ಗಾಜಾ ಮಾದರಿ ಟೆಹ್ರಾನ್‌ ಧ್ವಂಸಕ್ಕೆ ಇಸ್ರೇಲ್‌ ಸಿದ್ಧತೆ : ಎಚ್ಚರಿಕೆ

Published : Jun 18, 2025, 04:39 AM IST
Rescuers work at the site of a damaged building, in the aftermath of Israeli strikes in Tehran, Iran, June 13 (Photo/Reuters)

ಸಾರಾಂಶ

ಕಳೆದ 5 ದಿನದಿಂದ ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಭೀಕರ ದಾಳಿ- ಪ್ರತಿದಾಳಿಗಳು ಮುಂದುವರೆದಿವೆ.

ಟೆಲ್‌ ಅವಿವ್‌/ಟೆಹ್ರಾನ್‌: ಕಳೆದ 5 ದಿನದಿಂದ ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಭೀಕರ ದಾಳಿ- ಪ್ರತಿದಾಳಿಗಳು ಮುಂದುವರೆದಿವೆ. 

ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪರಮಾಪ್ತ ಸೇನಾ ಸಲಹೆಗಾರ ಜ। ಅಲಿ ಶಾದ್ಮಾನಿಯನ್ನು ವಾಯುದಾಳಿಯಲ್ಲಿ ಇಸ್ರೇಲ್‌ ಹತ್ಯೆ ಮಾಡಿದೆ ಹಾಗೂ ಪಶ್ಚಿಮ ಇರಾನ್‌ನ ಖಂಡಾಂತರ ಕ್ಷಿಪಣಿ ಉಡಾವಣಾ ತಾಣಗಳನ್ನು ಧ್ವಂಸ ಮಾಡಿದೆ. 

ಇದೇ ವೇಳೆ, ‘ರಾಜಧಾನಿ ಟೆಹ್ರಾನ್‌ ಮೇಲೆ ಗಾಜಾ ಮಾದರಿಯಲ್ಲಿ ದಾಳಿ ನಡೆಸಲಾಗುವುದು. ಟೆಹ್ರಾನ್‌ನ 3.30 ಲಕ್ಷ ಜನರು ಕೂಡಲೇ ನಗರ ತೊರೆಯಬೇಕು’ ಎಂದು ಇಸ್ರೇಲ್‌ ಸೂಚನೆ ನೀಡಿದೆ. ಹಮಾಸ್‌ ವಿರುದ್ಧ ಸಮರದ ವೇಳೆಯೂ ಗಾಜಾ ನಗರವನ್ನು ತೊರೆಯುವಂತೆ ಸೂಚಿಸಿದ್ದ ಇಸ್ರೇಲ್‌, ಬಳಿಕ ಬಹುತೇಕ ಇಡೀ ನಗರವನ್ನೇ ಧ್ವಂಸಗೊಳಿಸಿತ್ತು.

ಮತ್ತೊಂದೆಡೆ ಯುದ್ಧದಲ್ಲಿ ಇಸ್ರೇಲ್‌ ಬೆನ್ನಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ಟೆಹ್ರಾನ್‌ ನಗರವನ್ನು ಜನರು ಕೂಡಲೇ ತೊರೆಯಬೇಕು’ ಎಂದಿದ್ದಾರೆ. ಈ ಮೂಲಕ ಇರಾನ್‌ ಮೇಲೆ ಇಸ್ರೇಲ್‌ ಭಾರಿ ಮತ್ತಷ್ಟು ಘೋರ ದಾಳಿ ನಡೆಸುವ ಮುನ್ಸೂಚನೆ ಲಭಿಸಿದೆ.

ಇಷ್ಟೆಲ್ಲ ವಿದ್ಯಮಾನದ ಹೊರತಾಗ್ಯೂ ಸುಮ್ಮನಾಗದ ಇರಾನ್, ಮಂಗಳವಾರ ರಾತ್ರಿ ಇಸ್ರೇಲ್‌ ಮೇಲೆ ಕ್ಷಿಪಣಿಗಳ ಮಳೆಗರೆದಿದೆ.

ಖಮೇನಿ ಆಪ್ತನ ಹತ್ಯೆ:

ಮಂಗಳವಾರ ತೆಹ್ರಾನ್‌ ಮೇಲೆ ಇಸ್ರೇಲ್‌ ಮಾಡಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಖಮೇನಿಯವರ ಆಪ್ತರಾಗಿದ್ದ ಸೇನಾ ಸಲಹೆಗಾರ ಜ। ಅಲಿ ಶಾದ್ಮಾನಿಯನ್ನು ಹತ್ಯೆಗೈಯ್ಯಲಾಗಿದೆ. ಇದನ್ನು ಇಸ್ರೇಲ್‌ ಸೇನೆ ಧೃಡಪಡಿಸಿದೆ. ಆದರೆ ಇರಾನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಭಾನುವಾರವಷ್ಟೇ, ಇರಾನ್‌ನ ಸೇನಾ ಗುಪ್ತಚರ ಮುಖ್ಯಸ್ಥ ಮೊಹಮ್ಮದ್‌ ಕಾಜೆಮಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ಮೂಲಕ, ‘ಖಮೇನಿ ಸಾವಿನೊಂದಿಗೇ ಈ ಸಂಘರ್ಷ ಅಂತ್ಯವಾಗುವುದು’ ಎಂದು ಘೋಷಿಸಿರುವ ಇಸ್ರೇಲ್‌, ಖಮೇನಿಯರ ಆತ್ಯಾಪ್ತರನ್ನೆಲ್ಲಾ ಒಬ್ಬರ ಮೇಲೊಬ್ಬರಂತೆ ಮುಗಿಸುತ್ತಿದೆ.

ಟೆಹ್ರಾನ್‌ ತೊರೆಯಿರಿ- ಟ್ರಂಪ್‌, ಇಸ್ರೇಲ್‌ ಕರೆ:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ ಅಣ್ವಸ್ತ್ರವನ್ನು ಹೊಂದಬಾರದು. ಎಲ್ಲರೂ ತಕ್ಷಣವೇ ತೆಹ್ರಾನ್‌ ತೊರೆಯಿರಿ’ ಎಂದು ಕರೆ ನೀಡಿದ್ದಾರೆ. ಅತ್ತ ಇಸ್ರೇಲ್‌ ಸೇನೆ ಕೂಡ, ತೆಹ್ರಾನ್‌ನಲ್ಲಿರುವ 3,33,000 ಜನರಿಗೆ ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಿದೆ. ಈ ಮೂಲಕ, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಪರೋಕ್ಷ ಸಂದೇಶ ನೀಡಿದೆ. ಗಾಜಾದಲ್ಲಿ ಕೂಡ ಇದೇ ರೀತಿ ಇಸ್ರೇಲ್‌, ನಗರವನ್ನು ತೆರವು ಮಾಡಿಸಿ ಹಮಾಸ್‌ ಉಗ್ರರ ಮೇಲೆ ದಾಳಿ ನಡೆಸಿತ್ತು.

ಟರ್ಕಿಯತ್ತ ಇರಾನಿಗಳ ಗುಳೆ:

ಇಸ್ರೇಲ್‌ನ ಸತತ ದಾಳಿಗಳಿಂದ ಇರಾನ್‌ ಜನರು ಕಂಗೆಟ್ಟಂತೆ ಕಾಣುತ್ತಿದ್ದು, ಟರ್ಕಿಯತ್ತ ತಮ್ಮ ಸಾಮಾನು ಸರಂಜಾಮಿನೊಂದಿಗೆ ವಲಸೆ ಹೋಗುತ್ತಿದ್ದಾರೆ. ಟರ್ಕಿಯಲ್ಲಿ ತಾತ್ಕಾಲಿಕ ಆಶ್ರಯ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ಕೋರಿದ್ದಾರೆ. ಇರಾನ್‌ನೊಂದಿಗೆ ಟರ್ಕಿ 569 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ