ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್ ಆರಂಭವಾಗಿ ವಾರವಷ್ಟೇ ಕಳೆದಿದ್ದರೂ ಹಲವು ಅಚ್ಚರಿಯ ಫಲಿತಾಂಶ, ಮೊದಲುಗಳಿಗೆ ಸಾಕ್ಷಿಯಾಗುತ್ತಿದೆ. ಕೆಲ ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ ಗೆಲುವು ದಾಖಲಿಸಿವೆ.ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದು ಅಮೆರಿಕ ಟಿ20 ವಿಶ್ವಕಪ್‌ನಲ್ಲಿ ಮೊದಲ ಜಯ ದಾಖಲಿಸಿತು. ಉಗಾಂಡ ತಂಡ ಪಪುವಾ ನ್ಯೂ ಗಿನಿಯನ್ನು, ಕೆನಡಾ ತಂಡ ಐರ್ಲೆಂಡನ್ನು ಸೋಲಿಸುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಚೊಚ್ಚಲ ಜಯ ತನ್ನದಾಗಿಸಿಕೊಂಡವು.
ಇನ್ನು, ನ್ಯೂಜಿಲೆಂಡ್ ವಿರುದ್ಧದ ಗೆಲುವು ಅಫ್ಫಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಿವೀಸ್ ವಿರುದ್ಧ ಲಭಿಸಿದ ಮೊದಲ ಜಯ. ಅತ್ತ ಬಾಂಗ್ಲಾದೇಶ ಕೂಡಾ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಬಾರಿ ಜಯ ಸಾಧಿಸಿತು.
ಉಗಾಂಡ ಸವಾಲು ಗೆಲ್ಲಲು ಆತಿಥೇಯ ವಿಂಡೀಸ್ ಸಿದ್ಧ
ಜಾರ್ಜ್‌ಟೌನ್(ಗಯಾನ): ಪಪುವಾ ನ್ಯೂ ಗಿನಿ ವಿರುದ್ಧ ಕಷ್ಟದಲ್ಲಿ ಗೆದ್ದು ಈ ಬಾರಿ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಆತಿಥೇಯ ವೆಸ್ಟ್‌ಇಂಡೀಸ್ ಸತತ 2ನೇ ಗೆಲುವು ನಿರೀಕ್ಷೆಯಲ್ಲಿದ್ದು, ಭಾನುವಾರ ಉಗಾಂಡ ವಿರುದ್ಧ ಸೆಣಸಲಿದೆ.2 ಬಾರಿ ಚಾಂಪಿಯನ್ ವಿಂಡೀಸ್ ಮೊದಲ ಪಂದ್ಯದಲ್ಲಿ ಪಪುವಾ ನೀಡಿದ್ದ 137 ರನ್ ಗುರಿಯನ್ನು ಬೆನ್ನತ್ತಿ ಗೆಲ್ಲಲು 19 ಓವರ್ ತೆಗೆದುಕೊಂಡಿತ್ತು. ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳಿದ್ದರೂ ನಿಧಾನಗತಿ ಪಿಚ್‌ನಲ್ಲಿ ವಿಕೆಟ್ ಉಳಿಸಿಕೊಂಡು ಗೆಲ್ಲುವ ಕೌಶಲ್ಯ ಕಂಡುಕೊಳ್ಳಬೇಕಿದೆ. ಅತ್ತ ಉಗಾಂಡ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 125 ರನ್‌ಗಳಲ್ಲಿ ಸೋತಿದ್ದರೂ, 2ನೇ ಪಂದ್ಯದಲ್ಲಿ ಪಪುವಾವನ್ನು ಮಣಿಸಿತ್ತು. ಈ ಬಾರಿ ವಿಂಡೀಸ್‌ಗೆ ಆಘಾತ ನೀಡುವ ಕಾತರದಲ್ಲಿದೆ.
ಪಂದ್ಯ: ಬೆಳಗ್ಗೆ 6 ಗಂಟೆಗೆಒಮಾನ್ vs ಸ್ಕಾಟ್ಲೆಂಡ್
ಭಾನುವಾರದ ಮತ್ತೊಂದು ಪಂದ್ಯದಲ್ಲಿ ಒಮಾನ್ ಹಾಗೂ ಸ್ಕಾಟ್ಲೆಂಡ್ ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ವಿರುದ್ಧ ಪಂದ್ಯ ಮಳೆ ರದ್ದಾದ ಕಾರಣ 1 ಅಂಕ ಪಡೆದಿದ್ದ ಸ್ಕಾಟ್ಲೆಂಡ್, 2ನೇ ಪಂದ್ಯದಲ್ಲಿ ನಮೀಬಿಯಾವನ್ನು ಮಣಿಸಿತ್ತು. ಅತ್ತ ಒಮಾನ್ ಆಡಿರುವ 2 ಪಂದ್ಯಗಳಲ್ಲಿ ಕ್ರಮವಾಗಿ ನಮೀಬಿಯಾ, ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು, ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ.
ಪಂದ್ಯ: ರಾತ್ರಿ 10.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.