ಆರ್‌ಸಿಬಿಗೆ ಟಾಪ್‌ - 2 ಗುರಿ : ಇಂದು ಹೈದ್ರಾಬಾದ್‌ ವಿರುದ್ಧ ಸೆಣಸು

Published : May 23, 2025, 12:49 PM IST
RCB TEAM IPL 2025

ಸಾರಾಂಶ

ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ತಂಡದ ಗುರಿ ಇರುವುದು ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದ ಮೇಲೆ. ಇದನ್ನು ಸಾಧಿಸಬೇಕಿದ್ದರೆ ಶುಕ್ರವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು ಅಗತ್ಯ.

ಲಖನೌ: ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ತಂಡದ ಗುರಿ ಇರುವುದು ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದ ಮೇಲೆ. ಇದನ್ನು ಸಾಧಿಸಬೇಕಿದ್ದರೆ ಶುಕ್ರವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು ಅಗತ್ಯ.

ರಜತ್‌ ಪಾಟೀದಾರ್‌ ನಾಯಕತ್ವದ ಆರ್‌ಸಿಬಿ 12 ಪಂದ್ಯಗಳನ್ನಾಡಿದ್ದು, 8ರಲ್ಲಿ ಗೆದ್ದು, 1 ಪಂದ್ಯ ರದ್ದಾಗಿದ್ದರಿಂದ 17 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಅಗ್ರ-2 ಸ್ಥಾನ ಪಡೆದ ತಂಡಗಳು ಕ್ವಾಲಿಫೈಯರ್‌-1ರಲ್ಲಿ ಆಡಲಿರುವುದರಿಂದ ಆರ್‌ಸಿಬಿಗೆ ಅದರ ಮೇಲೆ ಕಣ್ಣಿದೆ. ಆದರೆ ಇದಕ್ಕೆ ಕೊನೆ 2 ಪಂದ್ಯದಲ್ಲೂ ಗೆಲ್ಲಲೇಬೇಕು. ಜೊತೆಗೆ, ತಂಡದಲ್ಲಿರುವ ಕೆಲ ಸಮಸ್ಯೆಗಳಿಗೆ ಪ್ಲೇ-ಆಫ್‌ಗೂ ಮುನ್ನ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.

ವಿರಾಟ್‌ ಕೊಹ್ಲಿ ತಮ್ಮ ಅಭೂತಪೂರ್ವ ಲಯ ಮುಂದುವರಿಸಲು ಕಾಯುತ್ತಿದ್ದಾರೆ. ಬಹುತೇಕ ವಿದೇಶಿ ಆಟಗಾರರು ಈ ಪಂದ್ಯಕ್ಕೆ ಲಭ್ಯವಿದ್ದಾರೆ. ಫಿಲ್‌ ಸಾಲ್ಟ್‌, ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌ ಆಯ್ಕೆಗೆ ಲಭ್ಯವಿದ್ದು, ಅವರಿಂದ ತಂಡ ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸುತ್ತಿದೆ. ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌, ಸುಯಶ್‌ ಶರ್ಮಾ, ಯಶ್‌ ದಯಾಳ್‌ ತಂಡದ ಆಧಾರಸ್ತಂಭ. ಕೃನಾಲ್‌ ಪಾಂಡ್ಯ ಆಲ್ರೌಂಡ್‌ ಆಟ ತಂಡದ ಸೋಲು-ಗೆಲುವು ನಿರ್ಧರಿಸುವಂತಿದೆ.

ಔಪಚಾರಿಕ ಪಂದ್ಯ: ಮತ್ತೊಂದೆಡೆ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಇದು ಔಪಚಾರಿಕ ಪಂದ್ಯ. 12 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದಿರುವ ತಂಡ, ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ.

ಪಂದ್ಯ: ಸಂಜೆ 7.30ಕ್ಕೆ

ಹೇಜಲ್‌ವುಡ್‌ ಅಲಭ್ಯ:

ರಜತ್‌, ಸಾಲ್ಟ್‌ ಫಿಟ್‌

ಗಾಯಗೊಂಡಿರುವ ಆರ್‌ಸಿಬಿ ವೇಗಿ ಜೋಶ್‌ ಹೇಜಲ್‌ವುಡ್‌ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಶುಕ್ರವಾರದ ಪಂದ್ಯಕ್ಕೆ ಗೈರಾಗಲಿದ್ದಾರೆ. ಆದರೆ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ರಜತ್‌ ಪಾಟೀದಾರ್‌ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಫಿಲ್ ಸಾಲ್ಟ್‌ ಈ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿದ್ದಾರೆ ಎಂದು ಮುಖ್ಯ ಕೋಚ್‌ ಆ್ಯಂಡಿ ಫ್ಲವರ್‌ ತಿಳಿಸಿದ್ದಾರೆ.

ಬೆಂಗಳೂರಿನಿಂದ

ಶಿಫ್ಟ್‌ ಆದ ಪಂದ್ಯ

ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿತ್ತು. ಆದರೆ ಮಳೆ ಭೀತಿ ಕಾರಣಕ್ಕೆ ಪಂದ್ಯವನ್ನು ಲಖನೌಗೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಆರ್‌ಸಿಬಿಗೆ ಬೆಥೆಲ್‌ ಬದಲು

ನ್ಯೂಜಿಲೆಂಡ್‌ನ ಸೀಫರ್ಟ್‌

ಬೆಂಗಳೂರು: ಇಂಗ್ಲೆಂಡ್‌ನ ತಾರಾ ಬ್ಯಾಟರ್‌ ಜೇಕಬ್‌ ಬೆಥೆಲ್‌ ಈ ಬಾರಿ ಐಪಿಎಲ್‌ನ ಪ್ಲೇ-ಆಫ್‌ ಪಂದ್ಯಗಳಿಗೆ ಗೈರಾಗಲಿದ್ದಾರೆ. ಅವರ ಬದಲು ನ್ಯೂಜಿಲೆಂಡ್‌ನ ಟಿಮ್‌ ಸೀಫರ್ಟ್‌ರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ. ಶುಕ್ರವಾರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆಡಲಿರುವ ಬೆಥೆಲ್‌ ಬಳಿಕ ತವರಿಗೆ ಮರಳಿ ರಾಷ್ಟ್ರೀಯ ತಂಡ ಕೂಡಿಕೊಳ್ಳಲಿದ್ದಾರೆ. ಮೇ 24ರ ಬಳಿಕ ಸೀಫರ್ಟ್‌ ಆರ್‌ಸಿಬಿ ತಂಡ ಸೇರ್ಪಡೆಗೊಳ್ಳಲಿದ್ದಾರೆ. ಸೀಫರ್ಟ್‌ ನ್ಯೂಜಿಲೆಂಡ್‌ ಪರ 66 ಟಿ20 ಪಂದ್ಯಗಳನ್ನಾಡಿದ್ದು, 1540 ರನ್‌ ಕಲೆಹಾಕಿದ್ದಾರೆ. 2022ರಲ್ಲಿ ಅವರು ಕೊನೆ ಬಾರಿ ಐಪಿಎಲ್‌ ಆಡಿದ್ದರು. ಅವರನ್ನು ಆರ್‌ಸಿಬಿ ₹2 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

PREV
Read more Articles on

Recommended Stories

ಗಿಲ್‌ ಅಬ್ಬರಕ್ಕೆ ಮತ್ತಷ್ಟು ದಾಖಲೆ ಬ್ರೇಕ್‌
ಶರಣಾಗದೆ ಭಾರತ ಹೋರಾಟ : ಪಂದ್ಯ ಡ್ರಾ