ಸಿನಿಮೀಯ ಶೈಲಿಯಲ್ಲಿ ₹1.40 ಕೋಟಿ ಜಪ್ತಿ!

| Published : Apr 14 2024, 01:56 AM IST / Updated: Apr 14 2024, 05:47 AM IST

ಸಾರಾಂಶ

ಮಾವಿನ ಹಣ್ಣಿನ ಚೀಲವೆಂದು ಯಾಮಾರಿಸಿ ಕಾರಿನಲ್ಲಿ ಹಣದ ಚೀಲದೊಂದಿಗೆ ಪರಾರಿ ಆದವರ ಬಗ್ಗೆ ಮಹಿಳಾ ಚುನಾವಣಾಧಿಕಾರಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪರಿಣಾಮ ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ₹1.40 ಕೋಟಿ ಜಪ್ತಿ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

 ಬೆಂಗಳೂರು : ಮಾವಿನ ಹಣ್ಣಿನ ಚೀಲವೆಂದು ಯಾಮಾರಿಸಿ ಕಾರಿನಲ್ಲಿ ಹಣದ ಚೀಲದೊಂದಿಗೆ ಪರಾರಿ ಆದವರ ಬಗ್ಗೆ ಮಹಿಳಾ ಚುನಾವಣಾಧಿಕಾರಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪರಿಣಾಮ ಸಿನಿಮೀಯ ರೀತಿಯಲ್ಲಿ ಕಾರನ್ನು ಅಡ್ಡಗಟ್ಟಿ ₹1.40 ಕೋಟಿ ಜಪ್ತಿ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಜಯನಗರದ 4ನೇ ಬ್ಲಾಕ್‌ನ ಗಣಪತಿ ದೇವಾಲಯದ ಬಳಿ ನಗದನ್ನು ಸಾಗಿಸುತ್ತಿದ್ದ ಎರಡು ಕಾರುಗಳನ್ನು ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದಾಗ ₹1.4 ಕೋಟಿ ನಗದು ಸಿಕ್ಕಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟು ಜಾರಿಯಲ್ಲಿ ಅಧಿಕಾರಿಗಳು ತೊಡಗಿದ್ದು, ಚುನಾವಣಾಧಿಕಾರಿ ನಿಖಿತಾ ಎಂಬುವವರು ಒಬ್ಬರೇ ರೌಂಡ್ಸ್‌ನಲ್ಲಿದ್ದರು. ಈ ವೇಳೆ ಅವರಿಗೆ ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದರು. ಈ ವೇಳೆ ದ್ವಿಚಕ್ರ ವಾಹನದಿಂದ ಐವರು ವ್ಯಕ್ತಿಗಳು ಕಾರಿಗೆ ಚೀಲದಲ್ಲಿದ್ದ ಹಣ ತುಂಬಿಸುತ್ತಿದ್ದರು. ಚೀಲ ತೋರಿಸುವಂತೆ ಹೇಳಿದರೂ ಕಿಡಿಗೇಡಿಗಳು ಮಾವಿನ ಹಣ್ಣಿನ ಚೀಲ ಎಂದು ಸುಳ್ಳು ಹೇಳಿ ಲಗುಬಗೆಯಿಂದ ಕಾರಿನಲ್ಲಿ ಹೊರಟು ಹೋದರು. ಒಬ್ಬರೇ ಇದ್ದ ಕಾರಣ ಮಹಿಳಾ ಅಧಿಕಾರಿ ಬಲವಂತವಾಗಿ ತಡೆಯಲು ಆಗಲಿಲ್ಲ, ಆದರೆ ಕಾರಿನ ಸಂಖ್ಯೆ ಗಮನಿಸಿದ ಅವರು ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರು ಸಾಗಿದ ಮಾರ್ಗ ಆಧರಿಸಿ ಇತರೆ ಅಧಿಕಾರಿಗಳು ಧಾವಿಸಿ ಬಂದು ಕಾರು ಅಡ್ಡಿ ಹಾಕಿ ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಕಾರಿನಲ್ಲಿದ್ದ ಹಣವನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಹಣದ ಪತ್ತೆ ಬಗ್ಗೆ ಆದಾಯ ತೆರಿಗೆ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಸರಿಯಾದ ದಾಖಲೆ ಇಲ್ಲದ ಕಾರಣ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಹಣವನ್ನು ಚೀಲದಲ್ಲಿ ತುಂಬಲಾಗಿತ್ತು. ಅಧಿಕಾರಿಗಳು ತಪಾಸಣೆಗೆ ಮುಂದಾದಾಗ ಮಾವಿನ ಹಣ್ಣಿನ ಬ್ಯಾಗ್ ಎಂದು ಸಬೂಬು ಹೇಳಿ ಕಾರನ್ನು ಲಾಕ್ ಮಾಡಲಾಯಿತು. ಅನುಮಾನಗೊಂಡ ಚುನಾಣಾಧಿಕಾರಿಗಳು ಕಾರಿನ ಗ್ಲಾಸ್ ಒಡೆದು ಪರಿಶೀಲನೆ ನಡೆಸಿದಾಗ ನಗದು ಪತ್ತೆಯಾಗಿದೆ. ಹಣ ಸಿಗುತ್ತಿದ್ದಂತೆ ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಚುನಾವಣಾಧಿಕಾರಿ ನಿಖಿತಾ ಮಾತನಾಡಿ, ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದ ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಈ ವೇಳೆ ರೌಂಡ್ಸ್‌ನಲ್ಲಿ ಒಬ್ಬಳೇ ಇದ್ದು, ಹಣದ ಚೀಲವನ್ನು ಕಾರಿನಲ್ಲಿ ತುಂಬಿಸಲಾಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಮಾವಿನ ಹಣ್ಣು ಇರುವುದಾಗಿ ಹೇಳಿ ಕಾರ್‌ನಲ್ಲಿ ತೆರಳಿದರು. ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಎಂದು ಹೇಳಿದರು.

ಕಾಂಗ್ರೆಸ್‌ ಹಣ: ತೇಜಸ್ವಿ ಸೂರ್ಯ

ಹಣ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ನಮಗೆ ಕೆಲವರು ಕರೆ ಮಾಡಿ ಕಾಂಗ್ರೆಸ್ಸಿನವರು ಕೆಂಪು ಬಣ್ಣದ ವೋಕ್ಸ್‌ವ್ಯಾಗನ್ ಕಾರು ಮತ್ತು ಬಿಳಿ ಬಣ್ಣದ ಇನ್ನೂ ನೋಂದಣಿ ಆಗದ ಬೆನ್ಜ್ ಕಾರಿನಲ್ಲಿ ಕೋಟ್ಯಂತರ ರುಪಾಯಿ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದರು. ಯಾರಿಂದ ಬಲವಂತವಾಗಿ ಕಾಂಗ್ರೆಸ್ಸಿನವರು ದುಡ್ಡು ತೆಗೆದುಕೊಂಡಿದ್ದಾರೋ ಅವರು ಕರೆ ಮಾಡಿ ಮಾಹಿತಿ ನೀಡಿದರು ಎಂದು ಹೇಳಿದರು.

ನಾವು ಕೂಡಲೇ ಚುನಾವಣಾಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, 10 ನಿಮಿಷದೊಳಗಾಗಿ ಅಧಿಕಾರಿಗಳು ಆ ದೊಡ್ಡ ಮೊತ್ತವನ್ನು ಜಪ್ತಿ ಮಾಡಿದ್ದಾರೆ. ಸುಮಾರು ಒಂದೂವರೆ ಕೋಟಿ ರೂಪಾಯಿ ಹಣ ಇತ್ತು ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಸಿಕ್ಕಿರುವ ಹಣಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ: ರಾಮಲಿಂಗಾರೆಡ್ಡಿ

 ಬೆಂಗಳೂರು :  ಜಯನಗರದಲ್ಲಿ ಸಿಕ್ಕ ಭಾರೀ ಪ್ರಮಾಣದ ಹಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಮಾನ ಮರ್ಯಾದೆ ಇಲ್ಲದವರು ಮಾತ್ರ ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಯನಗರದಲ್ಲಿ ಚುನಾವಣಾ ಸಿಬ್ಬಂದಿ, ಪೊಲೀಸರ ದಾಳಿ ವೇಳೆ ಸಿಕ್ಕ ₹1.40 ಕೋಟಿ ಹಣ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಜಯನಗರದಲ್ಲಿ ಸಿಕ್ಕ ಹಣಕ್ಕೂ ನಮಗೆ, ನಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಬಿಜೆಪಿ ನಾಯಕರು ವಿನಾಕಾರಣ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಮಾನ ಮರ್ಯಾದೆ ಇಲ್ಲದವರು ಮಾತ್ರ ಈ ರೀತಿ ಆರೋಪ ಮಾಡುತ್ತಾರೆ. ಹಣ ಸಿಕ್ಕ ಜಾಗದಲ್ಲಿ ಬಿಜೆಪಿಯ ಮಾಜಿ ಕಾರ್ಪೋರೇಟರ್‌ ಕೂಡ ಇದ್ದರು. ಹೀಗಾಗಿ ಆ ಹಣ ಬಿಜೆಪಿಯವರದ್ದು ಎಂದು ನಾನೂ ಆರೋಪ ಮಾಡುತ್ತೇನೆ ಎಂದರು.

ಕಾಂಗ್ರೆಸ್‌ ಮೇಲೆ ಆರೋಪಿಸುತ್ತಿರುವುದನ್ನು ನೋಡಿದರೆ ಹಣ ಬಿಜೆಪಿಯವರದ್ದೇ ಇರಬೇಕು. ಹಣ ಸಿಕ್ಕ ಕಾರಿನ ನೋಂದಣಿ ಸಂಖ್ಯೆಯಿದ್ದು, ಅದರ ಆಧಾರದಲ್ಲಿ ಪೊಲೀಸರು ತನಿಖೆ ಮಾಡಲಿ. ಆಗ ಹಣ ಯಾರದ್ದು ಎಂದು ತಿಳಿಯುತ್ತದೆ. ಹಣದ ಮೂಲದ ಕುರಿತು ತನಿಖೆ ನಡೆಸುವಂತೆ ನಾನೂ ಕೂಡ ಚುನಾವಣಾ ಆಯೋಗಕ್ಕೆ ಒತ್ತಾಯಿಸುತ್ತೇನೆ ಎಂದು ಹೇಳಿದರು.