ಮದ್ಯದ ಅಮಲಿನಲ್ಲಿ ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು: ಮದ್ಯದ ಅಮಲಿನಲ್ಲಿ ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಲೆಕ್ಟ್ರಾನಿಕ್‌ಸಿಟಿ ನಿವಾಸಿ ಮುಖೇಶ್‌(22) ಮೃತ ಸವಾರ. ಹಾರ್ಡ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುವ ಈತ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ನೈಸ್‌ ರಸ್ತೆಯ ಹೊಸಕೆರೆಹಳ್ಳಿ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಸೋಂಪುರ ಟೋಲ್‌ ಬಳಿ ಈ ದುರ್ಘಟನೆ ನಡೆದಿದೆ.

ಮೃತ ಸವಾರ ಮುಖೇಶ್‌ ರಾಜಸ್ಥಾನ ಮೂಲದವನು. ಕೆಲ ವರ್ಷಗಳಿಂದ ಕುಟುಂಬದೊಂದಿಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನೆಲೆಸಿದ್ದ. ಶುಕ್ರವಾರ ಸ್ನೇಹಿತರನ್ನು ಭೇಟಿಯಾಗಲು ಡ್ಯೂಕ್‌ ದ್ವಿಚಕ್ರ ವಾಹನದಲ್ಲಿ ನಗರಕ್ಕೆ ಬಂದಿದ್ದ. ಇಲ್ಲಿ ಸ್ನೇಹಿತರ ಜತೆಗೆ ಮದ್ಯದ ಪಾರ್ಟಿ ಮಾಡಿಕೊಂಡು ಬಳಿಕ ಮನೆಗೆ ತೆರಳುವಾಗ ಸೋಂಪುರ ಟೋಲ್‌ ಬಳಿ ಅತಿವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪಾನಮತ್ತ ಚಾಲನೆ ಹಾಗೂ ಅತಿವೇಗವೇ ಸ್ವಯಂ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.