ಸಾರಾಂಶ
ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವವಿವಾಹಿತ ದಂಪತಿ ನಡುವೆ ನಡೆದ ಜಗಳದ ವೇಳೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅನ್ನಸಂದ್ರಪಾಳ್ಯದ ನಿವಾಸಿ ಗಿರಿಜಾ(30) ಕೊಲೆಯಾದವರು. ಈ ಸಂಬಂಧ ಪತಿ ನವೀನ್ ಕುಮಾರ್(31) ಎಂಬಾತನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಡಿಸಿದ್ದಾರೆ.
ರಾಮನಗರ ತಾಲೂಕಿ ಮಾಯಗಾನಹಳ್ಳಿ ಮೂಲದ ನವೀನ್ ಕುಮಾರ್ ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಅಂಗಡಿ ಮತ್ತು ಬೇಕರಿಗಳಿಗೆ ಬ್ರೆಡ್ ಪೂರೈಸುವ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದ. ಗಿರಿಜಾ ಪೋಷಕರು ಭಟ್ಕಳ ಮೂಲದವರು. ಈ ಹಿಂದೆ ಯಶವಂತಪುರದಲ್ಲಿ ನೆಲೆಸಿದ್ದರು. ಈ ವೇಳೆ ನವೀನ್ ಕುಮಾರ್‌ಗೆ ಪರಿಚಿತರಾಗಿದ್ದರು. ಈ ಪರಿಚಯದ ಮೇಲೆ 8 ತಿಂಗಳ ಹಿಂದೆಯಷ್ಟೇ ಎರಡೂ ಕುಟುಂಬಗಳು ಮಾತುಕತೆ ನಡೆಸಿ ನವೀನ್ ಮತ್ತು ಗಿರಿಜಾಗೆ ಮದುವೆ ಮಾಡಿಸಿದ್ದರು.
ಮಗು ಮಾಡಿಕೊಳ್ಳುವ ವಿಚಾರಕ್ಕೆ ಮನಸ್ತಾಪ:
ಮದುವೆ ಬಳಿಕ ದಂಪತಿ ಅನ್ನಸಂದ್ರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗಿರಿಜಾ ಗೃಹಿಣಿಯಾಗಿದ್ದರು. ಇತ್ತೀಚೆಗೆ ಗಿರಿಜಾಗೆ ಗರ್ಭಪಾತವಾಗಿತ್ತು. ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಅಂದರೆ, ನವೀನ್ ಮತ್ತೆ ಮಗು ಮಾಡಿಕೊಳ್ಳೋಣ ಎಂದರೆ, ಗಿರಿಜಾ ತಕ್ಷಣಕ್ಕೆ ಮಗು ಬೇಡ ಎಂದು ಹೇಳುತ್ತಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.ಜಗಳ ತೆಗೆದು ಕತ್ತು ಹಿಸುಕಿ ಕೊಲೆಗೈದ:
ಶುಕ್ರವಾರ ರಾತ್ರಿ ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ನವೀನ್, ಗಿರಿಜಾಳ ಕುತ್ತಿಗೆ ಹಿಸುಕಿ ಕೊಲೆಗೈದು ಪರಾರಿಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳೀಯರು ನೀಡಿದ ಜಗಳದ ಮಾಹಿತಿ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ನವೀನ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.