟ್ಟು ಮೊತ್ತ ₹5925 ಕೋಟಿ