ನವದೆಹಲಿ: ಹಿರಿಯ ಕ್ರಿಕೆಟಿಗರ ಭಾರತ ತಂಡದ ಕಮ್‌ಬ್ಯಾಕ್, ಯುವ ಕ್ರಿಕೆಟಿಗರ ಟೀಂ ಇಂಡಿಯಾ ಪಾದಾರ್ಪಣೆ ಭವಿಷ್ಯ ನಿರ್ಧರಿಸುವ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ಸಿಗಲಿದೆ. 2024-25ರ ಋತುವಿನ ಟೂರ್ನಿಯಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 38 ತಂಡಗಳು ಪಾಲ್ಗೊಳ್ಳಲಿದ್ದು, ದೇಶದ 20 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.
2025ರ ಜ.18ರ ವರೆಗೂ ಟೂರ್ನಿ ನಡೆಯಲಿದೆ.ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇನ್ನು ಕೇವಲ 2 ತಿಂಗಳು ಬಾಕಿಯಿದೆ. ಹೀಗಾಗಿ ವಿಜಯ್ ಹಜಾರೆ ಟೂರ್ನಿ ಭಾರತ ತಂಡದ ಪಾಲಿಗೆ ಮಹತ್ವದ್ದೆನಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರು ಆಸ್ಟ್ರೇಲಿಯಾ ಸರಣಿಯಲ್ಲಿ ನಿರತರಾಗಿದ್ದರೆ, ಇತರ ಹಿರಿಯ ಹಾಗೂ ಯುವ ಆಟಗಾರರು ವಿಜಯ್ ಹಜಾರೆ ಟೂರ್ನಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಹಲವು ಸ್ಥಾನಕ್ಕೆ ಪೈಪೋಟಿ: ಭಾರತ ತಂಡ ತನ್ನ ಕೆಲ ಸಮಸ್ಯೆಗಳಿಗೆ ಈ ಬಾರಿ ವಿಜಯ್ ಹಜಾರೆ ಮೂಲಕ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ರಿಷಭ್ ಪಂತ್‌ಗೆ ಬ್ಯಾಕ್ ಆಗಿ ಒಬ್ಬ ವಿಕೆಟ್ ಕೀಪರ್ ಬ್ಯಾಟರ್ ಅಗತ್ಯವಿದೆ. ಹೀಗಾಗಿ ಜಿತೇಶ್ ಶರ್ಮಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.ತಜ್ಞ ಮಣಿಕಟ್ಟು ಸ್ಪಿನ್ನರ್ ಆಗಿರುವ ಕುಲ್ದೀಪ್ ಯಾದವ್ ಈಗ ಗಾಯಗೊಂಡಿದ್ದಾರೆ. ಹೀಗಾಗಿ ಆಯ್ಕೆ ಸಮಿತಿ ಇತರ ಆಯ್ಕೆಗಳ ಮೇಲೆ ಕಣ್ಣಿಟ್ಟಿದೆ. ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ನಡುವೆ ತೀವ್ರ ಪೈಪೋಟಿ ಇದ್ದು, ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ವೇಗಿಗಳಿಗೆ ಬೇಡಿಕೆ: ಟೀಂ ಇಂಡಿಯಾದಲ್ಲಿ ಬೂಮ್ರಾ, ಸಿರಾಜ್, ಶಮಿ ಸೇರಿದಂತೆ ಕೆಲ ಪ್ರಮುಖ ವೇಗಿಗಳಿದ್ದಾರೆ. ಆದರೆ ಪ್ರಮುಖ ಟೂರ್ನಿಗಳ ವೇಳೆ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಇತರ ಯುವ ವೇಗಿಗಳ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಅರ್ಶ್‌ದೀಪ್ ಸಿಂಗ್, ಯಶ್ ದಯಾಳ್, ಮುಕೇಶ್ ಕುಮಾರ್, ಆವೇಶ್ ಖಾನ್, ಖಲೀಲ್ ಅಹ್ಮದ್ ಸೇರಿ ಪ್ರಮುಖರು ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಶಮಿ ಕೂಡಾ ಲಯ, ಫಿಟ್ನೆಸ್ ಕಂಡುಕೊಳ್ಳುವ ಕಾತರದಲ್ಲಿದ್ದಾರೆ.
ಟೂರ್ನಿ ಮಾದರಿ ಹೇಗೆ?
ಟೂರ್ನಿಯಲ್ಲಿ ಈ ಬಾರಿ 38 ತಂಡಗಳು ಪಾಲ್ಗೊಳ್ಳಲಿವೆ. ತಲಾ 8 ತಂಡಗಳ 3 ಹಾಗೂ ತಲಾ 7 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಪ್ರತಿ ತಂಡಗಳು ಇತರ ತಂಡಗಳ ವಿರುದ್ಧ ಒಂದು ಬಾರಿ ಆಡಲಿವೆ. ಗುಂಪು ಹಂತದ ಮುಕ್ತಾಯಕ್ಕೆ ಒಟ್ಟಾರೆ ಗರಿಷ್ಠ ಅಂಕ ಪಡೆದ ಅಗ್ರ-6 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೇರಲಿದ್ದು, ಆ ಬಳಿಕ 4 ಸ್ಥಾನ ಪಡೆದ ತಂಡಗಳು ಪ್ರಿ ಕ್ವಾರ್ಟರ್ ಪ್ರವೇಶಿಸಲಿವೆ.
ಹಾರ್ದಿಕ್, ಶ್ರೇಯಸ್ ಅಭ್ಯಾಸಕ್ಕೆ ವೇದಿಕೆ
ಭಾರತ ಏಕದಿನ ತಂಡದ ಭಾಗವಾಗಿರುವ ಹಲವು ಕ್ರಿಕೆಟಿಗರು ಈ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಲಿದ್ದು, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸೂಕ್ತ ಅಭ್ಯಾಸ ನಡೆಸಲು ವೇದಿಕೆಯನ್ನಾಗಿ ಬಳಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ತಿಲಕ್ ವರ್ಮಾ ಸೇರಿದಂತೆ ಪ್ರಮುಖರು ಟೂರ್ನಿಯಲ್ಲಿ ಆಡಲಿದ್ದಾರೆ.
ಕರ್ನಾಟಕಕ್ಕೆ ಮುಂಬೈ ವಿರುದ್ಧ ಇಂದು ಮೊದಲ ಪಂದ್ಯ
ಅಹಮದಾಬಾದ್: ಈ ಬಾರಿ ರಣಜಿ ಹಾಗೂ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಕರ್ನಾಟಕ ತಂಡ ವಿಜಯ್ ಹಜಾರೆಯಲ್ಲಾದರೂ ಉತ್ತಮ ಆಟವಾಡುವ ನಿರೀಕ್ಷೆಯಲ್ಲಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶನಿವಾರ ಬಲಿಷ್ಠ ಮುಂಬೈ ವಿರುದ್ಧ ಸೆಣಸಾಡಲಿದೆ.ಮಯಾಂಕ್ ಅಗರ್‌ವಾಲ್ ನಾಯಕತ್ವದ ತಂಡ ಈ ಬಾರಿ ‘ಸಿ’ ಗುಂಪಿನಲ್ಲಿದೆ. ಅನುಭವಿ ಆಟಗಾರ ಮನೀಶ್ ಪಾಂಡೆ ತಂಡದಿಂದ ಹೊರಬಿದ್ದಿದ್ದು, ಯುವ ತಾರೆಗಳ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಶ್ರೇಯಸ್ ಗೋಪಾಲ್, ವೈಶಾಕ್, ನಿಕಿನ್ ಜೋಸ್, ಅಭಿನವ್ ಮನೋಹರ್ ಜೊತೆ ಯುವ ಕ್ರಿಕೆಟಿಗರಾದ ಅಭಿಲಾಶ್ ಶೆಟ್ಟಿ, ಕೆ.ಎಲ್.ಶ್ರೀಜಿತ್, ವಿದ್ಯಾಧರ್ ಪಾಟೀಲ್, ಮನೋಜ್ ಭಾಂಡಗೆ ತಂಡದಲ್ಲಿದ್ದು, ಸಾಮರ್ಥ್ಯ ಪ್ರದರ್ಶನಕ್ಕೆ ಕಾಯುತ್ತಿದ್ದಾರೆ. ರಾಜ್ಯ ತಂಡ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡಲಿದೆ.